ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಘದ ವಿರುದ್ಧ ಪ್ರತಿಭಟನೆ
ಕುಂದಾಪುರ, ಫೆ.11: ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಎ ದರ್ಜೆಯ ಸದಸ್ಯತ್ವ ನೀಡಲು ನಿರಾಕರಿಸಿರುವುದನ್ನು ವಿರೋಧಿಸಿ ಗಂಗೊಳ್ಳಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀನುಗಾರರ ಒಕ್ಕೂಟದ ವತಿಯಿಂದ ಉಡುಪಿ ತಾಪಂ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ರಾಜ್ಯಾಧ್ಯಕ್ಷ ಉದಯ ಕುಮಾರ್ ತಲ್ಲೂರು ಮಾತನಾಡಿ, ಮೂಲ ನಿವಾಸಿ ಪರಿಶಿಷ್ಟ ಜಾತಿಯ ಸಾಂಪ್ರದಾಯಿಕ ಪದ್ಧತಿಯ ಮೀನುಗಾರರಿಗೆ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ ಹಾಕಿ ದಂತಾಗಿದೆ. ಹಾಗೂ ಪರಿಶಿಷ್ಟ ಜಾತಿ ಮೀನುಗಾರರನ್ನು ಚುನಾವಣೆಯಿಂದ ದೂರ ಇಟ್ಟು ಮೀಸಲು ಸ್ಥಾನಕ್ಕೆ ಮತದಾನ ಮಾಡುತ್ತಿರುವ ಕಾರಣ ಅಸ್ಪೃಶ್ಯತೆ ನಿವಾರಣೆ ಕಾಯಿದೆಯಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಫೆ.16ರಂದು ನಡೆಯಲಿರುವ ಚುನಾವಣೆಯನ್ನು ತಡೆಹಿಡಿದು ರೋಸ್ಟರ್ ಪದ್ಧತಿ ಮೂಲಕ ಪರಿಶಿಷ್ಟ ಜಾತಿಗೆ ಮೀಸಲು ಕ್ಷೇತ್ರಕ್ಕೆ ಅವಕಾಶ ಮಾಡಿ ಕೊಡಬೇಕು ಎಂದು ಅವರು ಆಗ್ರಹಿಸಿದರು. ಸಂವಿಧಾನದ ಮೂಲಭೂತ ಹಕ್ಕಿನಲ್ಲಿ ಸಮಾನತೆ ಹಕ್ಕು ಜಾರಿಗೆ ಬಂದ ನಂತರ ಸರ್ವರಿಗೂ ಸಮಾನ ಅವಕಾಶವಿದ್ದರೂ ಸಹ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಂಘ ದಲ್ಲಿ ಅವಕಾಶ ನೀಡಿಲ್ಲ ಎಂದು ಹಕ್ಕೊತ್ತಾಯ ಮಂಡಿಸಲಾಯಿತು.
ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಸ್ಥಳಕ್ಕೆ ಭೇಟಿ ನೀಡಿ ಧರಣಿನಿರತರ ಜತೆ ಮಾತುಕತೆ ನಡೆಸಿದರು. ಮುಖಂಡರಾದ ಜಗದೀಶ್ ಗಂಗೊಳ್ಳಿ, ನ್ಯಾಯವಾದಿ ಆನಂದ ಗಂಗೊಳ್ಳಿ, ಯುವಸೇನಾ ಅಧ್ಯಕ್ಷ ಗಣೇಶ್ ನಗ್ರಿ, ಹರೀಶ್ ಮಲ್ಪೆ, ಮಂಜುನಾಥ ಗುಡ್ಡೆಯಂಗಡಿ, ವಿಜಯ್ ಕೆ.ಎಸ್., ಚಂದ್ರಮ ತಲ್ಲೂರು, ರಾಘವೇಂದ್ರ ಬಾವಿಕಟ್ಟೆ, ಸಂದೇಶ್, ಜಿ. ಪದ್ಮಾವತಿ, ಜಿ.ಟಿ.ವರದಾ, ನಾಗಿಣಿ ಮೊದಲಾದವರು ಉಪಸ್ಥಿತರಿದ್ದರು.