×
Ad

ಕಾಪು ಯೋಜನಾ ಪ್ರಾಧಿಕಾರದಲ್ಲಿ ದಲ್ಲಾಳಿಗಳ ಹಾವಳಿ: ಕ್ರಮಕ್ಕೆ ಒತ್ತಾಯಿಸಿ ಡಿಸಿಗೆ ಮನವಿ

Update: 2025-05-20 17:49 IST

ಕಾಪು, ಮೇ 20: ಕಾಪು ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರದಲ್ಲಿ ಜನಸಾಮಾನ್ಯರಿಗೆ ತ್ವರಿತವಾದ ಸೇವೆ ಸಿಗುವಂತಾಗಲು ಹಲವು ಬದಲಾವಣೆಗಳನ್ನು ಕಡ್ಡಾಯ ಮಾಡಿ ಜಾರಿಗೊಳಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕೃಷಿಕ ಸಂಘ ಸೋಮವಾರ ಕಾಪು ತಹಶೀಲ್ದಾರ್ ಮೂಲಕ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಕಾಪು ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರದಲ್ಲಿ ಜನಸಾಮಾನ್ಯರ ಅರ್ಜಿ ವಿಲೇವಾರಿಗೆ ಸರಿಯಾದ ವ್ಯವಸ್ಥೆಯೇ ಇಲ್ಲ. ಇಲ್ಲಿ ಪ್ರತಿದಿನ ನೂಕು ನುಗ್ಗಲು ಇದೆ. ಒಮ್ಮೆಗೆ 5-10 ಅರ್ಜಿಗಳನ್ನು ತರುವ ದಲ್ಲಾಳಿಗಳ ಹಾವಳಿಯಿಂದ ಸಮಸ್ಯೆ ಆಗುತ್ತಿದೆ. ನೇರವಾಗಿ ಅರ್ಜಿ ಸಲ್ಲಿಸಲು ಹೋದವರನ್ನು ಕೇಳುವವರೇ ಇಲ್ಲ. ಬೆಳಗ್ಗಿನಿಂದ ಸಂಜೆಯವರೆಗೆ ಕಾಯುವ ಪರಿಸ್ಥಿತಿ ಎದುರಾಗಿದೆ. 10-12 ಬಾರಿ ಕಚೇರಿಗೆ ಬಂದರೂ ಯೋಜನಾ ಪ್ರಾಧಿಕಾರದ ಅಧಿಕಾರಿಯ ಭೇಟಿ ಸಾಧ್ಯವಾಗುತ್ತಿಲ್ಲ ಎಂದು ಸಂಘ ಮನವಿಯಲ್ಲಿ ಆರೋಪಿಸಿದೆ.

ಪ್ರಮುಖ ಬೇಡಿಕೆಗಳು: ಪ್ರಾಧಿಕಾರದ ಕಚೇರಿಗೆ ನೇರವಾಗಿ ಬರುವ ಅರ್ಜಿದಾರರೊಂದಿಗೆ ವಿನಯ ಮತ್ತು ಸೌಜನ್ಯದಿಂದ ವರ್ತಿಸುವಂತೆ ಪ್ರಾಧಿಕಾರದ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ನಿರ್ದೇಶ ನೀಡಬೇಕು. ಅರ್ಜಿಯ ಸ್ವೀಕಾರ ಮತುತಿ ಸ್ಥಿತಿಗತಿಯ ಬಗ್ಗೆ ರಿಜಿಸ್ಟರ್ ನಿರ್ವಹಣೆ ಮಾಡಬೇಕು. ಅರ್ಜಿಯ ಜೊತೆ ಯಾವುದೆಲ್ಲ ದಾಖಲೆಗಳ ಅಗತ್ಯವಿರುವುದೆಂದು ಪರಿಶೀಲಿಸಿ, ಅರ್ಜಿದಾರರಿಗೆ ಆಗಲೇ ತಿಳಿಸಬೇಕು.

ಕ್ರಮವತ್ತಾಗಿ ಕಚೇರಿಯನ್ನು ಸಂಪರ್ಕಿಸುವ ದಿನ ಮತ್ತು ಸಮಯವನ್ನು ದೂರವಾಣಿ ಮೂಲಕ ಅರ್ಜಿದಾ ರರಿಗೆ ನೀಡುವ ವ್ಯವಸ್ಥೆಯಾಗಬೇಕು ಮತ್ತು ಅಂದೇ ಅರ್ಜಿಯ ವಿಲೇವಾರಿಯಾಗಬೇಕು. ಅರ್ಜಿ ಸಲ್ಲಿಸಿದ ರೀತಿಯಲ್ಲಿ ಕಡ್ಡಾಯವಾಗಿ ಅನುಮೋದನೆ ನೀಡಬೇಕು. ದಲ್ಲಾಳಿಗಳಿಗೆ ಪ್ರಾಧಿಕಾರದಲ್ಲಿ ಅವಕಾಶ ನೀಡಕೂಡದು.

ಒಮ್ಮೆಗೆ ಒಬ್ಬರಿಂದ ಒಂದು ಅರ್ಜಿ ಮಾತ್ರ ಸ್ವೀಕಾರ ಮಾಡಬೇಕು. ಅವ್ಯವಸ್ಥೆಯಿಂದಾಗಿ ಉಂಟಾಗು ತ್ತಿರುವ ನೂಕುನುಗ್ಗಲನ್ನು ನಿಯಂತ್ರಿಸಬೇಕು. ಪ್ರಾಧಿಕಾರದ ಪ್ರಸ್ತುತ ಕಾರ್ಯವೈಖರಿಯಿಂದಾಗಿ ನಮ್ಮ ಸಂಘಟನೆಯ ಸದಸ್ಯರು ಈಗಾಗಲೇ ತೀವ್ರ ಅಸಮಾಧಾನ ಹೊಂದಿದ್ದಾರೆ ಮತ್ತು ಪ್ರತಿಟನೆ ನಡೆಸುವ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ಇದೆಲ್ಲಾ ಪ್ರಕ್ರಿಯೆಗಳನ್ನು ವ್ಯವಸ್ಥಿತವಾಗಿ ಮಾಡಿ ಪ್ರಾಧಿಕಾರವು ಸಾರ್ವಜನಿ ಕರಿಗೆ ಅನುಕೂಲವಾಗಿ ತ್ವರಿತ ಕೆಲಸ ಮಾಡಲು ತಾವು ಕ್ರಮ ಕೈಗೊಳ್ಳಬೇಕು ಎಂದು ಸಂಘ ಮನವಿಯಲ್ಲಿ ತಿಳಿಸಿದೆ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ, ದಿನೇಶ್ ಶೆಟ್ಟಿ ಹೆರ್ಗ ರವೀಂದ್ರ ಗುಜ್ಜರಬೆಟ್ಟು, ಪಾಂಡುರಂಗ ನಾಯಕ್ ಹಿರಿಯಡ್ಕ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News