ಪಡುಬಿದ್ರಿ | ಪಿಡಿಓ ನಕಲಿ ಸಹಿ ಬಳಸಿ ದೃಢಪತ್ರ ಸಲ್ಲಿಕೆ: ದೂರು
ಪಡುಬಿದ್ರಿ, ಡಿ.7: ಗ್ರಾಪಂ ದಾಖಲೆ ದುರುಪಯೋಗ ಪಡಿಸಿ, ಪಿಡಿಓ ನಕಲಿ ಸಹಿ ಬಳಸಿ ಉಪ-ನೊಂದಣಾಧಿಕಾರಿಯವರ ಕಚೇರಿಗೆ ದೃಢಪತ್ರ ಸಲ್ಲಿಸಿರುವ ಬಗ್ಗೆ ತೆಂಕ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಜನಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕರು ತೆಂಕ ಗ್ರಾಪಂ ಪಿಡಿಓ ಸಹಿ ಇರುವ ದಾಖಲೆ ದುರು ಪಯೋಗ ಆಗಿದೆ ಎಂಬ ಮಾಹಿತಿ ಮೇರೆಗೆ ಮೂಲ್ಕಿ ಉಪ-ನೊಂದಣಾಧಿ ಕಾರಿಯವರ ಕಚೇರಿಗೆ ತೆರಳಿ ಪಿಡಿಓ ರಜನಿ ಪರಿಶೀಲಿಸಿದಾಗ, ತೆಂಕ ಗ್ರಾಮ ಪಂಚಾಯತ್ ವ್ಯಾಪ್ತಿಯ 7ನೇ ವಾರ್ಡಿನ ಸರ್ವೇ ನಂಬ್ರ 56/2 ರಲ್ಲಿ ಗಿರಿಯಪ್ಪ ಕೋಟ್ಯಾನ್ ಎಂಬ ಹೆಸರಿನಲ್ಲಿ ವಾಸ್ತವ್ಯದ ಕಟ್ಟಡವು ಸುಮಾರು 800 ಚದರ ಅಡಿಯ ಹಂಚಿನ ಕಟ್ಟಡವಾಗಿದ್ದು, ಈ ಕಟ್ಟಡದ ನೆಲಕ್ಕೆ ಟೈಲ್ಸ್ ಅಳವಡಿಸಲಾಗಿದೆ ಎಂದು ಈ ಮೂಲಕ ದೃಡಪಡಿಸಲಾಗಿದೆ ಎಂಬ ನಮೂದು ತೆಂಕ ಗ್ರಾಪಂ ಲೆಟೆರ್ ಹೆಡ್ ನಲ್ಲಿ ಇರುವುದು ಕಂಡುಬಂದಿದೆ.
ಈ ದೃಡಪತ್ರದಲ್ಲಿ ತೆಂಕ ಗ್ರಾಪಂ ಲೆಟರ್ ಹೆಡ್ ನಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರ ಸೀಲು ಹಾಗೂ ಪಿಡಿಓ ನಕಲಿ ಸಹಿ ಇರುವುದು ಕಂಡುಬಂದಿದೆ. ನಮೂನೆ 11 ಬಿ ಯು ಈ ವರ್ಷ ಜೂನ್ ತಿಂಗಳಿನಿಂದ ಬಂದ್ ಆಗಿ ಈ ವರ್ಷ ಡಿ.1ರಂದು ಓಪನ್ ಆಗಿದ್ದು, ಆ ಮಧ್ಯದಲ್ಲಿ ಯಾರೋ ಯಾವುದೋ ದುರುದ್ದೇಶದಿಂದ ತೆಂಕ ಗ್ರಾಪಂ ಕಚೇರಿಯ ಲೆಟರ್ ಹೆಡ್, ಸೀಲನ್ನು ದುರ್ಬಳಕೆ ಮಾಡಿ, ಪಿಡಿಓ ನಕಲಿ ಸಹಿಯನ್ನು ಮಾಡಿ ಉಪ ನೊಂದಣಿ ಕಚೇರಿ ಮೂಲ್ಕಿ ಇಲ್ಲಿಗೆ ನಮೂನೆ 11 ಬಿ ರ ಬದಲಿಗೆ ದೃಡಪತ್ರ ನೀಡಿ ಮೋಸ ಮಾಡಿರುವುದಾಗಿ ದೂರಲಾಗಿದೆ.