ಕೇಂದ್ರ ಸರಕಾರದ ಹಿಂಸೆ, ಕುರುಡುತನದ ವಿರುದ್ಧ ಪ್ರತಿಭಟನೆ: ಫಣಿರಾಜ್

ದಿಲ್ಲಿ ಪೊಲೀಸ್ ದೌರ್ಜನ್ಯದ ವಿರುದ್ಧ ವಿವಿಧ ಸಂಘಟನೆಗಳ ಪ್ರತಿಭಟನೆ

Update: 2026-07-22 21:26 IST

ಉಡುಪಿ, ಜು.22: ಕೇಂದ್ರದಲ್ಲಿರುವ ಸರಕಾರಕ್ಕೆ ಮುಖ್ಯಸ್ಥರೇ ಇಲ್ಲ. ಈ ಸರಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಬಗ್ಗೆ ನಂಬಿಕೆ ಇಲ್ಲ. ಸರಕಾರಕ್ಕೆ ದೇಶದ ಯುವಜನರ ಧ್ವನಿ ಕೇಳುತ್ತಿಲ್ಲ. ಅಷ್ಟಾಗಿಯೂ ಅವರು ಈ ಕ್ರೂರ ಹಿಂಸೆಯನ್ನು ಮುಂದುವರಿಸಿದ್ದಾರೆ ಹಾಗೂ ಇನ್ನೂ ಮುಂದುವರಿಸಲಿದ್ದಾರೆ ಎಂದು ಉಡುಪಿ ಸಹಬಾಳ್ವೆ ಸಂಘಟನೆಯ ಚಿಂತಕ ಪ್ರೊ.ಫಣಿರಾಜ್ ಹೇಳಿದ್ದಾರೆ.

ಹೊಸದಿಲ್ಲಿಯಲ್ಲಿ ನೀಟ್ ಹಗರಣದ ವಿರುದ್ಧ ಪ್ರತಿಭಟನ ನಿರತ ವಿದ್ಯಾಥಿಗಳು ಹಾಗೂ ಯುವಜನರ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಸಹಬಾಳ್ವೆ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಎಸ್‌ಐಓ ಹಾಗೂ ಉಡುಪಿ ಜಿಲ್ಲಾ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಸಂಘಟನೆಗಳು ಇಂದು ಸಂಜೆ ನಗರದ ಹಳೆ ಬಸ್‌ ನಿಲ್ದಾಣದ ಬಳಿ ನಡೆಸಿದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಜಂತರ್‌ಮಂತರ್‌ನಲ್ಲಿ ಸೇರಿದ್ದ ಯುವಜನತೆಯನ್ನು ತೆರವುಗೊಳಿಸಲು ಸರಕಾರ ಎಲ್ಲಾ ಪ್ರಯತ್ನ ಮಾಡಿದ್ದರೂ, ಜು.21ರ ರಾತ್ರಿಯೇ ಮತ್ತೆ 40,000 ವಿದ್ಯಾರ್ಥಿಗಳು ಅಲ್ಲಿ ಸೇರಿದ್ದಾರೆ. ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ ಎಂದವರು ಹೇಳಿದರು.

ವಿದ್ಯಾರ್ಥಿಗಳು, ಯುವಜನರು ಮಾತ್ರವಲ್ಲ, ಭಾರತದ ಎಲ್ಲಾ ನಾಗರಿಕರು, ಭಾರತದ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ನಮ್ಮ ಉತ್ತರದಾಯಿತ್ವವನ್ನು ಹೇಳುವುದಕ್ಕೆ ಪ್ರತಿ ಊರಿನಲ್ಲೂ ಪ್ರತಿಭಟನೆಯನ್ನು ಮಾಡಬೇಕು ಎಂದು ಕರೆ ನೀಡಿದ ಪ್ರೊ.ಫಣಿರಾಜ್, ಇದು ಸಿಜೆಪಿ ಕೊಡುವ ಕರೆಯಲ್ಲ, ಇದು ನಮ್ಮ ಭಾರತದ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಅಂತ:ಸಾಕ್ಷಿಯನ್ನು ಹೊತ್ತುಕೊಂಡ ನಾವೆಲ್ಲ ಮಾಡಬೇಕಾದ ಕೆಲಸ ಎಂದರು.

ಈ ಕಾರಣಕ್ಕಾಗಿ ಸಹಭಾಗಿ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿ ಹಾಗೂ ಯುವಜನರ ಮೇಲೆ ಪೊಲೀಸರ ದೌರ್ಜನ್ಯವನ್ನು ಹಾಗೂ ಸರಕಾರದ ಕಿವುಡುತನ ಮತ್ತು ಕುರುಡುತನವನ್ನು ಖಂಡಿಸಿ ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ಭಾಗವಹಿಸಲು ಹೊಸದಿಲ್ಲಿಗೆ ತೆರಳಿ ಜು.20ರಂದು ಜಂತರ್‌ಮಂತರ್‌ನಲ್ಲಿ ನಡೆದ ಪ್ರತಿಭಟನೆ ಯಲ್ಲಿ ಪಾಲ್ಗೊಂಡ ಮಣಿಪಾಲದ ವಿದ್ಯಾರ್ಥಿ ಅಶ್ವಥ್ ಸಿಂಗ್ ಅವರು ಸಭೆಯಲ್ಲಿ ಭಾಗವಹಿಸಿ ಶಾಂತಿಯುತವಾಗಿ ನಡೆಯುತಿದ್ದ ವಿದ್ಯಾರ್ಥಿಗಳ ಪ್ರತಿಭಟನೆಯ ಮೇಲೆ ಪೊಲೀಸರು ಅಂದು ಅಪ್ರಚೋದಿತರಾಗಿ ನಡೆಸಿದ ದೌರ್ಜನ್ಯವನ್ನು ವಿವರಿಸಿದರು.

ಪ್ರತಿಭಟನೆಯಲ್ಲಿ ಸಂವರ್ತ್ ಸಾಹೀಲ್, ಹುಸೇನ್ ಕೋಡಿಬೆಂಗ್ರೆ, ಸುಂದರ್ ಮಾಸ್ತರ್, ಅಯಾನ್ ಮಲ್ಪೆ, ಮುಹಮ್ಮದ್ ಮೌಲ, ಇಸ್ಮಾಯಿಲ್ ಕಟಪಾಡಿ, ಶ್ಯಾಮ್‌ರಾಜ್ ಬಿರ್ತಿ, ಮಂಜುನಾಥ ಗಿಳಿಯಾರು, ಹೈಫಾ, ಅಝೀಜ್ ಉದ್ಯಾವರ, ನಿಸಾರ್ ಉಡುಪಿ, ಮಂಜುನಾಥ್ ಬಾಳ್ಕುದ್ರು, ಹುಮೇರಾ ಕಾರ್ಕಳ, ಸುನೀಲ್ ಡಿ.ಬಂಗೇರ ಮುಂತಾದವರು ಭಾಗವಹಿಸಿದ್ದರು.



 


 



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News