×
Ad

ಉಡುಪಿ| ಜೂನ್ ತಿಂಗಳಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ: ಕೃಷಿ ಚಟುವಟಿಕೆಗೆ ಬಿರುಸು

Update: 2025-07-03 20:52 IST

ಉಡುಪಿ: 2025ನೇ ಸಾಲಿನ ಮುಂಗಾರು ಋತುವಿನ ಮೊದಲ ತಿಂಗಳು ಉಡುಪಿ ಜಿಲ್ಲೆ ಒಳ್ಳೆಯ ಮಳೆಯನ್ನು ಪಡೆದಿದೆ. ಜೂನ್ ತಿಂಗಳಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ ಬಿದ್ದ ಜಿಲ್ಲೆ ಎಂಬ ಹೆಗ್ಗಳಿಕೆಯೂ ಉಡುಪಿಗಿದೆ. ಐಎಂಡಿಯ ವರದಿಯಂತೆ ರಾಜ್ಯ ಕರಾವಳಿ ಈ ಬಾರಿ ದೇಶದಲ್ಲೇ ಅತ್ಯಧಿಕ ಮಳೆಬಿದ್ದ ಪ್ರದೇಶವೆನಿಸಿಕೊಂಡಿದೆ.

ಜೂನ್ 1ರಿಂದ 30ರವರೆಗೆ ಉಡುಪಿ ಜಿಲ್ಲೆಯಲ್ಲಿ ಸರಾಸರಿ 1162.8 ಮಿ.ಮೀ. ಮಳೆಯಾಗಿದೆ. ಈ ತಿಂಗಳ ವಾಡಿಕೆ ಮಳೆ 1105.5ಮೀ.ಮೀ. ಆಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆ ಮಳೆಗಿಂತ ಶೇ.5ರಷ್ಟು ಅಧಿಕ ಮಳೆಯಾಗಿದೆ ಎಂದು ಜಿಲ್ಲಾ ವಿಕೋಪ ನಿರ್ವಹಣಾ ಕೇಂದ್ರ ನೀಡಿರುವ ಅಂಕಿಅಂಶಗಳಿಂದ ತಿಳಿದುಬಂದಿದೆ.

ಇನ್ನು ಈ ವರ್ಷದ ಜನವರಿ 1ರಿಂದ ಜೂನ್ 30ರವರೆಗಿನ ಅವಧಿಯಲ್ಲಿ ಬಿದ್ದ ಮಳೆಯ ಪ್ರಮಾಣವನ್ನು ತೆಗೆದುಕೊಂಡರೆ ಅಲ್ಲೂ ರಾಜ್ಯದಲ್ಲಿ ಅವಧಿಯಲ್ಲಿ ಅತ್ಯಧಿಕ ಮಳೆಯಾದ ಪ್ರದೇಶ ಉಡುಪಿ ಜಿಲ್ಲೆಯಾಗಿದೆ. ಜನವರಿಯಿಂದ ಜೂನ್ ಅಂತ್ಯದವರೆಗೆ ಈ ಅವಧಿಯ ಜಿಲ್ಲೆಯ ವಾಡಿಕೆ ಮಳಸೆ 1306.3ಮಿ.ಮೀ. ಆಗಿದೆ. ಆದರೆ 2025ರಲ್ಲಿ ಒಟ್ಟಾರೆಯಾಗಿ ಬಿದ್ದಿರುವುದು 2101.6ಮಿ.ಮೀ.. ಈ ಮೂಲಕ ಜಿಲ್ಲೆಯಲ್ಲಿ ಶೇ.61ರಷ್ಟು ಅಧಿಕ ಮಳೆ ಈ ಬಾರಿ ಬಿದ್ದಿದೆ ಎಂದು ಕೇಂದ್ರದ ಮಾಹಿತಿ ತಿಳಿಸುತ್ತದೆ.

ಜೂನ್ ತಿಂಗಳ ಮಳೆಯ ಸ್ವಾರಸ್ಯಕರ ಅಂಶವೆಂದರೆ, ಜಿಲ್ಲೆಯಲ್ಲಿ ಹೆಚ್ಚಾಗಿ ಅತ್ಯಧಿಕ ಮಳೆ ಬೀಳುವ, ಪಶ್ಚಿಮ ಘಟ್ಟದ ತಪ್ಪಲಲ್ಲೇ ಇರುವ ಹೆಬ್ರಿಯಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದು. ಇಲ್ಲಿ ಜೂನ್ ತಿಂಗಳ ವಾಡಿಕೆ ಮಳೆ 1314.7 ಮಿ.ಮೀ. ಆಗಿದ್ದರೆ, ಈ ಬಾರಿ ಬಿದ್ದಿರುವುದು 1291.7 ಮಿ.ಮೀ. ಇದರಿಂದ ಈ ಬಾರಿ ವಾಡಿಕೆ ಮಳೆಯಿಂದ ಶೇ.2ರಷ್ಟು ಕೊರತೆ ಕಾಣಿಸಿಕೊಂಡಿದೆ ಎಂದು ಅಂಕಿಅಂಶಗಳಿಂದ ಗೊತ್ತಾಗುತ್ತದೆ.

ಹೆಬ್ರಿಯನ್ನು ಹೊರತು ಪಡಿಸಿದಂತೆ ಜೂನ್ ತಿಂಗಳಲ್ಲಿ ಉಡುಪಿ ಜಿಲ್ಲೆಯ ಉಳಿದ ಆರು ತಾಲೂಕುಗಳಲ್ಲಿ ಅಧಿಕ ಮಳೆಯಾಗಿದೆ. ಅತ್ಯಧಿಕ ಮಳೆಯಾಗಿರುವುದು ಕುಂದಾಪುರ ತಾಲೂಕಿನಲ್ಲಿ. ಇಲ್ಲಿ ವಾಡಿಕೆ ಮಳೆ992.9ಮಿಮೀ ಆಗಿದ್ದರೆ ಈ ಬಾರಿ ಬಿದ್ದಿರುವುದು 1165.5ಮಿ.ಮೀ. ಈ ಮೂಲಕ ಶೇ.17ರಷ್ಟು ಹೆಚ್ಚುವರಿ ಮಳೆಯಾಗಿದೆ.

ಇನ್ನು ಕಾರ್ಕಳ ತಾಲೂಕಿನಲ್ಲಿ ಶೇ.15ರಷ್ಟು ಅಧಿಕ ಮಳೆಯಾಗಿದೆ. ಇಲ್ಲಿನ ವಾಡಿಕೆ ಮಳೆ 1048.6 ಮಿ.ಮೀ. ಆಗಿದ್ದರೆ ಈಬಾರಿ 1208.4 ಮಿ.ಮೀ. ಮಳೆ ಸುರಿದಿದೆ. ಕಾಪು ತಾಲೂಕಿನಲ್ಲಿ ವಾಡಿಕೆಯ ಪ್ರಮಾಣದಲ್ಲೇ ಮಳೆಯಾಗಿದೆ. ಇಲ್ಲಿ ವಾಡಿಕೆ ಮಳೆ 1000ಮಿ.ಮೀ. ಆಗಿದರೆ ಈ ಬಾರಿ ಬಿದ್ದಿರುವುದು 995.4ಮಿ.ಮೀ ಮಳೆ.

ಇನ್ನುಳಿದ ತಾಲೂಕುಗಳ ಪೈಕಿ ಬೈಂದೂರಿನಲ್ಲಿ ಶೇ.6ರಷ್ಟು ಹೆಚ್ಚುವರಿ ಮಳೆ ಯಾಗಿದೆ. ಇಲ್ಲಿನ ವಾಡಿಕೆ ಮಳೆ 1136.5ಮಿ.ಮೀ. ಆದರೆ ಬಿದ್ದಿರುವುದು 1209.0ಮಿ.ಮೀ. ಬ್ರಹ್ಮಾವರ ತಾಲೂಕಿನ ವಾಡಿಕೆ ಮಳೆ 1018ಮಿ.ಮೀ. ಆದರೆ ಈ ಬಾರಿ 1043.7ಮಿ.ಮೀ. ಮಳೆಯಾಗುವ ಮೂಲಕ ಶೇ.3ರಷ್ಟು ಹೆಚ್ಚು ಮಳೆ ಬಿದ್ದಿದೆ. ಉಡುಪಿ ತಾಲೂಕಿನಲ್ಲಿ ಬಿದ್ದಿರುವ ಹೆಚ್ಚುವರಿ ಮಳೆ ಪ್ರಮಾಣ ಶೇ.2. ಇಲ್ಲಿ ವಾಡಿಕೆ ಮಳೆ 1032.7ಮೀ.ಮೀ. ಆದರೆ ಬಿದ್ದಿ ರುವುದು 1050ಮಿ.ಮೀ.

ಕಾರ್ಕಳದಲ್ಲಿ ಅತ್ಯಧಿಕ ಮಳೆ: ಈ ಬಾರಿ ಜನವರಿಯಿಂದ ಜೂನ್ 30ರವರೆಗೆ ಮಳೆಯನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಕಾರ್ಕಳ ತಾಲೂಕಿನಲ್ಲಿ ಅತ್ಯಧಿಕ ಮಳೆಯಾದ ಮಾಹಿತಿ ಸಿಗುತ್ತದೆ. ಇಲ್ಲಿ ಒಟ್ಟಾರೆ ಯಾಗಿ ಶೇ.82ರಷ್ಟು ಅಧಿಕ ಮಳೆಯಾಗಿದೆ. ಈ ಅವಧಿಯಲ್ಲಿ ಕಾರ್ಕಳದ ವಾಡಿಕೆ ಮಳೆ 1270.5 ಮಿ.ಮೀ. ಆದರೆ ಈ ಸಲ ನಿಜವಾಗಿ ಬಿದ್ದಿರುವುದು 2306.1 ಮಿ.ಮೀ.ಮಳೆ.

ಇನ್ನುಳಿದಂತೆ ಕುಂದಾಪುರ ಮತ್ತು ಬ್ರಹ್ಮಾವರದಲ್ಲಿ ಶೇ.64ರಷ್ಟು ಹೆಚ್ಚುವರಿ ಮಳೆ ಬಿದ್ದಿದೆ. ಕುಂದಾಪುರದಲ್ಲಿ ವಾಡಿಕೆ ಮಳೆ 1191ಮಿ.ಮೀ ಆದರೆ ಬಿದ್ದಿರುವುದು 1958.5ಮಿ.ಮೀ. ಅದೇ ರೀತಿ ಬ್ರಹ್ಮಾವರದ ವಾಡಿಕೆ ಮಳೆ 1219.8ಮಿ.ಮೀ. ಆಗಿದ್ದು, ಈ ಬಾರಿ ಒಟ್ಟಾರೆಯಾಗಿ 1998.7ಮಿ.ಮೀ. ಮಳೆ ಸುರಿದಿದೆ.

ಜಿಲ್ಲೆಯ ಮಟ್ಟಿಗೆ ಅತಿ ಕಡಿಮೆ ಮಳೆಯಾಗಿರುವುದು ಹೆಬ್ರಿ ತಾಲೂಕಿನಲ್ಲಿ. ಇಲ್ಲಿ ಜನವರಿಂದ ಜೂನ್‌ವರೆಗೆ ಶೇ.47 ಮಾತ್ರ ಹೆಚ್ಚು ಮಳೆ ಬಿದ್ದಿದೆ. ಹೆಬ್ರಿಯ ವಾಡಿಕೆ ಮಳೆ 1518.2ಮಿಮೀ. ಆದರೆ ಬಿದ್ದಿರುವುದು 2236 ಮಿ.ಮೀ ಮಾತ್ರ. ಕಾಪುವಿನಲ್ಲಿ 1237.8ಮಿ.ಮೀ. ವಾಡಿಕೆ ಮಳೆಯಾದರೆ ಈ ಬಾರಿ 2000.7 ಮಿ.ಮೀ. ಮಳೆಯಾಗುವ ಮೂಲಕ ಶೇ.62ರಷ್ಟು ಹೆಚ್ಚುವರಿ ಮಳೆಯನ್ನು ಪಡೆದಿದೆ.

ಉಡುಪಿಯಲ್ಲಿ ವಾಡಿಕೆ ಮಳೆ 1246.1ಮಿ.ಮೀ ಇದ್ದು, ಈ ಬಾರಿ 1998.1 ಮಳೆಯಾಗುವ ಮೂಲಕ ಶೇ.60ರಷ್ಟು ಹೆಚ್ಚುವರಿ ಮಳೆ ಪಡೆದಿದೆ. ಬೈಂದೂರು ತಾಲೂಕು ವಾಡಿಕೆಯ 1356.7ಮಿ.ಮೀ.ಗೆ ಬದಲು 2111.7 ಮಿ.ಮೀ. ಮಳೆ ಪಡೆಯುವ ಮೂಲಕ ಶೇ.56ರಷ್ಟು ಹೆಚ್ಚುವರಿ ಮಳೆ ಪಡೆದಿದೆ.

ಕೃಷಿ ಚಟುವಟಿಕೆಗೆ ವೇಗ: ಜಿಲ್ಲೆಯಲ್ಲಿ ಮೇ ಬಳಿಕ ಉತ್ತಮ ಮಳೆಯಾ ಗುತ್ತಿರುವುದರಿಂದ ಪ್ರದಾನ ಕೃಷಿ ಬೆಳೆಯಾದ ಭತ್ತದ ನಾಟಿ ಚಟುವಟಿಕೆ ವೇಗವನ್ನು ಪಡೆದುಕೊಂಡಿದೆ ಎಂದು ಕೃಷಿ ಇಲಾಖೆಯ ಮೂಲ ಗಳು ತಿಳಿಸಿವೆ. ಜಿಲ್ಲೆಯಲ್ಲಿ ಈ ಬಾರಿ 35,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇದ್ದು, ಜೂನ್ ಕೊನೆಯವರೆಗೆ 12,730 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯ ಮುಗಿದಿದೆ ಎಂದು ಈ ಮೂಲ ತಿಳಿಸಿದೆ.

ಜಿಲ್ಲೆಯಲ್ಲಿ 2495 ಕ್ವಿಂಟಾಲ್ ವಿವಿಧ ತಳಿಯ ಬಿತ್ತನೆ ಬೀಜದಲ್ಲಿ 4230 ಮಂದಿ ರೈತರು 1757 ಕ್ವಿಂಟಾಲ್ ಬೀಜವನ್ನು ಖರೀದಿಸಿದ್ದಾರೆ. ಕೃಷಿ ಇಲಾಖೆ ಬಳಿ ಇನ್ನೂ 610 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನಿದೆ ಎಂದು ಮೂಲ ತಿಳಿಸಿದೆ.

ಕೃಷಿ ಇಲಾಖೆಯ ಬಳಿ ಮುಂಗಾರು ಬೆಳೆಗಳಿಗೆ ಜಿಲ್ಲೆಯಲ್ಲಿ 8404 ಮೆಟ್ರಿಕ್ ಟನ್ ರಸಗೊಬ್ಬರದ ಸಂಗ್ರಹ ವಿದೆ. ಇದರಲ್ಲಿ ಜೂನ್ ತಿಂಗಳಿಗೆ 3960 ಟನ್ ರಸಗೊಬ್ಬರದ ಅಗತ್ಯವಿದೆ. ಇದುವರೆಗೆ ಜಿಲ್ಲೆಯಲ್ಲಿ 1600 ಟನ್ ರಸಗೊಬ್ಬರ ಮಾರಾಟವಾಗಿದ್ದು, 3726 ಟನ್ ಗೊಬ್ಬರದ ದಾಸ್ತಾನಿದೆ ಎಂದು ಕೃಷಿ ಇಲಾಖೆಯ ಮೂಲ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಿ.ಬಿ.ಶೆಟ್ಟಿಗಾರ್

contributor

Similar News