ಕುಂದಾಪುರ: ಶಾಲಾ ಬಸ್‌ಗಳು ನಿಯಮ ಪಾಲನೆಯಲ್ಲಿ ಎಚ್ಚರ ವಹಿಸಬೇಕು; ಪೊಲೀಸ್ ನಿರೀಕ್ಷಕ ಜಯರಾಮ ಗೌಡ

Update: 2026-07-22 19:45 IST

ಕುಂದಾಪುರ : ಶಾಲಾ ವಾಹನಗಳಲ್ಲಿ ನಿಯಮ ಉಲ್ಲಂಘನೆಯಾ ಗುತ್ತಿರುವ ಬಗ್ಗೆ ಒಂದಷ್ಟು ದೂರುಗಳು ಬರುತ್ತಿದ್ದು, ನಿಯಮ ಪಾಲನೆ ಬಗ್ಗೆ ಎಚ್ಚರಿಕೆ ಇರಬೇಕು. ಮಕ್ಕಳ ಸುರಕ್ಷತೆ ಆಯಾಯ ವಾಹನಗಳ ಚಾಲಕರು, ಶಿಕ್ಷಣ ಸಂಸ್ಥೆ ಗಳ ಜವಾಬ್ದಾರಿಯಾಗಿದೆ. ಎಲ್ಲ ದಾಖಲೆಗಳು ಕಡ್ಡಾಯವಾಗಿ ವಾಹನಗಳಲ್ಲಿ ಇರಬೇಕು. ತಪಾಸಣೆಗೆ ವೇಳೆ ಪೊಲೀಸರಿಗೆ ಸಹಕಾರ ನೀಡಿ ಎಂದು ಕುಂದಾಪುರ ನಗರ ಠಾಣೆ ಪೊಲೀಸ್ ನಿರೀಕ್ಷಕ ಜಯರಾಮ ಡಿ. ಗೌಡ ಹೇಳಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್, ಕುಂದಾಪುರ ಉಪವಿಭಾಗದ ಕುಂದಾಪುರ ಸಂಚಾರ ಪೊಲೀಸ್ ಠಾಣಾ ವತಿಯಿಂದ ಇಲ್ಲಿನ ಶ್ರೀರಕ್ತೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ವಿವಿಧ ಶಿಕ್ಷಣ ಸಂಸ್ಥೆಗಳ ಶಾಲಾ ವಾಹನಗಳ ಚಾಲಕರು, ನಿರ್ವಾಹಕರು, ಸಂಸ್ಥೆಯ ಪ್ರಮುಖರಿಗೆ ನಡೆದ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಸಂಚಾರ ಸುರಕ್ಷತೆಗಾಗಿ 5-6 ಕಡೆ ಸ್ಫೀಡ್ ರೆಡಾರ್ ಅಳವಡಿಸಲಾಗಿದೆ ಎಂದು ಅವರು ತಿಳಿಸಿದರು.

ಕುಂದಾಪುರ ಸಂಚಾರ ಠಾಣಾ ಉಪನಿರೀಕ್ಷಕ ಅನೂಪ್ ನಾಯಕ್ ಮಾತನಾಡಿ, ಮಕ್ಕಳ ಜೀವ-ಜೀವನ ಅಮೂಲ್ಯ. ಅತೀ ವೇಗ ಅಪಾಯಕ್ಕೆ ಕಾರಣವಾಗಿದೆ. ಇದರಿಂದ ಭವ್ಯ ಭವಿಷ್ಯವಿರುವ ಮಕ್ಕಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಗಳಿದ್ದು ಎಚ್ಚರಿಕೆ ವಹಿಸಿ. ಸಂಚಾರಿ ನಿಯಮ ಪಾಲನೆ ಮಾಡದಿರುವುದು ಕಂಡುಬಂದರೆ ಕಾನೂನು ಚೌಕಟ್ಟಿನಡಿ ಅಗತ್ಯ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಲಿದೆ. ಪ್ರತಿ ವಾರ ಶಾಲಾ ವಾಹನಗಳ ವಿಶೇಷ ಡ್ರೈವ್ ಮಾಡಲಾಗು ವುದು. ವರ್ಷದಲ್ಲಿ 5ಕ್ಕಿಂತ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೆ 3 ತಿಂಗಳು ಚಾಲನಾ ಪರವಾನಿಗೆ ಅಮಾನತು ಆಗಲಿದೆ ಎಂದು ಎಚ್ಚರಿಸಿದರು.

ಸಂಚಾರ ಠಾಣೆಯ ಉಪನಿರೀಕ್ಷಕಿ ಸುಧಾ ಪ್ರಭು, ಸಹಾಯಕ ಉಪನಿರೀಕ್ಷಕರಾದ ನಾಗರಾಜ್ ಕುಲಾಲ್, ಜನಾರ್ದನ್, ಸಿಬಂದಿಗಳಾದ ರವಿಚಂದ್ರ, ಶ್ರೀನಿವಾಸ, ಮಂಜುನಾಥ್, ಪ್ರಸಾದ್, ಕಲ್ಲೋಲಪ್ಪ ಭಜಂತ್ರಿ, ಭೂಪಾಲ್, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಮುಖರು, ಶಾಲಾ ವಾಹನಗಳ ಚಾಲಕರು, ನಿರ್ವಾಹಕರು ಉಪಸ್ಥಿತರಿದ್ದರು.

ಶಾಲಾ ಮುಖ್ಯಸ್ಥರು, ವಾಹನ ಚಾಲಕರಿಗೆ ಸೂಚನೆಗಳು

ಕುಂದಾಪುರ ಪೊಲೀಸರು ಶಾಲಾ ಮುಖ್ಯಸ್ಥರಿಗೆ ಹಾಗೂ ವಾಹನಗಳ ಚಾಲಕರಿಗೆ ಸಭೆಯಲ್ಲಿ ಅಗತ್ಯ ಸಲಹೆ, ಮಾರ್ಗಸೂಚಿಗಳನ್ನು ನೀಡಿದರು.

*ಚಾಲಕರು 5-10 ವರ್ಷದ ಚಾಲನಾ ಅನುಭವ ಹೊಂದಿರಬೇಕು. 5 ಬಾರಿ ಓವರ್ ಸ್ಪೀಡ್ ಕೇಸಾದರೆ ಚಾಲನಾ ಪರವಾನಗೆ ರದ್ದಾಗಬಹುದು.

*ಶಾಲಾ ವಾಹನ ಸುರಕ್ಷತಾ ಸಮಿತಿ ಕಡ್ಡಾಯ ಇರಬೇಕು.

*15 ವರ್ಷಕ್ಕಿಂತ ಹಿಂದಿನ ವಾಹನಗಳನ್ನು (ಫಿಟ್ನೆಸ್ ಸರ್ಟಿಫಿಕೇಟ್) ಶಾಲಾ ವಾಹನಗಳಾಗಿ ಬಳಸಬಾರದು.

*ಶಾಲಾ ವಾಹನಗಳಲ್ಲಿ ಕಡ್ಡಾಯವಾಗಿ ಎಲ್ಲಾ ದಾಖಲೆಗಳು ಇರಿಸಬೇಕು.

*ಶಾಲಾ ವಾಹನಗಳಿಗೆ ಹಳದಿ ಬಣ್ಣ ಇರಬೇಕು. ಗ್ರೀನ್ ಪಟ್ಟಿ ಇರಬೇಕು. ಬಾಡಿಗೆ ವಾಹನವಾದರೆ ‘ಶಾಲಾ ಕರ್ತವ್ಯದ ಮೇರೆಗೆ’ ಎಂದು ಫಲಕ ಅಳವಡಿಸಿ.

*ವಾಹನದ ಕಿಟಕಿಗೆ ಗ್ರಿಲ್ ಅಳವಡಿಸಬೇಕು. ಪ್ಯಾನಿಕ್ ಬಟನ್ ಕಡ್ಡಾಯ ಇರಬೇಕು. ಅದಕ್ಕೆ ಜಿಪಿಎಸ್ ಲಿಂಕ್ ಆಗಿರಬೇಕು.

*ಸಿಸಿಟಿವಿ ಶಾಲಾ ವಾಹನಗಳಲ್ಲಿ ಇರಲೇಬೇಕು. 15 ದಿನದ ಸ್ಟೋರೇಜ್ ಕೂಡ ಇರಬೇಕು.

*ಕಡ್ಡಾಯವಾಗಿ ಪ್ರಥಮ ಚಿಕಿತ್ಸೆ ಹಾಗೂ ಅಗ್ನಿ ಸುರಕ್ಷತಾ ಕಿಟ್ ಇರಬೇಕಿದ್ದು ಅದರ ಉಪಯೋಗದ ಅರಿವು ಅಗತ್ಯ.

‘ಶಾಲಾ ವಾಹನಗಳ ವೇಗದ ಮಿತಿ 40 ಕಿ.ಮೀ. ಆಗಿದ್ದು ಅತೀ ವೇಗ ಸರಿಯಲ್ಲ. ವಾಹನದೊಳಗೆ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಮಹಿಳಾ ನಿರ್ವಾಹಕರು ಕಡ್ಡಾಯ ಇರಬೇಕು. ವೇಗ ಹೆಚ್ಚಾದಾಗ ಅಪಘಾತ ಸಂಭವಿಸುತ್ತದೆ. ಎಲ್ಲ ಅಗತ್ಯ ನಂಬರ್ ವಾಹನಗಳಲ್ಲಿ ಇಟ್ಟುಕೊಂಡಿರಿ. ಮಕ್ಕಳ ಜೀವ ಅಮೂಲ್ಯ. ಮಕ್ಕಳನ್ನು ನಿಲ್ಲಿಸಬೇಡಿ. ಮಿತಿಗಿಂತ ಹೆಚ್ಚಿನ ಮಕ್ಕಳನ್ನು ಕರೆದೊಯ್ಯಬೇಡಿ. ರಿಕ್ಷಾದಲ್ಲಿ 6ಕ್ಕಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯಬೇಡಿ. ಚಾಲನೆ ವೇಳೆ ಮೊಬೈಲ್ ಬಳಸಬೇಡಿ. ವರ್ಷಕ್ಕೊಮ್ಮೆ ಸಂಸ್ಥೆ ವತಿಯಿಂದ ಚಾಲಕರ ಕಣ್ಣಿನ ತಪಾಸಣೆ ನಡೆಸಬೇಕು.

-ಅನೂಪ್ ನಾಯಕ್, ಕುಂದಾಪುರ ಸಂಚಾರ ಠಾಣೆ ಪಿಎಸ್‌ಐ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News