×
Ad

ಉಡುಪಿ: ಅಗ್ನಿಶಾಮಕ ಠಾಣೆಗಳಲ್ಲಿ ಜಲ ವಾಹನಗಳ ಕೊರತೆ

Update: 2024-07-11 18:25 IST

ಉಡುಪಿ: ಜಿಲ್ಲೆಯ 5 ಅಗ್ನಿಶಾಮಕ ದಳ ಠಾಣೆಗಳಲ್ಲಿರುವ ಒಟ್ಟು ಒಂಭತ್ತು ಜಲ ವಾಹನಗಳ ಪೈಕಿ ಕೇವಲ ನಾಲ್ಕು ಜಲ ವಾಹನಗಳು ಮಾತ್ರ ಸುಸ್ಥಿತಿಯಲ್ಲಿವೆ. ಉಳಿದವು 15ವರ್ಷಕ್ಕಿಂತ ಮೇಲ್ಪಟ್ಟ ಹಳೆಯ ವಾಹನ ಆಗಿರುವು‌ ದರಿಂದ ಅವು ರಸ್ತೆಗೆ ಇಳಿಯುವಂತಿಲ್ಲ. ಹೀಗಾಗಿ ಜಲ ವಾಹನಗಳ ಕೊರತೆಯಿಂದ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಅಗ್ನಿ ಅನಾಹುತ ಗಳನ್ನು ಎದುರಿಸಲು ಅಗ್ನಿಶಾಮಕ ದಳಕ್ಕೆ ತೊಡಕಾಗುತ್ತಿದೆ.

ಉಡುಪಿ ಜಿಲ್ಲಾ ಕೇಂದ್ರದಲ್ಲಿರುವ ಅಗ್ನಿಶಾಮಕ ದಳವು 1976ರಲ್ಲಿ ಸ್ಥಾಪನೆಗೊಂಡರೆ, ಕಾರ್ಕಳ, ಕುಂದಾಪುರ 1992ರಲ್ಲಿ ಮಲ್ಪೆ 2010ರಲ್ಲಿ ಮತ್ತು ಬೈಂದೂರಿನಲ್ಲಿ 2020ರಲ್ಲಿ ಅಗ್ನಿಶಾಮಕ ಠಾಣೆಗಳು ಸ್ಥಾಪನೆಗೊಂಡಿವೆ. ಸದ್ಯ ಉಡುಪಿಯಲ್ಲಿ ಮೂರು, ಕುಂದಾಪುರ ಮತ್ತು ಕಾರ್ಕಳದಲ್ಲಿ ತಲಾ ಎರಡು, ಬೈಂದೂರು ಮತ್ತು ಮಲ್ಪೆಯಲ್ಲಿ ತಲಾ ಒಂದು ಜಲ ವಾಹನಗಳಿವೆ.

ಜಲ ವಾಹನಗಳಿಗೆ ಬೇಡಿಕೆ: 15 ವರ್ಷಗಳಿಗಿಂತಲೂ ಹಳೆಯ ವಾಹನಗಳನ್ನು ರಸ್ತೆಗೆ ಇಳಿಸುವಂತಿಲ್ಲ ಎಂಬ ಕೇಂದ್ರ ಸರಕಾರದ ಮಾರ್ಗಸೂಚಿಯಿಂದಾಗಿ ಜಿಲ್ಲೆಯ ಅಗ್ನಿಶಾಮಕ ಠಾಣೆಗಳಲ್ಲಿರುವ ಬಹುತೇಕ ವಾಹನಗಳು ಠಾಣೆ ಬಿಟ್ಟು ಹೊರಬರುವಂತಿಲ್ಲ. ಯಾಕೆಂದರೆ ಇಲ್ಲಿರುವ ಒಟ್ಟು 9 ವಾಹನಗಳ ಪೈಕಿ ಏಳು ಜಲ ವಾಹನಗಳು 15ವರ್ಷಗಳಿಂತ ಹಳೆಯದಾಗಿದೆ.

ಸದ್ಯ ಉಡುಪಿ ಠಾಣೆಯ 2, ಕಾರ್ಕಳದ 2, ಕುಂದಾಪುರದ 2, ಮಲ್ಪೆ ಠಾಣೆಯ 1 ಜಲ ವಾಹನಗಳು 15ವರ್ಷಗಳಿಂತ ಹಳೆಯದಾಗಿದೆ. ಆದುದರಿಂದ ಈ ಯಾವುದೇ ವಾಹನಗಳನ್ನು ಬಳಕೆ ಮಾಡದ ಸ್ಥಿತಿ ಅಗ್ನಿಶಾಮಕ ದಳದವರಿಗೆ ಎದುರಾಗಿದೆ. ಇದರಿಂದ ಜಿಲ್ಲೆಯಲ್ಲಿ ಜಲ ವಾಹನಗಳ ಕೊರತೆ ಉಂಟಾಗಿದೆ.

ಸದ್ಯ ಕುಂದಾಪುರ ಹಾಗೂ ಕಾರ್ಕಳಕ್ಕೆ ಮಂಗಳೂರಿನಿಂದ ತರಿಸಲಾದ 2 ಜಲ ವಾಹನಗಳನ್ನು ನೀಡಲಾಗಿದೆ. ಮಲ್ಲೆಗೆ ಒಂದು ಜಲ ವಾಹನ ಮಂಜೂರಾಗಿದ್ದು, ಸದ್ಯದಲ್ಲೇ ಅದು ಠಾಣೆಗೆ ಬರಲಿದೆ. ಉಡುಪಿಯಲ್ಲಿ ಸದ್ಯ ಒಂದೇ ಜಲ ವಾಹನ ಗಳಿದ್ದು, ಎಲ್ಲದಕ್ಕೂ ಈ ಒಂದೇ ವಾಹನವನ್ನು ಬಳಸಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೊಸ ಠಾಣೆಗಳು ಮಂಜೂರು: ಉಡುಪಿ ಜಿಲ್ಲೆಯಲ್ಲಿ ಸದ್ಯ ಐದು ಅಗ್ನಿಶಾಮಕ ದಳ ಠಾಣೆಗಳಿದ್ದು ಹೊಸದಾಗಿ ಸ್ಥಾಪನೆ ಗೊಂಡ ಕಾಪು, ಬ್ರಹ್ಮಾವರ, ಹೆಬ್ರಿ ತಾಲೂಕುಗಳಿಗೆ ಒಟ್ಟು ಮೂರು ಹೊಸ ಠಾಣೆಗಳು ಮಂಜೂರಾಗಿವೆ.

ಕಾಪು ತಾಲೂಕಿನ ಪಡುಬಿದ್ರೆಯಲ್ಲಿ ಠಾಣೆ ನಿರ್ಮಿಸಲು ಈಗಾಗಲೇ 1.30 ಎಕರೆ ಜಾಗ ಗುರುತಿಸಲಾಗಿದೆ. ಅದೇ ರೀತಿ ಹೆಬ್ರಿ ಪೊಲೀಸ್ ಠಾಣೆಯ ಸಮೀಪದಲ್ಲೇ ಇರುವ 1.82 ಎಕರೆ ಜಾಗವನ್ನು ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಗುರುತಿಸ ಲಾಗಿದೆ. ಬ್ರಹ್ಮಾವರ ತಾಲೂಕು ಕಚೇರಿ ಸಮೀಪದಲ್ಲಿನ 2 ಎಕರೆ ಜಾಗ ಠಾಣೆ ನಿರ್ಮಾಣಕ್ಕೆ ಮಂಜೂರಾಗಿದ್ದು, ಈ ಕುರಿತ ಪ್ರಕ್ರಿಯೆ ಜಿಲ್ಲಾಡಳಿತದಿಂದ ನಡೆಯುತ್ತಿದೆ.

ಈ 3 ಠಾಣೆಗಳ ಕಟ್ಟಡ ನಿರ್ಮಾಣಕ್ಕಾಗಿ ಸರಕಾರ ತಲಾ 3 ಕೋಟಿ ರೂ. ಮಂಜೂರು ಮಾಡಿದೆ. ಸದ್ಯದಲ್ಲೇ ಇದರ ಕಾಮಗಾರಿಗಳು ನಡೆಯಲಿವೆ. ಈ ಮಧ್ಯೆ ಮಣಿಪಾಲದಲ್ಲೂ ಠಾಣೆ ಸ್ಥಾಪನೆಗೆ ಬೇಡಿಕೆ ಇದ್ದು ಇದಕ್ಕೆ ಈಗಾಗಲೇ ಒಂದು ಎಕರೆ ಜಾಗವನ್ನು ಗುರುತಿಸಲಾಗಿ ದೆ. ಆದರೆ ಠಾಣೆ ಮಂಜೂರಾತಿಯಾಗಿಲ್ಲ. ಈ ಕುರಿತು ಸರಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಶೇ.30ರಷ್ಟು ಸಿಬ್ಬಂದಿ ಕೊರತೆ: ಒಂದು ಠಾಣೆಯಲ್ಲಿ ಒಂದು ಅಗ್ನಿ ಶಾಮಕ ಠಾಣಾಧಿಕಾರಿ, 2 ಸಹಾಯಕ ಠಾಣಾಧಿಕಾರಿ, ನಾಲ್ಕು ಪ್ರಮುಖ ಅಗ್ನಿಶಾಮಕ, 5 ಅಗ್ನಿಶಾಮಕ ಚಾಲಕರು, ಒಂದು ತಂತ್ರಜ್ಞರು ಮತ್ತು 14 ಅಗ್ನಿಶಾಮಕ ಸಿಬ್ಬಂದಿ ಸೇರಿ ದಂತೆ ಒಟ್ಟು 27 ಹುದ್ದೆಗಳಿರುತ್ತವೆ. ಜಿಲ್ಲಾ ಕೇಂದ್ರದ ಠಾಣೆಯಲ್ಲಿ ಒಟ್ಟು 40 ಹುದ್ದೆಗಳಿರುತ್ತವೆ

ಸದ್ಯ ಜಿಲ್ಲೆಯ ಒಟ್ಟು ಐದು ಠಾಣೆಗಳಲ್ಲಿ ಒಟ್ಟು 135 ಹುದ್ದೆಗಳಿದ್ದು, ಇದರಲ್ಲಿ ಶೇ. 20-30ರಷ್ಟು ಸಿಬ್ಬಂದಿಯ ಕೊರತೆ ಇದೆ. ಅದೇ ರೀತಿ ಜಿಲ್ಲಾ ಕೇಂದ್ರದ ಠಾಣೆಯಲ್ಲಿರುವ 40 ಹುದ್ದೆಗಳ ಪೈಕಿ 5-6 ಮಂದಿ ಸಿಬ್ಬಂದಿ ಕೊರತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತ್ರಾಸಿಯಲ್ಲಿ ಠಾಣೆ ಸ್ಥಾಪನೆಗೆ ಚಿಂತನೆ

ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಗಂಗೊಳ್ಳಿಯಲ್ಲಿ ಅಗ್ನಿಶಾಮಕ ಠಾಣೆಗೆ ಸ್ಥಾಪಿಸಬೇಕೆಂಬ ಬೇಡಿಕೆ ಹೆಚ್ಚಾಗಿದೆ.

ಜನಸಂಖ್ಯೆಗೆ ಅನುಗುಣವಾಗಿ 40ಕಿ.ಮೀ.ಗೆ ಒಂದು ಅಗ್ನಿಶಾಮಕ ಠಾಣೆಗೆ ಇರಬೇಕೆಂಬುದು ನಿಯಮವಾಗಿ ದೆ. ಈ ನಿಯಮದಂತೆ ಕುಂದಾಪುರಕ್ಕಿಂತ ಕೇವಲ 21 ಕಿ.ಮೀ. ದೂರದಲ್ಲಿರುವ ಗಂಗೊಳ್ಳಿಯಲ್ಲಿ ಹೊಸ ಠಾಣೆ ನಿರ್ಮಿಸು ವುದು ಅಸಾಧ್ಯವಾಗಿದೆ. ಹಾಗಾಗಿ ತ್ರಾಸಿಯಲ್ಲಿ ಕೇಂದ್ರವಾಗಿಟ್ಟುಕೊಂಡು ಠಾಣೆ ಸ್ಥಾಪಿಸುವ ಚಿಂತನೆಯೊಂದು ನಡೆಯುತ್ತಿದೆ. ಇದರಿಂದ ಇತ್ತ ಕುಂದಾಪುರ, ಗಂಗೊಳ್ಳಿ ಕೊಲ್ಲೂರು, ಬೈಂದೂರಿಗೆ ಸಹಕಾರಿ ಆಗುತ್ತದೆ ಎಂಬುದು ಜನಪ್ರತಿನಿಧಿಗಳ ಲೆಕ್ಕಚಾರವಾಗಿದೆ. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಈ ವಿಚಾರವನ್ನು ರಾಜ್ಯ ಸರಕಾರದ ಗಮನಕ್ಕೆ ತರಲಿದ್ದಾರೆ ಎಂದು ತಿಳಿದುಬಂದಿದೆ.

"ಜಲ ವಾಹನಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಮಂಗಳೂರಿನಿಂದ ಎರಡು ವಾಹನಗಳನ್ನು ಕುಂದಾಪುರ ಹಾಗೂ ಕಾರ್ಕಳ ಠಾಣೆಗಳಿಗೆ ನೀಡಲಾಗಿದೆ. ಎರಡು ಮೂರು ದಿನಗಳಲ್ಲಿ ಮಲ್ಪೆ ಠಾಣೆಯಲ್ಲಿ ಹೊಸ ವಾಹನ ಕೂಡ ಬರಲಿದೆ. ಉಡುಪಿ ಠಾಣೆಯ ಮೂರು ಜಲ ವಾಹನಗಳ ಪೈಕಿ ಸದ್ಯ ಒಂದು ವಾಹನ ಮಾತ್ರ ಸುಸ್ಥಿತಿಯಲ್ಲಿದೆ".

-ವಿನಾಯಕ ಉ.ಕಲ್ಲುಟಕರ, ಅಗ್ನಿಶಾಮಕ ಅಧಿಕಾರಿ, ಉಡುಪಿ ಜಿಲ್ಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಝೀರ್ ಪೂಲ್ಯ

contributor

Similar News