ಮಲ್ಪೆ ಬಂದರಿನಲ್ಲಿ ದಲಿತ ಮಹಿಳೆಗೆ ಹಲ್ಲೆ ಪ್ರಕರಣ: ದೂರುದಾರ ಸಂತ್ರಸ್ತೆಯಿಂದ ನ್ಯಾಯಾಧೀಶರ ಮುಂದೆ ಹೇಳಿಕೆ
ಉಡುಪಿ: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಮರಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಪ್ರಕರಣದ ಸಂತ್ರಸ್ತ ಮಹಿಳೆ(ದೂರುದಾರು) ನ್ಯಾಯಾಧೀಶರ ಮುಂದೆ ಇಂದು ಹೇಳಿಕೆಯನ್ನು ನೀಡಿದ್ದಾರೆ.
ಸಾಕ್ಷ್ಯ ಅಧಿನಿಯಮ ಕಲಂ 164 ಅಡಿಯಲ್ಲಿ ದೂರುದಾರೆ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ನೀಡಿದ್ದು, ಅದರಂತೆ ನ್ಯಾಯಾಧೀಶರು ಆ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಈವರೆಗೆ ಮಾ.18ರಂದು ಆರೋಪಿಗಳು ಮೀನು ಕದ್ದ ಆರೋಪದಲ್ಲಿ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದರು. ಈ ಸಂಬಂಧ ನಾಲ್ವರು ಮಹಿಳೆ ಸೇರಿದಂತೆ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ತನಿಖೆ ಮುಂದುವರೆದಿದೆ.
ಏನಿದು ಸಿಆರ್‌ಪಿಸಿ ಸೆಕ್ಷನ್ 164?
ಸಾಕ್ಷ್ಯ ಅಧಿನಿಯಮ ಕಲಂ(ಸಿಆರ್‌ಪಿಸಿ) 164ರಂತೆ ದೂರುದಾರೆ ಎಫ್‌ಐಆರ್‌ನಲ್ಲಿ ಮಾಡಿರುವ ಆರೋಪ ವನ್ನೇ ನ್ಯಾಯಾಧೀಶರ ಮುಂದೆ ಹೇಳಿಕೆಯಾಗಿ ನೀಡುತ್ತಾರೆ. ಮುಂದೆ ಯಾವುದೋ ಒತ್ತಡಕ್ಕೆ ಮಣಿದು ದೂರುದಾರೆ ಪ್ರತಿಕೂಲ ಹೇಳಿಕೆ ನೀಡಿದರೆ ಆರೋಪಿಗಳು ಶಿಕ್ಷೆಯಿಂದ ಪಾರಾಗುವ ಸಾಧ್ಯತೆ ಇರುತ್ತದೆ.
ಆದರೆ 164ರ ಅಡಿಯಲ್ಲಿ ಹೇಳಿಕೆ ದಾಖಲಾದರೆ ನ್ಯಾಯಾಲಯ ಅದನ್ನು ಗಂಭೀರವಾಗಿ ಪರಿಗಣಿಸುತ್ತದೆ. ಈ ಹೇಳಿಕೆಯನ್ನು ಬದಲಿಸುವುದಾಗಲೀ, ಹಿಂಪಡೆಯಲು ಸಾಧ್ಯ ಇಲ್ಲ. ಈ ಕಾರಣಕ್ಕೆ ದೂರುದಾರರರು ನ್ಯಾಯಾಧೀಶರ ಮುಂದೆ ನೀಡುವ ಹೇಳಿಕೆ ಬಹಳ ಮಹತ್ವ ಪಡೆದಿರುತ್ತದೆ ಎನ್ನುತ್ತಾರೆ ಕಾನೂನು ತಜ್ಞರು.