×
Ad

ಕುಂದಾಪುರ | ಸಮುದ್ರಪಾಲಾಗಿ ಮೂವರು ನಾಪತ್ತೆ ಪ್ರಕರಣ: ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳಲು ಉಸ್ತುವಾರಿ ಸಚಿವೆ ಸೂಚನೆ

Update: 2025-07-15 13:17 IST

ಉಡುಪಿ: ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಇಂದು ನಾಡದೋಣಿ ಮಗುಚಿ ನೀರು ಪಾಲಾಗಿರುವ ಮೂವರು ಮೀನುಗಾರರ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಘಟನೆ ತಿಳಿದ ತಕ್ಷಣವೇ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದ ಸಚಿವೆ, ಮೀನುಗಾರರ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಮೂವರನ್ನು ಸುರಕ್ಷಿತವಾಗಿ ಕರೆತರಲು ಕಾರ್ಯಾಚರಣೆ ನಡೆಸುವಂತೆ ಕರಾವಳಿ ಕಾವಲು ಪಡೆಗೆ ಸೂಚನೆ ನೀಡಿದ್ದಾರೆ.

ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ವಹಿಸಬೇಕು. ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸಚಿವೆ ಹೆಬ್ಬಾಳ್ಕರ್ ಸೂಚನೆ ನೀಡಿದ್ದಾರೆ.

ಇಂದು ಬೆಳಗ್ಗೆ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿಬಿದ್ದ ಪರಿಣಾಮ ಮೂವರು ಮೀನುಗಾರರು ನಾಪತ್ತೆಯಾಗಿದ್ದಾರೆ.

ಗಂಗೊಳ್ಳಿ ಸೀವಾಕ್ ಬಳಿ ಈ ದುರ್ಘಟನೆ ನಡೆದಿದ್ದು, ಓರ್ವ ಮೀನುಗಾರನನ್ನು ರಕ್ಷಿಸಲಾಗಿದೆ.

ಸುರೇಶ್ ಖಾರ್ವಿ, ಜಗನ್ನಾಥ್ ಖಾರ್ವಿ ಮತ್ತು ರೋಹಿತ್ ಖಾರ್ವಿ ನಾಪತ್ತೆಯಾದ ಮೀನುಗಾರರು. ಸಂತೋಷ್ ಖಾರ್ವಿ ಎನ್ನುವವರನ್ನು ಬೇರೊಂದು ಬೋಟ್ ನವರು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

ಸುರೇಶ ಖಾರ್ವಿ ಮಾಲಕತ್ವದ ದೋಣಿಯಲ್ಲಿ ಮಂಗಳವಾರ ಬೆಳಗ್ಗೆ ನಾಲ್ವರು ಮೀನುಗಾರರು ಮೀನುಗಾರಿಕೆ ಹೊರಟಿದ್ದರು. ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿದ ದೋಣಿ ಮಗುಚಿ ಬಿದ್ದಿದೆ. ಈ ವೇಳೆ ಸಂತೋಷ್ ಖಾರ್ವಿ ಈಜಿ ಬೇರೊಂದು ದೋಣಿ ತಲುಪಿದ್ದರೆ, ಉಳಿದ ಮೂವರು ಮೀನುಗಾರರು ಈತನಕ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ  ಪೊಲೀಸರು, ಕರಾವಳಿ ಕಾವಲು ಪಡೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News