×
Ad

ಉಡುಪಿ | ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗೆ ಆಗ್ರಹ : ಕೊರಗ ಸಂಘಟನೆಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ

Update: 2025-12-15 19:43 IST

ಉಡುಪಿ, ಡಿ.15: ಕೊರಗ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಕಲ್ಪಿಸುವಂತೆ ಆಗ್ರಹಿಸಿ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಕೇರಳ ಇದರ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಅನಿಧಿಷ್ಠಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಸೋಮವಾರ ಆರಂಭಗೊಂಡಿತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಸಂಯೋಜಕ ಕೆ.ಪುತ್ರನ್ ಹೆಬ್ರಿ, ಕೊರಗ ಸಮುದಾಯದಲ್ಲಿ ಈಗ ಸುಮಾರು ಪದವಿ, ಸ್ನಾತಕೋತ್ತರ ಪದವಿ ಪಡೆದ ಒಂದು ಸಾವಿರದಷ್ಟು ಜನರು ಉದ್ಯೋಗ ಇಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಇದ್ದರೂ ಇತರ ಬಲಾಢ್ಯ ಸಮುದಾಯಗಳ ಎದುರು ನಮ್ಮ ಸಮುದಾಯದ ಯುವ ಜನತೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಆ ನಿಟ್ಟಿನಲ್ಲಿ ನಮ್ಮ ಯುವಜನತೆಗೆ ನೇರನೇಮಕಾತಿ ಮೂಲಕ ಸರಕಾರಿ ಉದ್ಯೋಗ ಕಲ್ಪಿಸಬೇಕೆಂದು ನಾವು ನಿರಂತರ ಹೋರಾಟ ಮಾಡುತ್ತಿದ್ದೇವೆ ಎಂದರು.

ನಮ್ಮ ಸಮುದಾಯದ ಬಹುತೇಕ ವಿದ್ಯಾವಂತ ವಿದ್ಯಾರ್ಥಿಗಳು ಪುರಸಭೆಗಳಲ್ಲಿ ಪೌರಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಸರಕಾರ ಆ ಕೆಲಸಕ್ಕೆ ಮಾತ್ರ ಹೆಚ್ಚಿನ ಒತ್ತು ನೀಡುತ್ತಿದೆ. ಆದರೆ ನಮ್ಮ ಯುವಜನತೆಗೆ ಬೇರೆ ಇಲಾಖೆಯಲ್ಲೂ ಉದ್ಯೋಗ ಕೊಡಿಸಬೇಕು. ಈ ಸಂಬಂಧ ಮುಖ್ಯಮಂತ್ರಿ ನೀಡಿದ ಭರವಸೆ ಇನ್ನೂ ಈಡೇರಿಲ್ಲ. ಹಾಗಾಗಿ ಅಧಿವೇಶನ ಸಂದರ್ಭ ದಲ್ಲಿ ಮತ್ತೆ ಹೋರಾಟ ಮಾಡುತ್ತಿದ್ದೇವೆ. ಈ ಕುರಿತು ಸ್ಪಷ್ಟ ಆದೇಶ ಮಾಡುವ ವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆಂದು ಅವರು ತಿಳಿಸಿದರು.

ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ಮಾತನಾಡಿ, ಈ ಹಿಂದೆ ಮುಖ್ಯ ಮಂತ್ರಿಯನ್ನು ಭೇಟಿ ಮಾಡಿ ಈ ವಿಷಯವನ್ನು ಚರ್ಚೆಸಿದ್ದು, 2024-25ನೇ ಸಾಲಿನ ಬಜೆಟ್ ಮಂಡಿಸುವಾಗ ಅರಣ್ಯ ಬುಡಕಟ್ಟು ಸಮುದಾಯಗಳ ಅರ್ಹ ವಿದ್ಯಾವಂತ ನಿರುದ್ಯೋಗಿಗಳನ್ನು ಕರ್ನಾಟಕ ಸರಕಾರದ ಸಿವಿಲ್ ಸೇವೆಗಳಲ್ಲಿ ನೇರ ನೇಮಕಾತಿ ಮಾಡಿ ಉದ್ಯೋಗ ಭದ್ರತೆ ಒದಗಿಸುವ ಭರವಸೆ ನೀಡಿದ್ದರು. ಆದರೆ ಈವರೆಗೆ ಯಾವುದೇ ಪ್ರಗತಿಯಾಗಿಲ್ಲ ಎಂದು ದೂರಿದರು.

ಮುಂದಿನ ಎರಡು ತಿಂಗಳಲ್ಲಿ ಬರುವ ವರ್ಷದ ಬಜೆಟ್ ಮಂಡನೆ ನಡೆಯಲಿದೆ. ಆದುದರಿಂದ ಸರಕಾರ ತುರ್ತಾಗಿ ಕೊರಗ ಮತ್ತು ಜೇನು ಕುರುಬ ಸಮುದಾಯದ ಅರ್ಹ ನಿರುದ್ಯೋಗಿ ಯುವಜನತೆಯನ್ನು ಪಿವಿಟಿಜಿ ಸಮುದಾಯದ ಗುಣಲಕ್ಷಣಗಳ ಆಧಾರದಲ್ಲಿ ನೇರ ನೇಮಕಾತಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಧರಣಿಯಲ್ಲಿ ಒಕ್ಕೂಟದ ಮಾಜಿ ಅಧ್ಯಕ್ಷ ಬೊಗ್ರ ಕೊಕ್ಕರ್ಣೆ, ಮುಖಂಡ ರಾದ ಶೇಖರ್ ಕೆಂಜಾಲು, ಲೀಲಾ ಬಂಡಿಮಠ, ಚಂದ್ರಾವತಿ, ಶಾಂತಾ, ಅಮಿತಾ, ಸುಮತಿ ಪಿಲಾರುಖಾನ್ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News