ಮಾದಕ ವ್ಯಸನ ಮುಕ್ತ ಯುವ ಸಮಾಜಕ್ಕಾಗಿ ಜಾಗೃತಿ ಅತ್ಯಗತ್ಯ: ನಿತಿನ್ ರಾವ್ ವೈ

Update: 2026-07-22 19:47 IST

ಉಡುಪಿ, ಜು.22: ಮಾದಕ ದ್ರವ್ಯ ಸೇವನೆ ವ್ಯಸನ ಇತ್ತೀಚೆಗೆ ದೇಶದ ಯುವಜನತೆಯಲ್ಲಿ ಹೆಚ್ಚಾಗಿದ್ದು, ಜಿಲ್ಲೆಯಲ್ಲೂ ಸಾಕಷ್ಟು ಪ್ರಕರಣಗಳು ಕಂಡುಬಂದಿವೆ. ಆದ್ದರಿಂದಮಾದಕ ವ್ಯಸನ ಮುಕ್ತ ಯುವ ಸಮಾಜದ ನಿರ್ಮಾಣಕ್ಕಾಗಿ ಯುವಜನತೆಗೆ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನಿತಿನ್ ವೈ.ರಾವ್ ಹೇಳಿದ್ದಾರೆ.

ನಗರದ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ಮಾದಕ ವ್ಯಸನ ಜಾಗೃತಿ ಕಾರ್ಯಕ್ರಮ ‘ರೈಸ್ ಆ್ಯಂಡ್ ಬೇಡ ಬ್ರೋ’ ಅಂಗವಾಗಿ ಜಿಲ್ಲಾಮಟ್ಟದ ಕಾಲೇಜು ಮಾದಕ ವ್ಯಸನ ವಿರೋಧಿ ಮತ್ತು ಜಾಗೃತಿ ಸಮಿತಿಗಳ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಜನರು ಮಾದಕ ವ್ಯಸನಿಗಳಾಗಲು ಕೌಟುಂಬಿಕ ಸಮಸ್ಯೆ, ಶೈಕ್ಷಣಿಕ ಒತ್ತಡ, ಸ್ನೇಹಿತರ ಒತ್ತಾಯ, ಕುತೂಹಲ, ಚಲನಚಿತ್ರಗಳ ಪ್ರಭಾವ ಪ್ರಮುಖ ಕಾರಣಗಳಾಗಬಹುದು. ಆದರೆ ಯುವ ಜನತೆ ಇವುಗಳ ಬಲೆಗೆ ಸಿಲುಕಿ ಅಥವಾ ಪ್ರೇರಣೆ ಪಡೆದು ದುಶ್ಚಟಗಳ ದಾಸರಾಗಬಾರದು ಎಂದು ಕಿವಿಮಾತು ಹೇಳಿದರು.

ಎನ್‌ಡಿಪಿಎಸ್ ಕಾಯ್ದೆ ಪ್ರಕಾರ ಮಾದಕ ವಸ್ತುಗಳ ಉತ್ಪಾದನೆ, ಸಾಗಾಣಿಕೆ, ಸೇವನೆ ಮತ್ತು ಇಟ್ಟುಕೊಳ್ಳುವಿಕೆ ಶಿಕ್ಷಾರ್ಹ ಅಪರಾಧ. 1 ಕಿಲೋಗಿಂತ ಹೆಚ್ಚಿನ ಮಾದಕ ವಸ್ತುಗಳನ್ನು ಹೊಂದಿದ್ದರೆ ಅದು ವಾಣಿಜ್ಯ ಪ್ರಕರಣವಾಗಿ ಇದರಲ್ಲಿ ಜಾಮೀನು ಕೂಡಾ ಸಿಗುವುದಿಲ್ಲ. ಯಾರಾದರೂ ಮಾದಕ ವಸ್ತುಗಳನ್ನು ಸೇವಿಸುವುದು ಅಥವಾ ಮಾರಾಟ ಮಾಡುವುದು ಕಂಡುಬಂದಲ್ಲಿ ಕೂಡಲೇ ಕುಟುಂಬ ಸದಸ್ಯರಿಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ‘ಬೇಡ ಬ್ರೋ’ ಜಾಗೃತಿ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ಯುವಜನತೆಯಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮದ ಅವಶ್ಯಕತೆ ಇದೆ. ಜೀವನದಲ್ಲಿ ನಾವು ಏನಾಗಬೇಕು ಎನ್ನುವುದು ನಮ್ಮ ಕೈಯಲ್ಲೇ ಇದೆ. ಯುವ ಜನರು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಕಾರ್ಯಾಗಾರದಲ್ಲಿ ಪಡೆದ ಮಾಹಿತಿಯನ್ನು ಸ್ನೇಹಿತರು ಮತ್ತು ಕುಟುಂಬದವರ ಜೊತೆ ಹಂಚಿಕೊಂಡು ಎಲ್ಲರೂ ಮಾದಕ ವಸ್ತುಗಳಿಂದ ದೂರ ಇರುವಂತೆ ಮಾಡಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಜಿಲ್ಲೆಯಲ್ಲಿ ನಿರಂತರವಾಗಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಾದಕ ವಸ್ತುಗಳನ್ನು ಸೇವಿಸು ವಂತೆ ಆಮಿಷ ನೀಡಲಾಗುತ್ತದೆ. ಇದು ಕೇವಲ ವೈಯಕ್ತಿಕ ಮತ್ತು ಸಾಮಾಜಿಕ ಸಮಸ್ಯೆ ಮಾತ್ರವಲ್ಲ ಇದು ದೇಶದ ಆಂತರಿಕ ಭದ್ರತೆಯ ಸಮಸ್ಯೆ ಕೂಡಾ ಹೌದು. ನಮ್ಮ ಯುವಕರನ್ನು ಮಾದಕ ವಸ್ತುಗಳ ದಾಸರಾಗಿಸಿ ದೇಶದ ಅರ್ಥ ವ್ಯವಸ್ಥೆಯನ್ನು ಹಾಳು ಮಾಡುವ ಶತ್ರು ದೇಶಗಳ ಹುನ್ನಾರವಾಗಿದೆ. ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ತಡೆಯಲು ಕ್ಯೂಆರ್ ಕೋಡ್ ಅನ್ನು ಬಿಡುಗಡೆ ಮಾಡಿದ್ದು ಸಾರ್ವಜನಿಕರು ಮಾಹಿತಿ ನೀಡಬಹುದು. ಅದಾಗಲೇ 500 ಇನ್‌ಪುಟ್‌ಗಳು ಬಂದಿದ್ದು 42 ಪ್ರಕರಣಗಳು ದಾಖಲಾಗಿದೆ ಎಂದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್ ಪ್ರತಿಜ್ಞಾ ವಿಧಿ ಬೋಧಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಮನೋವೈದ್ಯ ಡಾ.ಪಿ.ವಿ. ಭಂಡಾರಿ, ಶ್ರೀ ಮಾತಾ ಆಸ್ಪತ್ರೆಯ ಪ್ರಕಾಶ್ ತೋಳಾರ್, ಮನೋ ವೈದ್ಯ ಡಾ.ವಿರೂಪಾ ಕ್ಷಪ್ಪ ದೇವರಮನೆ ಹಾಗೂ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಜಿಲ್ಲಾ ಸರ್ಜನ್ ಡಾ. ಅಶೋಕ್, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಡಾ. ರೋಷನ್, ಪದವಿ ಕಾಲೇಜುಗಳ ಸಮನ್ವಯಕಾರ ರವೀಂದ್ರ ಉಪಾಧ್ಯಾಯ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಮಂಜುನಾಥ್ ಭಟ್, ಡಾ.ಜಿ ಶಂಕರ್ ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ, ತೆಂಕ ನಿಡಿಯೂರು ಕಾಲೇಜು ಪ್ರಾಂಶುಪಾಲ ಪ್ರೊ.ನಿತ್ಯಾನಂದ ಗಾಂವ್ಕರ್ ಮತ್ತಿತರರು ಉಪಸ್ಥಿತರಿದ್ದರು.

ಕುಂದಾಪುರ ಉಪ ವಿಭಾಗ ಉಪನಿರೀಕ್ಷಕ ಎಚ್.ಡಿ ಕುಲಕರ್ಣಿ ಸ್ವಾಗತಿಸಿ, ಮಹಿಳಾ ಪೊಲೀಸ್ ಠಾಣೆ ನಿರೀಕ್ಷಕ ರಾಘವೇಂದ್ರ ವಂದಿಸಿದರು. ಎಪಿಸಿ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News