ಪಿ.ಎಂ. ಶ್ರಮಯೋಗಿ ಮಾನ್-ಧನ್ ಯೋಜನೆ: ವಿಶೇಷ ನೋಂದಣಿ ಅಭಿಯಾನ
ಉಡುಪಿ, ಜ.17: ಕೇಂದ್ರ ಸರಕಾರದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆ ಹಾಗೂ ವ್ಯಾಪಾರಿ ಗಳಿಗೆ ಮತ್ತು ಸ್ವಉದ್ಯೋಗಿಗಳಿಗೆ ರಾಷ್ಟ್ರೀಯ ಪೆನ್ಷನ್ (ಎನ್‌ಪಿಎಸ್ ಟ್ರೇಡರ್ಸ್) ಯೋಜನೆಗಳಡಿ ಅಸಂಘಟಿತ ವಲಯದ ಕಾರ್ಮಿಕರು, ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳನ್ನು ನೋಂದಾಯಿಸಲು ಜ. 15ರಿಂದ ಮಾರ್ಚ್ 15ರವರೆಗೆ ‘ವಿಶೇಷ ನೋಂದಣಿ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗಿದೆ. 18ರಿಂದ 40 ವರ್ಷ ದೊಳಗಿನ ಅಸಂಘಟಿತ ಕಾರ್ಮಿಕರು ಈ ಯೋಜನೆಯಡಿ ಹೆಸರು ನೋಂದಾಯಿಸಬಹುದಾಗಿದೆ.
ಇದರಲ್ಲಿ ವಯಸ್ಸಿಗನುಗುಣವಾಗಿ ಮಾಸಿಕವಾಗಿ 55 ರೂ.ನಿಂದ 200 ರೂ.ವರೆಗೆ ವಂತಿಕೆ ಪಾವತಿ ಮಾಡಬೇಕು. ಕೇಂದ್ರ ಸರಕಾರದ ವತಿಯಿಂದ ಅಷ್ಟೇ ವಂತಿಕೆ ಪಾವತಿಸಿ ಬ್ಯಾಂಕ್ ಖಾತೆಯಲ್ಲಿ ಸದರಿ ಮೊತ್ತವನ್ನು ಸಂಗ್ರಹಿಸಲಾ ಗುತ್ತದೆ. 60 ವರ್ಷ ಪೂರ್ಣಗೊಂಡ ನಂತರ ಮಾಸಿಕ 3000 ರೂ. ಪಿಂಚಣಿ ಸೌಲಭ್ಯ ಪಡೆಯಬಹುದು.
ಈ ಯೋಜನೆಯಡಿ ನರೇಗಾ ಕಾರ್ಮಿಕರು, ಎಸ್.ಹೆಚ್.ಜಿ ಸದಸ್ಯರು, ಕೃಷಿ ಕಾರ್ಮಿಕರು, ಅಂಗನವಾಡಿ ಕಾರ್ಮಿಕರು, ಮಧ್ಯಾಹ್ನದ ಬಿಸಿ ಊಟದ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಬೀದಿ ಬದಿ ವ್ಯಾಪಾರಿಗಳು, ಗೃಹ ಕಾರ್ಮಿಕರು, ಮೀನುಗಾರರು, ಇನ್ನಿತರೆ ಅಸಂಘಟಿತ ವಲಯಗಳ ಕಾರ್ಮಿಕರು ಹಾಗೂ ವ್ಯಾಪಾರಿಗಳು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ಮೊದಲ ತಿಂಗಳ ವಂತಿಕೆಯೊಂದಿಗೆ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಣಿಯಾಗಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ರಜತಾದ್ರಿಯ ಕಾರ್ಮಿಕ ಅಧಿಕಾರಿಗಳ ಕಚೇರಿ ಅಥವಾ ತಾಲೂಕು ಕಾರ್ಮಿಕ ನಿರೀಕ್ಷಕರ ಕಛೇರಿಯನ್ನು ಸಂಪರ್ಕಿಸ ಬಹುದು ಎಂದು ಉಡುಪಿ ಉಪವಿಭಾಗದ ಕಾರ್ಮಿಕ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.