ಮತದಾರರ ಪಟ್ಟಿಯಲ್ಲಿದ್ದ ವ್ಯಕ್ತಿಯ ಹೆಸರಿನಲ್ಲಿ ಬೆರೆಯವರಿಂದ ಮತದಾನ!

Update: 2024-04-26 15:44 GMT

ಉಡುಪಿ, ಎ.26: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 80ನೇ ಬಡಗಬೆಟ್ಟು ಗ್ರಾಪಂನ ರಾಜೀವನಗರ ಸಂಯುಕ್ತ ಪ್ರೌಢಶಾಲೆಯ ಮತಗಟ್ಟೆಯಲ್ಲಿ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಬೇರೆ ವ್ಯಕ್ತಿ ಆಗಮಿಸಿ ಮತದಾನ ಮಾಡಿದ್ದು, ಇಲ್ಲಿ ನಕಲಿ ಮತದಾನ ನಡೆದಿರುವ ಆರೋಪಗಳು ಕೇಳಿಬಂದಿವೆ.

ಅರ್ಬಿಯ ಕೃಷ್ಣ ನಾಯ್ಕ್ ಎಂಬವರು ಮತದಾನ ಮಾಡಲು ಮತಗಟ್ಟೆಗೆ ಆಗಮಿಸಿದಾಗ ತಮ್ಮ ಹೆಸರಿನಲ್ಲಿ ಆಗಲೇ ಮತದಾನ ಮಾಡಿರುವುದಾಗಿ ಮತ ಗಟ್ಟೆ ಅಧಿಕಾರಿಗಳು ತಿಳಿಸಿದರು. ಆದರೆ ನಾನು ಮತದಾನ ಮಾಡಿಲ್ಲ ಎಂದು ಕೃಷ್ಣ ನಾಯಕ್ ವಾದ ಮಂಡಿಸಿದರು. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಯಿತು.

ಸ್ಥಳೀಯ ಗ್ರಾಪಂ ಸದಸ್ಯ ಸಂತೋಷ್ ಬೈರಂಪಳ್ಳಿ ಈ ವಿಚಾರದಲ್ಲಿ ಸಂಬಂಧಪಟ್ಟ ಮತಗಟ್ಟೆಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಕೃಷ್ಣ ನಾಯಕ್ ಹೆಸರಿನಲ್ಲಿ ಯಾರೋ ನಕಲಿ ಮತದಾನ ಮಾಡಿದ್ದಾರೆ. ಆದುದ ರಿಂದ ಈ ಮತಗಟ್ಟೆಯಲ್ಲಿ ಮರು ಮತದಾನ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಮುಖ ನೋಡದೆ ಒಬ್ಬರ ಹೆಸರಿನಲ್ಲಿ ಇನ್ನೊಬ್ಬರಿಗೆ ಮತದಾನ ಮಾಡಲು ಹೇಗೆ ಅವಕಾಶ ಮಾಡಿಕೊಟ್ಟಿದ್ದೀರಿ ಎಂದು ಅವರು ಅಧಿಕಾರಿಯನ್ನು ಪ್ರಶ್ನಿಸಿದರು. ಈ ಕುರಿತು ತಮ್ಮಿಂದ ಆಗಿರುವ ತಪ್ಪನ್ನು ಅಧಿಕಾರಿಗಳು ಒಪ್ಪಿ ಕೊಂಡರು. ಈ ಬಗ್ಗೆ ಸರಿಪಡಿಸುವುದಾಗಿ ಭರವಸೆ ನೀಡಿದರು. ಬಳಿಕ ಸ್ಥಳಕ್ಕೆ ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್, ಸೆಕ್ಟರ್ ಆಫೀಸರ್ ನಿಧೀಶ್ ಆಗಮಿಸಿ ಮಾತುಕತೆ ನಡೆಸಿದರು.

ಕೃಷ್ಣ ನಾಯಕ್ ಹೆಸರಿನಲ್ಲಿ ಮತದಾನ ಮಾಡಿರುವವರನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ ಕೃಷ್ಣ ನಾಯಕ್ ಅವರಿಗೆ ಟೆಂಡರ್ ಮತದಾನಕ್ಕೆ ಅವಕಾಶ ನೀಡ ಲಾಗಿತ್ತು. ಆದರೆ ಅವರು ಸಂಜೆ ಆರು ಗಂಟೆಯಾದರೂ ಮತಗಟ್ಟೆಗೆ ಆಗಮಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಅವರನ್ನು ಸಂಪರ್ಕಿಸಿದಾಗ, ಇಲ್ಲಿ ನಕಲಿ ಮತದಾನ ಆಗಿಲ್ಲ. ಈ ಮತಗಟ್ಟೆಯಲ್ಲಿ ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳಿದ್ದು, ಈ ಗೊಂದಲದಿಂದ ಸಮಸ್ಯೆ ಆಗಿದೆ. ಇವರ ಸ್ಲೀಪ್ ಅದಲು ಬದಲು ಆಗಿರಬಹುದು. ಆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮೊದಲು ಮತದಾನ ಮಾಡಿದ ವ್ಯಕ್ತಿಯನ್ನು ಅಧಿಕಾರಿ ಗಳು ಹುಡುಕುತ್ತಿದ್ದಾರೆ. ಮುಂದೆ ಆ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಮತದಾನ ಮಾಡಿದ ವ್ಯಕ್ತಿ ಕೊನೆಗೂ ಪತ್ತೆ!

ಯಾರದ್ದೊ ಹೆಸರಿನಲ್ಲಿ ಮತದಾನ ಮಾಡಿದ ವ್ಯಕ್ತಿಯನ್ನು ಕೊನೆಗೂ ಪತ್ತೆ ಹಚ್ಚುವಲ್ಲಿ ಅಧಿಕಾರಿಗಳ ತಂಡ ಯಶಸ್ವಿಯಾಗಿದೆ.

ರಾಜೀವನಗರ ಸಂಯುಕ್ತ ಪ್ರೌಢಶಾಲೆಯಲ್ಲಿ 38, 39, 40, 41 ಒಟ್ಟು ಮತಗಟ್ಟೆಗಳಿವೆ. 40ನೇ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿದ್ದ ಕೃಷ್ಣ ನಾಯ್ಕ್ ಎಂಬವರು 38ನೇ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿದ್ದ ಕೃಷ್ಣ ನಾಯ್ಕ್ ಎಂಬವರ ಹೆಸರಿನಲ್ಲಿ ಮತದಾನ ಮಾಡಿರುವುದೇ ಈ ಎಲ್ಲ ಗೊಂದಲಗಳಿಗೆ ಕಾರಣವಾಗಿದೆ. ಅಲ್ಲದೆ ಇವರಿಬ್ಬರ ತಂದೆ ಹೆಸರು(ವಾಸು ನಾಯ್ಕ್) ಕೂಡ ಒಂದೇ ಆಗಿದೆ. ಮತಗಟ್ಟೆಗೆ ಅಳವಡಿಸಲಾದ ಕ್ಯಾಮೆರಾದಿಂದ ವೆಬ್ ಕಾಸ್ಟಿಂಗ್ ಮೂಲಕ ಆ ವ್ಯಕ್ತಿಯನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.

‘ಮತದಾನ ಮಾಡಲು ಬರುವಾಗ ಸ್ವಲ್ಪ ತಡವಾಗಿತ್ತು. ಆದರೂ ಮತದಾನ ಮಾಡಲು ಒಳಗೆ ಹೋಗಿ ಸ್ಲೀಪ್ ಕೊಟ್ಟು, ಎಪಿಕ್ ಕಾರ್ಡ್ ತೋರಿಸಿದೆ. ಆಗ ಅಧಿಕಾರಿಗಳು ಈ ಹೆಸರಿನಲ್ಲಿ ಮತದಾನ ಮಾಡಿ ಆಗಿದೆ ಎಂದು ಹೇಳಿದರು. ಅದಕ್ಕೆ ನಾನು ಮತದಾನ ಮಾಡಿಲ್ಲ ಎಂದು ತಿಳಿಸಿದೆ. ಅದಕ್ಕೆ ಟೆಂಡರ್ ಮತ ಹಾಕುವಂತೆ ಅಧಿಕಾರಿಗಳು ತಿಳಿಸಿದರು. ನನ್ನ ಹೆಸರಿನಲ್ಲಿ ಯಾರು ಹಾಕಿದ್ದಾರೆ ಎಂದು ಗೊತ್ತಿಲ್ಲ’

-ಕೃಷ್ಣ ನಾಯ್ಕ್, ಮತದಾರ

‘ಒಳ್ಳೆಯ ವಾತಾವರಣ ಇದೆ. ತುಂಬಾ ಚೆನ್ನಾಗಿ ಪ್ರಚಾರ ಕಾರ್ಯ ನಡೆಸಿದ್ದೇನೆ. ಕಾರ್ಯಕರ್ತರ ಮನೆ ಮನೆಗೆ ಹೋಗಿದ್ದೇನೆ. ಖುದ್ದಾಗಿ ಮತದಾರರನ್ನು ಭೇಟಿಯಾಗಿದ್ದೇನೆ. ನಾನು ಮಾಡಿದ ಕೆಲಸ ಮತ್ತು ಸರಕಾರದ ಗ್ಯಾರಂಟಿ ಯೋಜನೆಗಳು ನೆರವಾಗಲಿವೆ. ಎಷ್ಟು ಲೀಡ್ ಬರಬಹುದು ಎಂಬುದು ಮತ ಎಣಿಕೆಯ ಬಳಿಕ ಹೇಳಬಹುದು’

-ಕೆ.ಜಯಪ್ರಕಾಶ್ ಹೆಗ್ಡೆ, ಕಾಂಗ್ರೆಸ್ ಅಭ್ಯರ್ಥಿ

‘ಎಂಟು ವಿಧಾನಸಭಾ ಕ್ಷೇತ್ರದ ತಿರುಗಾಟ ಮಾಡಿದ್ದೇನೆ. ಇಡೀ ಲೋಕಸಭಾ ಕ್ಷೇತ್ರದಲ್ಲಿ ಜನ ಉತ್ಸಾಹದಲ್ಲಿ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ರಾಷ್ಟ್ರಕ್ಜಾಗಿ, ರಾಷ್ಟ್ರದ ಭದ್ರತೆಗಾಗಿ, ರಾಷ್ಟ್ರದ ಐಕ್ಯತೆಗಾಗಿ ರಾಷ್ಟ್ರದಲ್ಲಿ ಶಾಂತಿ ನೆಮ್ಮದಿಗಾಗಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಬಿಜೆಪಿ ಅಭ್ಯರ್ಥಿಯಾದ ನಾನು ಸಚಿವನಾಗಿ ಶಾಸಕನಾಗಿ ಮಾಡಿರುವ ಕೆಲಸವನ್ನು ಜನ ಗಮನಿಸಿದ್ದಾರೆ. ನಿಶ್ಚಿತವಾಗಿ ಜಯ ನನ್ನದಾಗುತ್ತದೆ ಮತ್ತು ಬಿಜೆಪಿ ಗೆಲ್ಲುತ್ತದೆ. ಆ ಮೂಲಕ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ’

-ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಅಭ್ಯರ್ಥಿ

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News