×
Ad

ಮುಸ್ಲಿಮರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ: ನಿಸಾರ್ ಅಹ್ಮದ್

Update: 2025-04-22 20:04 IST

ಉಡುಪಿ, ಎ.22: ಜ್ಞಾನ ಹಾಗೂ ಶಿಕ್ಷಣ ಪಡೆಯದಿದ್ದರೆ ಯಾವುದೇ ಸಮುದಾಯ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ಆದುದರಿಂದ ಮುಸ್ಲಿಮ್ ಸಮುದಾಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಆ ನಿಟ್ಟಿನಲ್ಲಿ ಮಸೀದಿಗಳು ಕಾರ್ಯನಿರ್ವಹಿಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹ್ಮದ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಅಂಬಾಗಿಲು ಅಮೃತ್ ಗಾರ್ಡನ್‌ನಲ್ಲಿ ಮಂಗಳವಾರ ಆಯೋಜಿಸಲಾದ ಗಣ್ಯರ ಸಮಾವೇಶ ಹಾಗೂ ಒಕ್ಕೂಟದ 25ನೇ ವರ್ಷದ ವಿಶೇಷ ವಾರ್ತಾ ಸಂಚಯ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಇಸ್ಲಾಮ್ ಧರ್ಮ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದೆ. 2011ರ ಜನಗಣತಿ ಪ್ರಕಾರ ಭಾರತದಲ್ಲಿ ಮುಸ್ಲಿಮ್ ಸಮುದಾಯದ ಪೈಕಿ ಶೇ.50ರಷ್ಟು ಮಂದಿ ಅನಕ್ಷರಸ್ಥರಾಗಿದ್ದಾರೆ. ಎಸೆಸೆಲ್ಸಿ ಶಿಕ್ಷಣವನ್ನು ಕೇವಲ ಶೇ.6.30 ಹಾಗೂ ಪದವಿ ಶಿಕ್ಷಣವನ್ನು ಕೇವಲ ಶೇ.2.76ರಷ್ಟು ಮಂದಿ ಮಾತ್ರ ಪಡೆಯುತ್ತಿದ್ದಾರೆ. ಆದುದರಿಂದ ನಮ್ಮ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಆಯಾ ಮಸೀದಿ ಜಮಾತ್‌ಗಳು ತಮ್ಮ ವ್ಯಾಪ್ತಿಯಲ್ಲಿ ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸಬೇಕು. ಆ ಮೂಲಕ ಯಾವುದೇ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕಾಗಿದೆ. ನಮ್ಮಲ್ಲಿ ಇವತ್ತು ಸಾಕಷ್ಟು ಮಂದಿ ಪ್ರತಿಭಾವಂತ ಮಕ್ಕಳಿದ್ದಾರೆ. ಅವರನ್ನು ಗುರುತಿಸಿ ಐಎಎಸ್, ಐಪಿಎಸ್ ಅಧಿಕಾರಿಗಳಾಗುವ ನಿಟ್ಟಿನಲ್ಲಿ ತರಬೇತುಗೊಳಿಸಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ವಾರ್ತಾ ಸಂಚಯವನ್ನು ಬಿಡುಗಡೆಗೊಳಿಸಿದ ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಮಾತನಾಡಿ, ಇಂದು ಮುಸ್ಲಿಮ್ ಸಮುದಾಯ ಹಲವು ಸಮಸ್ಯೆ ಹಾಗೂ ತೊಂದರೆಗಳನ್ನು ಅನುಭವಿಸುತ್ತಿದೆ. ಈ ನಿಟ್ಟಿನಲ್ಲಿ ಸಮುದಾಯದ ಪ್ರಮುಖ ಚಿಂತನೆ ಮಾಡ ಬೇಕಾಗಿದೆ. ಅದೇ ರೀತಿ ಎಲ್ಲ ಸಮುದಾಯದವರೊಂದಿಗೆ ಸಹಬಾಳ್ವೆ ನಡೆಸಿ ಉತ್ತಮ ಸಮಾಜ ನಿರ್ಮಿಸಬೇಕು ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಾಥಮಿಕ ಹಂತದಲ್ಲಿ ಕುರಾನ್ ಸಂಪೂರ್ಣ ಕಂಠಪಾಠ ಮಾಡಿದ ಹಾಫೀಝ್‌ಗಳನ್ನು ಅಭಿನಂದಿಸಲಾಯಿತು. ವಾರ್ತಾ ಸಂಚಯದ ಸಂಪಾದಕ ಝಮೀರ್ ಅಹ್ಮದ್ ರಶಾದಿ ವಾರ್ತಾ ಸಂಚಯದ ಕುರಿತು ಮಾತನಾಡಿದರು.

ಮೂಳೂರು ಅಲ್ ಇಹ್ಸಾನ್ ಅಕಾಡೆಮಿ ಸ್ಕೂಲಿನ ಪ್ರಧಾನ ವ್ಯವಸ್ಥಾಪದ ಮುಸ್ತಫಾ ಸಅದಿ, ಒಕ್ಕೂಟದ ಮಾಜಿ ಅಧ್ಯಕ್ಷ ಯಾಸೀನ್ ಮಲ್ಪೆ ಮಾತನಾಡಿದರು. ವೇದಿಕೆಯಲ್ಲಿ ಹಿರಿಯ ಜಿಲ್ಲಾ ಉಪಾಧ್ಯಕ್ಷ ಮುಹಮ್ಮದ್ ರಫೀಕ್ ಬಿಎಸ್‌ಎಫ್, ಜಿಲ್ಲಾ ಕೋಶಾಧಿಕಾರಿ ಸಯ್ಯದ್ ಫರೀದ್, ತಾಲೂಕು ಅಧ್ಯಕ್ಷರು ಗಳಾದ ಎಸ್.ಎಂ.ಇರ್ಶಾದ್ ನೇಜಾರು, ಎಸ್.ದಸ್ತಗೀರ್ ಕಂಡ್ಲೂರು, ಮುಹಮ್ಮದ್ ಗೌಸ್ ಮಿಯಾರು, ನಸೀರ್ ಅಹ್ಮದ್, ಕಾರ್ಯಕ್ರಮ ಸಂಚಾಲಕ ಇಕ್ಬಾಲ್ ಎಸ್.ಕೆ., ಜಿಲ್ಲಾ ಮಾಜಿ ಅಧ್ಯಕ್ಷರಾದ ತೌಫೀಕ್ ಅಬ್ದುಲ್ಲಾ ನಾವುಂದ, ಎಂ.ಪಿ.ಮೊದಿನಬ್ಬ, ಇಬ್ರಾಹಿಂ ಸಾಹೇಬ್ ಕೋಟ, ಅಶ್ಪಕ್ ಕಾರ್ಕಳ ಉಪಸ್ಥಿತರಿದ್ದರು.

ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೇನ್ ಸ್ವಾಗತಿಸಿದರು. ಉಪಾಧ್ಯಕ್ಷ ಇದ್ರೀಸ್ ಹೂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಜಫ್ರುಲ್ಲಾ ವಂದಿಸಿದರು. ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News