×
Ad

ಪರಶುರಾಮ ಪಾರ್ಕ್ ಕಳ್ಳತನ| ಶಾಸಕ ಸುನಿಲ್‌ರ ವ್ಯವಸ್ಥಿತ ಸಂಚು; ಉದಯ ಶೆಟ್ಟಿ ಮುನಿಯಾಲು ಆರೋಪ

Update: 2026-01-06 20:40 IST

ಉಡುಪಿ, ಜ.6: ಕಾರ್ಕಳ ತಾಲೂಕು ಬೈಲೂರಿನ ಉಮಿಕಲ್ ಬೆಟ್ಟದ ಲ್ಲಿರುವ ಪರಶುರಾಮ ಥೀಮ್ ಪಾರ್ಕಿನಲ್ಲಿ ಮೊನ್ನೆ ನಡೆದ ತಾಮ್ರ ಹೊದಿಕೆ ಕಳ್ಳತನ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದ್ದು, ಇದು ಕ್ಷೇತ್ರದ ಶಾಸಕ ಸುನಿಲ್‌ಕುಮಾರ್ ಅವರ ಪೂರ್ವಯೋಜಿತ ಕೃತ್ಯದಂತೆ ಕಾಣುತ್ತಿದೆ ಎಂದು ಕಾರ್ಕಳದ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.

ಕಳ್ಳತನ ನಡೆದು ಅದಕ್ಕೆ ಸಂಬಂಧಪಟ್ಟವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಮೊದಲೇ ಸುನಿಲ್‌ ಕುಮಾರ್ ತನ್ನ ಫೇಸ್‌ಬುಕ್ ಪೋಸ್ಟ್ ಮೂಲಕ ಕಳ್ಳತನದ ಮಾಹಿತಿಯನ್ನು ಹಂಚಿಕೊಳ್ಳಲು ಹೇಗೆ ಸಾಧ್ಯವಾ ಯಿತು..? ಎಂದು ಉಡುಪಿಯಲ್ಲಿ ಕರೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ಪೊಲೀಸರಿಗೆ ಮಾಹಿತಿ ಸಿಕ್ಕಿ ಅವರು ಪ್ರಕರಣ ದಾಖಲಿಸಿಕೊಳ್ಳುವ ಮೊದಲೇ ಕಳ್ಳತನದ ಪ್ರಥಮ ಮಾಹಿತಿ ಸುನಿಲ್ ಕುಮಾರ್‌ಗೆ ಹೇಗೆ ದೊರಕಿತು...?. ಘಟನೆ ನಡೆದ ಮರುದಿನ ಸುನಿಲ್ ಕುಮಾರ್ ಮತ್ತವರ ತಂಡ ಪರಶುರಾಮ ಬೆಟ್ಟದ ಮೇಲೆ ಹೋಗಿ ಮಾಧ್ಯಮದ ಮುಂದೆ ಮಾತನಾಡಿದ ವಿಚಾರಗಳು ಇದು ಪೂರ್ವ ಯೋಜಿತ ಕೃತ್ಯ ಎನ್ನುವುದಕ್ಕೆ ಸಾಕ್ಷಿ ನುಡಿಯುತ್ತಿದೆ ಎಂದವರು ಹೇಳಿದರು.

ಮೊದಲಿಗೆ ತಾವೇ ಕಳ್ಳತನ ನಡೆಸಿ ನಂತರ ಇವರದೇ ತಂಡ ಬೆಟ್ಟದ ಮೇಲೆ ಹೋಗಿ ಅದನ್ನು ಪರಿಶೀಲನೆ ಮಾಡಿ, ನಂತರ ಅಲ್ಲಿ ಸ್ವಚ್ಚತಾ ಕಾರ್ಯದ ಕಾರ್ಯಕ್ರಮ ಮಾಡುತ್ತೇವೆ ಎಂದಿರುವುದು ಏನನ್ನು ಸೂಚಿಸುತ್ತದೆ...?. ಬೆಟ್ಟದ ಮೇಲೆ ಯಾವುದೇ ರಕ್ಷಣೆ ಇಲ್ಲದೇ, ಲಕ್ಷಾಂತರ ರೂ.ಮೌಲ್ಯದ ಸೊತ್ತುಗಳಿರುವಾಗ, ರಸ್ತೆಗೆ ಕಾಣುವಂತೆ ಎತ್ತರ ದಲ್ಲಿದ್ದ ಮಾಡಿನ ಒಂದೆರಡು ಸಾವಿರ ರೂ.ಮೌಲ್ಯದ ಕೆಲವು ತುಂಡು ತಾಮ್ರದ ಹೊದಿಕೆಯನ್ನು ಮಾತ್ರ ಕಳ್ಳತನ ಮಾಡಿರುವುದು ಕಳ್ಳ ಯಾರು ಎಂಬುದಕ್ಕೆ ಸಾಕ್ಷಿ ನುಡಿಯುತ್ತದೆ ಎಂದು ಮುನಿಯಾಲು ನುಡಿದರು.

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಮಾತನಾಡಿ, ಸುನಿಲ್ ಕುಮಾರ್ ಮತ್ತವರ ತಂಡ ಥೀಮ್‌ ಪಾರ್ಕ್‌ನಲ್ಲಿ ಸ್ವಚ್ಛತಾ ಕಾರ್ಯ ಮಾಡುವುದನ್ನು ನಾವು ಸ್ವಾಗತಿಸುತ್ತೇವೆ. ಅವರೇ ಮಾಡಿದ ಕಸವನ್ನು, ತ್ಯಾಜ್ಯವನ್ನು ಅವರೇ ಸ್ವಚ್ಛ ಮಾಡುವುದು ಒಳ್ಳೆಯ ಕ್ರಮ. ಅದೇ ರೀತಿ ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದಕ್ಕೂ ನಮ್ಮ ಸಹಮತವಿದೆ. ಅಲ್ಲಿಗೆ ಬರುವ ಎಲ್ಲರೂ, ಶಾಸಕರು ಮತ್ತವರ ತಂಡ ಪರಶುರಾಮನ ಕಂಚಿನ ಮೂರ್ತಿಯ ಹೆಸರಿನಲ್ಲಿ ಅಲ್ಲಿ ಮಾಡಿದ ಅವಾಂತರವನ್ನು, ಬೆಟ್ಟದ ಮೇಲೆ ನಿಂತಿರುವ ನಕಲಿ ಮೂರ್ತಿ ಯನ್ನು ನೋಡಿ ಎಲ್ಲವನ್ನೂ ಅರ್ಥ ಮಾಡಿಕೊಳ್ಳಬಲ್ಲರು ಎಂದು ವ್ಯಂಗ್ಯವಾಡಿದರು.

ಉಮಿಕಲ್ ಬೆಟ್ಟದ ಮೇಲೆ ಮತ್ತೆ ಭವ್ಯವಾದ ಪರಶುರಾಮನ ಪ್ರತಿಮೆ ನಿರ್ಮಾಣ ಆಗಬೇಕೆಂದು ನಾನು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದೇನೆ ಎಂದಿರುವ ಮುನಿಯಾಲು, ನನ್ನ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ 5 ಲಕ್ಷ ರೂ. ಮೊತ್ತವನ್ನು ಪಾವತಿಸುವಂತೆ ನಿರ್ದೇಶನ ನೀಡಿದ್ದು ಅದರಂತೆ ನಾನು ಮೊತ್ತವನ್ನು ಪಾವತಿಸಿ ಮುಂದಿನ ಆದೇಶಕ್ಕೆ ಕಾಯುತ್ತಿದ್ದೇನೆ ಎಂದರು.

ನನ್ನ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಿಂದ ಕಂಗೆಟ್ಟಿರುವ ಶಾಸಕರು ಸಾರ್ವಜನಿಕರ ಗಮನವನ್ನು ಸೆಳೆಯಲು ಮತ್ತೆ ಹಳೆಯ ನಾಟಕವಾಡುತಿದ್ದು, ಎಲ್ಲರ ಗಮನ ಸೆಳೆಯಲು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ಮಾಡಿರುವ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಶಾಸಕರು ಅಲ್ಲಿರುವ ಕಸವನ್ನು ಎತ್ತಲೇ ಬೇಕು ಎಂದು ಲೇವಡಿ ಮಾಡಿದರು.

ಪರಶುರಾಮ ಥೀಮ್ ಪಾರ್ಕ್ ಯೋಜನೆಯನ್ನು ಮತ್ತೆ ಶಾಸ್ತ್ರೋಕ್ತವಾಗಿ ಪುನರಾರಂಭಿಸಬೇಕೆಂಬುದು ನನ್ನ ಉದ್ದೇಶವಾಗಿದೆ. ಆದರೆ ಅದಕ್ಕೂ ಸುನಿಲ್ ಕುಮಾರ್ ತಡೆಯೊಡ್ಡುವ ಕೆಲಸ ಮಾಡುತಿದ್ದಾರೆ. ಪರಶುರಾಮ ಪಾರ್ಕ್ ಆವರಣದಲ್ಲಿ ಸಿಸಿ ಕ್ಯಾಮೆರಾವನ್ನು ಅಳವಡಿಸಬೇಕೆಂದು ಹೋರಾಟಗಾರರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಆದರೆ ಇನ್ನೂ ಕೂಡ ಸಿಸಿ ಕ್ಯಾಮೆರಾ ಅಳವಡಿಸದೇ ಇರುವುದು ಜಿಲ್ಲಾಡಳಿತದ ಬೇಜವಾಬ್ದಾರಿ ಯಾಗಿದೆ. ಅಲ್ಲಿ ನಡೆಯುತ್ತಿರುವ ಎಲ್ಲಾ ಘಟನೆಗಳಿಗೂ ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತವೇ ಹೊಣೆ ಆಗುತ್ತದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಕರಣವು ನ್ಯಾಯಾಲಯದಲ್ಲಿರುವುದರಿಂದ ಪರಶುರಾಮ ಥೀಮ್ ಪಾರ್ಕ್ ಸುತ್ತಮುತ್ತ ಸ್ವಚ್ಛತಾ ಕಾರ್ಯವನ್ನು ಜಿಲ್ಲಾಡಳಿತವೇ ನಡೆಸಿ ಅಲ್ಲಿನ ಸುರಕ್ಷತೆಯನ್ನು ಕಾಪಾಡಬೇಕು. ಪೊಲೀಸರು ಕಳ್ಳತನ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.

ಕಾರ್ಕಳ ಮತ್ತು ಹೆಬ್ರಿಯ ಪ್ರಮುಖ ಕಾಂಗ್ರೆಸ್ ಮುಖಂಡರು ಉಪಸ್ಥಿತ ರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News