ವಿದ್ಯಾರ್ಥಿಗಳ ಮೇಲೆ ದಿಲ್ಲಿ ಪೊಲೀಸರ ದೌರ್ಜನ್ಯ: ಕಾಂಗ್ರೆಸ್ ಪ್ರತಿಭಟನೆ
ಕುಂದಾಪುರ, ಜು.22: ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ದೇಶದ ದೊಡ್ಡ ಹಗರಣವಾಗಿದ್ದು ಇದನ್ನು ಖಂಡಿಸಿ, ಕೇಂದ್ರದ ವೈಫಲ್ಯವನ್ನು ವಿರೋಧಿಸಿ ಹೋರಾಟ ನಡೆಸುವವರನ್ನು ಬಲಪ್ರಯೋಗದ ಮೂಲಕ ಹತ್ತಿಕ್ಕು ವುದು ಸರಿಯಲ್ಲ. ಇದು ಸಂವಿಧಾನ ವಿರೋಧಿ ನಡೆ. ಪ್ರಜಾಪ್ರಭುತ್ವ ದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟನೆಯ ಹಕ್ಕಿದೆ. ಭಿನ್ನಾಭಿಪ್ರಾಯಗಳನ್ನು ಗೌರವಿಸುವುದು ಮತ್ತು ಸಂವಾದದ ಮೂಲಕ ಸಮಸ್ಯೆಗಳನ್ನು ಪರಿಹರಿಸುವುದೇ ಪ್ರಜಾ ಪ್ರಭುತ್ವದ ನಿಜವಾದ ಮಾರ್ಗ ಎಂದು ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ ಹೇಳಿದ್ದಾರೆ.
ಬುಧವಾರ ಸಂಜೆ ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಹಾಗೂ ಕೋಟ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ, ಕೇಂದ್ರ ಸರಕಾರದ ವೈಫಲ್ಯ ಹಾಗೂ ದಿಲ್ಲಿ ಪೊಲೀಸರ ದೌರ್ಜನ್ಯ ವಿರೋಧಿಸಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಪ್ರತಿಕೃತಿ ದಹಿಸಿ ಆಕ್ರೋಶ: ಬಳಿಕ ಎನ್‌ಎಸ್‌ಯುಐ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು, ವಿದ್ಯಾರ್ಥಿಗಳು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪ್ರತಿಕೃತಿಯನ್ನು ರಸ್ತೆಯಲ್ಲಿಯೇ ದಹನ ಮಾಡಿ, ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆದೂರು ಸದಾನಂದ ಶೆಟ್ಟಿ, ತಿಮ್ಮ ಪೂಜಾರಿ ಕೋಟ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಅಶೋಕ ಪೂಜಾರಿ ಬೀಜಾಡಿ ಮಾತನಾಡಿದರು.
ಮುಖಂಡರಾದ ಜ್ಯೋತಿ ಪುತ್ರನ್, ದೇವಕಿ ಸಣ್ಣಯ್ಯ, ಕೃಷ್ಣದೇವ ಕಾರಂತ್, ಅಭಿಜಿತ್ ಪೂಜಾರಿ, ನಾಗೇಂದ್ರ, ಅಚ್ಯುತ ಪೂಜಾರಿ, ರೋಷನ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಕೇಶವ ಭಟ್, ರೋಷನ್ ಬೆರೆಟ್ಟೋ, ಚಂದ್ರಶೇಖರ ಖಾರ್ವಿ, ಎನ್‌ಎಸ್‌ಯುಐನ ಸೌರಭ್ ಬಲ್ಲಾಳ್, ಸುಜನ್ ಶೆಟ್ಟಿ, ಶಮಂತ್ ಮತ್ತಿತರ ನಾಯಕರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತ ನಿರೂಪಿಸಿದರು.