ಕುಂದಾಪುರ: ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪೌರ ನೌಕರರಿಂದ ಮುಷ್ಕರ
ಕುಂದಾಪುರ: ಹೊರಗುತ್ತಿಗೆ ಆಧಾರದಲ್ಲಿ ಯಾವುದೇ ಭದ್ರತೆ ಇಲ್ಲದೇ ಕೆಲಸ ಮಾಡುವ ಪೌರ ನೌಕರರಿಗೆ ಭದ್ರತೆ ಒದಗಿಸುವ ಕೆಲಸ ರಾಜ್ಯ ಸರಕಾರದ ಜವಾಬ್ದಾರಿ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದ್ದಾರೆ.
ಪೌರ ನೌಕರರ ಎಂಟು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದಾದ್ಯಂತ ಪೌರ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಕುಂದಾಪುರ ಪುರಸಭೆ ಎದುರು ನಡೆದಿರುವ ಧರಣಿಯನ್ನು ಬೆಂಬಲಿಸಿ ಅವರು ಮಾತನಾಡುತಿದ್ದರು.
ಹೊರಗುತ್ತಿಗೆ ಒಂದು ಅನಿಷ್ಟ ಪದ್ಧತಿಯಾಗಿದ್ದು ಸರಕಾರದ ಪಾಲಿಸಿ ಬದಲಾಗಬೇಕು. ಪೌರ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಿ ಎಲ್ಲಾ ನೌಕರರಿಗೂ ಜೀವನ ಭದ್ರತೆ ಒದಗಿಸುವ ಮೂಲಕ ಎಲ್ಲಾ ಸೌಲಭ್ಯಗಳನ್ನು ಅವರಿಗೆ ನೀಡಬೇಕು ಎಂದವರು ಆಗ್ರಹಿಸಿದರು.
ರಾಜ್ಯ ಸರಕಾರ ಪೌರ ನೌಕರರ ಜೊತೆ ಜಂಟಿ ಸಭೆ ನಡೆಸಿ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಪುರಸಭೆ ಕೆಲಸಗಳಿಗೆ ಬರುವ ಜನರಿಗೆ ತೊಂದರೆಯಾಗಲಿದೆ. ಸರಕಾರ ಕೂಡಲೇ ಈ ಬಗ್ಗೆ ಗಮನಿಸಬೇಕು ಎಂದು ಒತ್ತಾಯಿಸಿದ ಅವರು ಬೇಡಿಕೆ ಈಡೇರುವ ತನಕ ಸಿಐಟಿಯು ಪೌರ ಕಾರ್ಮಿಕರ ಹೋರಾಟದಲ್ಲಿ ಭಾಗವಹಿಸುತ್ತದೆ ಎಂದು ಭರವಸೆ ನೀಡಿದರು.
ಪುರಸಭಾಧ್ಯಕ್ಷ ಮೋಹನದಾಸ್ ಶೆಣೈ, ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿಯ ಸದಸ್ಯ ಪ್ರಭಾಕರ್ ವಿ., ಸದಸ್ಯರಾದ ದೇವಕಿ ಸಣ್ಣಯ್ಯ, ಶ್ರೀಧರ್ ಶೇರಿಗಾರ್, ಗಿರೀಶ್ ಜಿ.ಕೆ. ಮೊದಲಾದವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.
ಪೌರ ಕಾರ್ಮಿಕರ ವಿವಿಧ ಬೇಡಿಕೆಗಳು:
► ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ರಾಜ್ಯ ಸರಕಾರಿ ನೌಕರರೆಂದು ಪರಿಗಣಿಸಿ ಆದೇಶ ಹೊರಡಿಸಬೇಕು.
► ಜ್ಯೋತಿ ಸಂಜೀವಿನಿ ಯೋಜನೆ ಸೇರಿದಂತೆ ಕೆಜಿಐಡಿ ಮತ್ತು ಇತರೆ ಸೌಲಭ್ಯಗಳನ್ನು ಪುರಸಭಾ ನೌಕರರಿಗೂ ಅನ್ವಯಿಸಬೇಕು.
► ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆಯಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು ಕಾರ್ಮಿಕರು, ವಾಹನ ಚಾಲಕರು, ಲೋಡರ್ಸ್, ಕ್ಲೀನರ್‌ಗಳು, ಗಾರ್ಡನರ್, ಸ್ಯಾನಿಟರಿ ಸೂಪರ್ ವೈಸರ್‌ಗಳು, ಕಂಪ್ಯೂಟರ್ ಆಪರೇಟರ್, ಯುಜಿಡಿ ಸಹಾಯಕರು ಸೇರಿದಂತೆ ವಿವಿಧ ವೃಂದದ ಹೊರಗುತ್ತಿಗೆ ಕಾರ್ಮಿಕರನ್ನು ನಗರ ಸ್ಥಳೀಯ ಸಂಸ್ಥೆಯಿಂದ ನೇರಪಾವತಿಗೆ ಒಳಪಡಿಸಬೇಕು.
► ದಿನಗೂಲಿ, ಕ್ಷೇಮಾಭಿವೃದ್ಧಿ, ಸಮಾನ ಕೆಲಸಕ್ಕೆ ಸಮಾನ ವೇತನದಡಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ಖಾಯಂ ಮಾಡಬೇಕು.
► ವಿಶೇಷ ನೇಮಕಾತಿಯಡಿ ಖಾಯಂಗೊಂಡ ನೌಕರರಿಗೆ ಎಸ್.ಎಫ್.ಸಿ ಅನುದಾನದಿಂದ ವೇತನ ನೀಡಬೇಕು.
► ಪೌರ ನೌಕರರಗೆ ಗೃಹಭಾಗ್ಯ ಯೋಜನೆಯನ್ನು ಅನ್ವಯಿಸಬೇಕು.
► ಅಕೌಂಟಿಂಗ್ ಕನ್ಸಲ್ಟೆಂಟ್, ಜೂನಿಯರ್ ಮತ್ತು ಸೀನಿಯರ್ ಪ್ರೋಗ್ರಾಮರ್‌ಗಳಿಗೆ ಸೇವಾ ಸೌಲಭ್ಯವನ್ನು ನೀಡಬೇಕು.
► ಪೌರನೌಕರರು ಗುಡಿಸಲುಗಳ ಬದಲಾಗಿ ಆರ್‌ಸಿಸಿ ಮನೆ ನಿರ್ಮಿಸಿಕೊಳ್ಳಲು ಈಗಾಗಲೇ ಸರಕಾರ ರೂ.7.50 ಲಕ್ಷ ಮಂಜೂರು ಮಾಡಿದ್ದು, ಕಟ್ಟಡ ಸಾಮಗ್ರಿಗಳ ಬೆಲೆ ಹೆಚ್ಚಳವಾಗಿರುವುದರಿಂದ ಅದನ್ನು ರೂ.15.00 ಲಕ್ಷಕ್ಕೆ ಏರಿಸಬೇಕು.