ಸಿದ್ಧಾಪುರ: ಒಂಟಿ ಸಲಗ ಸೆರೆಗೆ ಬಂತು ಸಕ್ರೆಬೈಲಿನ ಮೂರು ಆನೆಗಳು!
Update: 2025-06-05 15:45 IST
ಕುಂದಾಪುರ: ಕಳೆದ ಎರಡು ದಿನಗಳಿಂದ ಸಿದ್ಧಾಪುರ -ಹೊಸಂಗಡಿ ಪರಿಸರದಲ್ಲಿ ಓಡಾಡುತ್ತಿರುವ ಒಂಟಿ ಸಲಗವನ್ನು ಸೆರೆಹಿಡಿಯಲು ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನ ಮೂರು ಆನೆಗಳನ್ನು ಕರೆತರಲಾಗಿದೆ.
ಇಂದು ಸಿದ್ಧಾಪುರ ಸಮೀಪದ ಮತ್ತಿಬೇರು ಅರಣ್ಯದಲ್ಲಿ ಕಾಡಾನೆ ಕಂಡುಬಂದಿದ್ದು, ಈ ಒಂಟಿ ಸಲಗವನ್ನು ಸೆರೆಹಿಡಿಯಲು ಸಕ್ರೆಬೈಲಿನ ಬಹದ್ಧೂರ್, ಬಾಲಣ್ಣ, ಸೋಮಣ್ಣ ಆನೆಗಳು ಸಿದ್ಧಾಪುರಕ್ಕೆ ಬಂದಿವೆ. ನಾಗರಹೊಳೆ ಮತ್ತಿಗೋಡಿನಿಂದ 3 ಆನೆಗಳು ಬರುವ ನಿರೀಕ್ಷೆ ಇದ್ದು, ಕಾರ್ಯಾಚರಣೆಗೆ ಸಕಲ ಸಿದ್ಧತೆ ನಡೆಯುತ್ತಿದೆ.
ಅರಣ್ಯ ಇಲಾಖೆ, ವನ್ಯಜೀವಿ ವಿಭಾಗದ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಸ್ಥಳಕ್ಕೆ ಕುಂದಾಪುರ ಉಪವಿಭಾಗದ ಎಸಿ ರಶ್ಮಿ ಎಸ್.ಆರ್., ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಭೇಟಿ ನೀಡಿ, ಇಲಾಖಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.