ಆರ್‌ಎಸ್‌ಬಿ ವಧು-ವರ ಸಮಾವೇಶಕ್ಕೆ ಚಾಲನೆ
ಉಡುಪಿ, ಜ.27: ರಾಜಾಪುರ ಸಾರಸ್ವತ ಸಂಘ ಮಣಿಪಾಲ, ರಾಜಾಪುರ ಸಾರಸ್ವತ ಸಮಾಜ ಬೆಂಗಳೂರು ಇದರ ಅಂಗ ಸಂಸ್ಥೆ ಅನುಬಂಧ ವೇದಿಕೆ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜದ ವಧು-ವರ ಸಮಾವೇಶವನ್ನು ಶನಿವಾರ ಮಣಿಪಾಲ ಆರ್‌ಎಸ್‌ಬಿ ಸಭಾಭವನ ದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಣಿಪಾಲ ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷ ಶ್ರೀಶ ನಾಯಕ್ ಪೆರ್ಣಂಕಿಲ ಮಾತನಾಡಿ, ಇಂದಿನ ಯುವ ಸಮುದಾಯ ಕೇವಲ ಶಿಕ್ಷಣ, ಉದ್ಯೋಗ, ಅಂತಸ್ತಿಗೆ ಸೀಮಿತವಾಗಿದ್ದು, ವೈವಾಕ ನೆಂಟಸ್ತಿ ಕೆಯ ಸಂಬಂಧವನ್ನು ಬೆಳೆಸುವಲ್ಲಿ ಕುಟುಂಬದ ಹಿರಿಯರಿಗೆ ತ್ರಾಸದಾಯಕವಾಗಿದೆ. ಇದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಸಮಾವೇಶದಲ್ಲಿ 200ಕ್ಕೂ ಅಧಿಕ ನೋಂದಣಿಯೊಂದಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಈ ಕಾರ್ಯಕ್ರಮ ವ್ಯವಸ್ಥೆ ಮಾಡುವ ಬಗ್ಗೆ ಆಲೋಚನೆ ಇದ್ದು, ಭಾಗವಹಿಸಿದವರಲ್ಲಿ ವಿವಾಹ ವಂಚಿತ ವರರ ಸಂಖ್ಯೆ ಶೇ.70ರಷ್ಟು ಇದ್ದು ವಧುಗಳ ಪ್ರಮಾಣ ಕೇವಲ ಶೇ.30 ಮಾತ್ರ ಇದೆ ಎಂದು ಅವರು ತಿಳಿಸಿದರು.
ಅನುಬಂಧ ವೇದಿಕೆಯ ಮುಖ್ಯ ಸಂಯೋಜಕ ಮೋಹನದಾಸ್ ಪ್ರಭು, ಬೆಂಗಳೂರು ರಾಜಾಪುರ ಸಾರಸ್ವತ ಸಮಾಜದ ಅಧ್ಯಕ್ಷ ನಾಗೇಂದ್ರ ಕಾಮತ್, ಕಾರ್ಯದರ್ಶಿ ರಮೇಶ್ ನಾಯಕ್ ಮಾತನಾಡಿದರು. ಸಂಘದ ಗೌರವ ಕಾರ್ಯದರ್ಶಿ ನಿತ್ಯಾನಂದ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘದ ಉಪಾಧ್ಯಕ್ಷ ಚೇತನ್ ನಾಯಕ್, ಅನುಬಂಧ ವೇದಿಕೆಯ ಸಂಚಾಲಕ ಮಹಾಲಕ್ಷ್ಮೀ ರಾಮಕೃಷ್ಣ ಧೋಂಡ್ಯೆ, ಕಲಾ ವತಿ, ಸುಮತಿ ಕಾಮತ್,ಮಣಿಪಾಲ ಆರ್‌ಎಸ್‌ಬಿ ಮಹಿಳಾ ವೇದಿಕೆಯ ಅಧ್ಯಕ್ಷೆ ಗೀತಾ ನಾಯಕ್, ಕಾರ್ಯದರ್ಶಿ ನಯನಾ ನಾಯಕ್, ಸಮಾಜದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು. ರಂಜಿತ್ ಕೆ.ಎಸ್.ಪುನಾರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಉಡುಪಿ, ದಕ್ಷಿಣಕನ್ನಡ, ಮುಂಬೈ, ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಆಗಮಿಸಿದ ಸಮಾಜ ಬಾಂಧವರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.