×
Ad

ಇಲಾಖೆಯಲ್ಲಿ ಆರ್ಥಿಕ ಮಿತವ್ಯಯಕ್ಕಾಗಿ ಇಂಧನ ಬಳಕೆ ಮಿತಿ ಕಡಿತ| ಕರಾವಳಿ ಕಾವಲು ಪಡೆಗೆ ಕಡಲ ತೀರದ ಭದ್ರತೆಯಲ್ಲಿ ಭಾರೀ ಸವಾಲು

Update: 2025-02-14 20:04 IST

ಉಡುಪಿ, ಫೆ.14: ದಕ್ಷಿಣ ಕನ್ನಡದ ತಲಪಾಡಿಯಿಂದ ಉತ್ತರ ಕನ್ನಡದ ಸದಾಶಿವಗಢದವರೆಗಿನ ಕರ್ನಾಟಕ ಕರಾವಳಿಯ 320ಕಿ.ಮೀ. ಉದ್ದದ ಸಮುದ್ರದ ತೀರವನ್ನು ವಿವಿಧ ಹಿತಾಸಕ್ತಿಗಳಿಂದ ರಕ್ಷಿಸುವ ಹಾಗೂ ಮೀನುಗಾರರಿಗೆ ಮತ್ತು ಜನರಿಗೆ ಭದ್ರತೆಯನ್ನು ನೀಡಬೇಕಾದ ಜವಾಬ್ದಾರಿಯನ್ನು ಹೊತ್ತಿರುವ ಕರ್ನಾಟಕ ಕರಾವಳಿ ಭದ್ರತಾ ಪೊಲೀಸ್ ಪಡೆ ಅಥವಾ ಕರಾವಳಿ ಕಾವಲು ಪಡೆಗೆ ತನ್ನ ಹೊಣೆಗಾರರಿಕೆಯನ್ನು ಸಮರ್ಥವಾಗಿ ನಿಭಾಯಿಸುವ ವಿಷಯದಲ್ಲಿ ಸವಾಲುಗಳು ಎದುರಾಗಿವೆ.

ಇಲಾಖೆಯಲ್ಲಿ ಆರ್ಥಿಕ ಮಿತವ್ಯಯ ಸಾಧಿಸುವ ದೃಷ್ಟಿಯಿಂದ ಇಲಾಖೆಗೆ ಈ ಹಿಂದೆ ನಿಗದಿಪಡಿಸಿರುವ ಮಾಸಿಕ ಇಂಧನದ ಮಿತಿಯನ್ನು ಗಣನೀಯ ಪ್ರಮಾಣದಲ್ಲಿ (ಕೆಲವೊಂದು ವಿಷಯಗಳಿಗೆ ಶೇ.50ಕ್ಕೂ ಅಧಿಕ) ಸರಕಾರ ಕಡಿತಗೊಳಿಸಿರುವು ದರಿಂದ ಕರಾವಳಿ ಭದ್ರತೆಯ ದೃಷ್ಟಿಯಿಂದ ಅದು ನಡೆಸುವ ಸಮುದ್ರ ಗಸ್ತು ಕಾರ್ಯಾಚರಣೆಗೆ ಭಾರೀ ಹೊಡೆತ ಬಿದ್ದಿದೆ ಎಂದು ಹೇಳಲಾಗುತ್ತಿದೆ.

ಹಿಂದೆ ಸಮುದ್ರದಲ್ಲಿ ಭದ್ರತಾ ಗಸ್ತು ತಿರುಗುವ ಬೋಟ್‌ಗಳಿಗೆ ಪ್ರತಿ ತಿಂಗಳು ನೀಡುತಿದ್ದ 600ಲೀ. ಇಂಧನವನ್ನು ಈಗ 250 ಲೀ.ಗೆ ಸೀಮಿತ ಗೊಳಿಸಲಾಗಿದೆ. ಇದರಿಂದ ಪ್ರತಿದಿನ 10ತಾಸಿಗೂ ಅಧಿಕ ಸಮಯ ಸಮುದ್ರದಲ್ಲಿ ಗಸ್ತು ತಿರು ಗುತಿದ್ದ ಕಾವಲು ಪಡೆಯ ಸಿಬ್ಬಂದಿಗಳು ಈಗ ಕೇವಲ ಒಂದು ಗಂಟೆ ಮಾತ್ರ ಗಸ್ತು ತಿರುಗಲು ಸಾಧ್ಯವಾಗುತ್ತಿದೆ ಎಂದು ಇಲಾಖೆಯ ಸಿಬ್ಬಂದಿಗಳೇ ಹೇಳುತಿದ್ದಾರೆ.

ಸರಕಾರದ ಈ ನಿರ್ಧಾರದಿಂದ ಸಮುದ್ರ ತೀರದ ಭದ್ರತೆಗೂ ಮುಂದೆ ಅಪಾಯ ಎದುರಾಗುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ಭದ್ರತೆಯ ದೃಷ್ಟಿಯಿಂದಲಾದರೂ ಈ ನಿರ್ಧಾರದಿಂದ ಸರಕಾರ ಹಿಂದೆ ಸರಿಯಬೇಕು ಎಂದು ಒತ್ತಾಯ ಗಳು ಕೇಳಿಬರುತ್ತಿವೆ.

ಕರಾವಳಿ ಕಾವಲು ಪಡೆ, ಕರ್ನಾಟಕದ ಕಡಲ ತೀರದ ವ್ಯಾಪ್ತಿಯನ್ನು ಹೊಂದಿದೆ. ಇದು ಭಾರತೀಯ ನೌಕಾದಳ, ಮೀನುಗಾರಿಕಾ ಇಲಾಖೆ, ಕಂದಾಯ ಇಲಾಖೆ, ಕಸ್ಟಮ್ಸ್, ಕೇಂದ್ರ ಹಾಗೂ ರಾಜ್ಯ ಪೊಲೀಸ್ ಪಡೆಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇದು ಕರಾವಳಿಯ ಭದ್ರತೆಯೊಂದಿಗೆ, ವಿವಿಧ ಅಪಾಯಗಳಿಂದ ರಕ್ಷಣೆ, ಮೀನುಗಾರರು ಹಾಗೂ ಜಲಚರಗಳ ರಕ್ಷಣೆ, ಕಳ್ಳಸಾಗಣೆ ನಿಗ್ರಹಗಳಂಥ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದೆ.

ಇದೀಗ ಮಿತವ್ಯಯದ ಹೆಸರಿನಲ್ಲಿ ಕರಾವಳಿ ಕಾವಲು ಪಡೆ ಬೋಟ್ ಗಳಿಗೆ ಹಾಗೂ ವಾಹನಗಳಿಗೆ ನಿಗದಿಪಡಿಸಿದ್ದ ತಿಂಗಳ ಇಂಧನ ಪೂರೈಕೆಯಲ್ಲಿ ಭಾರಿ ಕಡಿತ ಮಾಡಲಾಗಿದೆ. ದಿನದ 24 ಗಂಟೆಗಳ ಕಾಲವೂ ಸಮುದ್ರದ ಮೇಲೆ ನಿಗಾ ವಹಿಸುವ, ತುರ್ತು ಸಂದರ್ಭಗಳಲ್ಲಿ ತ್ವರಿತ ಕಾರ್ಯಾಚರಣೆ ನಡೆಸುವ ಗಸ್ತು ಬೋಟ್‌ಗಳಿಗೆ ಪೂರೈಕೆಯಾಗುತಿದ್ದ ತಿಂಗಳ ಕೋಟಾ 600ಲೀ. ಇಂಧನ ವನ್ನು ಈಗ 250 ಲೀ.ಗಳಿಗೆ ಸೀಮಿತಗೊಳಿಸಲಾಗಿದೆ.

ಅಲ್ಲದೇ ಡಿವೈಎಸ್ಪಿ, ಇನ್‌ಸ್ಪೆಕ್ಟರ್ ದರ್ಜೆಯಿಂದ ಪ್ರಾರಂಭಿಸಿ ಕೆಳಹಂತದ ಅಧಿಕಾರಿಗಳು ಬಳಸುವ ಕರಾವಳಿ ಕಾವಲು ಪಡೆಯ ಎಲ್ಲಾ ವಾಹನಗಳಿಗೆ 50ಲೀ ಇಂಧನ ಕಡಿತ ಮಾಡಲಾಗಿದೆ. ಇದು ಮಲ್ಪೆಯಲ್ಲಿರುವ ಕೇಂದ್ರ ಕಚೇರಿಗೆ ಸೀಮಿತವಾಗದೇ ಮಂಗಳೂರು, ಹೆಜಮಾಡಿ, ಗಂಗೊಳ್ಳಿ, ಹೊನ್ನಾವರ, ಕುಮಟಾ, ಬೇಲಿಕೇರಿ ಹಾಗೂ ಕಾರವಾರದ ಸಿಬ್ಬಂದಿಗಳಿಗೂ ಅನ್ವಯಿಸುತ್ತದೆ. ಆಂತರಿಕ ಭದ್ರತಾ ವಿಭಾಗದಲ್ಲಿ ಬರೋ ಕರಾವಳಿ ಕಾವಲು ಪಡೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿದೆ.

ಮಿತವ್ಯಯ ಸಾಧನೆಯ ಉದ್ದೇಶದ ಈ ನಿರ್ಧಾರ ಕರಾವಳಿ ಕಡಲ ತೀರಗಳ ರಕ್ಷಣೆಗೆ ಕಂಟಕವಾಗುವ ಅಪಾಯವೂ ಇದೆ. ಮಾದಕ ವಸ್ತುಗಳು ಸೇರಿದಂತೆ ಡ್ರಗ್ಸ್ ಕಳ್ಳಸಾಗಾಣಿಕೆ, ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರಸಕ್ತ ತಾಣವಾದ ಕಡಲಿನ ಮೂಲಕ ನಡೆಯೋ ಅಕ್ರಮಗಳಿಗೆ ಕಡಿವಾಣ ಹಾಕಲು ಕರಾವಳಿ ಕಾವಲು ಪಡೆಗೆ ಇದರಿಂದ ಸಂಕಟ ಎದುರಾಗುವ ಭೀತಿಯೂ ಹುಟ್ಟಿಕೊಂಡಿದೆ.

ಈ ಹಿಂದೆ ಸುಮಾರು ಪ್ರತಿದಿನ 10ಗಂಟೆಗಳ ಕಾಲ ಕಡಲಿನಲ್ಲಿ ಗಸ್ತು ತಿರುಗುತ್ತಿದ್ದ ಕೋಸ್ಟ್ ಗಾರ್ಡ್, ಇಂಧನ ಇಳಿಕೆ ಬೆನ್ನಲ್ಲೇ..ಗಸ್ತು ತಿರುಗುವುದನ್ನು ಕೇವಲ ಒಂದು ಗಂಟೆಗೆ ಇಳಿಸಿರುವ ಮಾಹಿತಿಯೂ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1, ಉಡುಪಿಯಲ್ಲಿ 3 ಹಾಗು ಕಾರವಾರದಲ್ಲಿ 5 ಠಾಣೆಗಳನ್ನು ಹೊಂದಿರುವ ಕರಾವಳಿ ಕಾವಲು ಪಡೆಯಲ್ಲಿರುವ 15 ಭದ್ರತಾ ಬೋಟ್‌ಗಳ ಪೈಕಿ ಗಸ್ತಿಗೆ 9 ಬೋಟುಗಳನ್ನು ಬಳಸಲಾಗುತ್ತಿದೆ. ಇಂಧನ ಪೂರೈಕೆಯಲ್ಲಿ ಮಾಡಲಾದ ಗಣನೀಯ ಪ್ರಮಾಣದ ಇಳಿಕೆ ಪೊಲೀಸರ ಕೈಯನ್ನು ಕಟ್ಟಿಹಾಕುವ ಸಾಧ್ಯತೆಯೂ ಇದೆ. ಹೀಗಾದರೆ ಇಲಾಖೆಯಲ್ಲಿ ಸಿಬ್ಬಂದಿಗಳಿದ್ದರೂ ಅವರಿಗೆ ಮಾಡಲು ಕೆಲಸ ಇಲ್ಲದಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಹವಾಮಾನ ವೈಪರೀತ್ಯ, ಕಡಲಿನ ಪ್ರಕ್ಷುಬ್ಧತೆ, ಡ್ರಗ್ಸ್ ಸೇರಿದಂತೆ ಇನ್ನಿತರೆ ವಸ್ತುಗಳ ಅಕ್ರಮ ಸಾಗಾಟ ಚಟುವಟಿಕೆಗಳು. ಭಯೋತ್ಪಾದನೆಯನ್ನ ತಡೆಗಟ್ಟುವ ನಿಟ್ಟಿನಲ್ಲಿ ಕರಾವಳಿ ಕಾವಲು ಪೊಲೀಸ್ ಪಡೆಯ ಪಾತ್ರ ಬಹಳ ಮುಖ್ಯ. ಅದರೆ ರಾಜ್ಯ ಸರಕಾರದ ಇಂಧನ ಕಡಿತದ ನಿರ್ಧಾರ ಕರಾವಳಿ ಕಾವಲು ಪಡೆಯನ್ನು ಕಟ್ಟಿಹಾಕಿದಂತಿದೆ. ಈ ವಿಚಾರದಲ್ಲಿ ರಾಜಿ ಮಾಡಿ ಕೊಂಡರೆ ಮುಂದೊಂದು ದಿನ ರಾಜ್ಯದ ಭದ್ರತೆಗೂ ಹಾನಿಯಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಿ.ಬಿ ಶೆಟ್ಟಿಗಾರ್‌

contributor

Similar News