ಉಡುಪಿ ಜಿಲ್ಲೆಯಾದ್ಯಂತ ಮಳೆ ಇಳಿಮುಖ
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಇಂದು ರೆಡ್ ಅಲರ್ಟ್ ಇದ್ದರೂ ಬೆಳಗ್ಗೆ ನಂತರ ಮಳೆ ಪ್ರಮಾಣ ಇಳಿಮುಖವಾಗಿದೆ. ಬೆಳಗಿನ ಜಾವ ಕಾಪು, ಉಡುಪಿ ಸೇರಿದಂತೆ ಹಲವು ಭಾಗಗಳಲ್ಲಿ ಭಾರೀ ಗಾಳಿಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಕಾರ್ಕಳ-80.9ಮಿ.ಮೀ., ಕುಂದಾಪುರ-104.0ಮಿ.ಮೀ., ಉಡುಪಿ-145.7ಮಿ.ಮೀ., ಬೈಂದೂರು- 104.1ಮಿ.ಮೀ., ಬ್ರಹ್ಮಾವರ- 152.5ಮಿ.ಮೀ., ಕಾಪು-96.5ಮಿ.ಮೀ., ಹೆಬ್ರಿ-79.3ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 104.7 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಕಾಪು, ಪಡುಬಿದ್ರೆ, ಉಡುಪಿ, ಮಣಿಪಾಲ, ಕಾರ್ಕಳಗಳಲ್ಲಿ ಬೆಳಗ್ಗೆಯಿಂದ ಭಾರೀ ಗಾಳಿ ಮಳೆಯಾಗಿದ್ದು, ಹಲವು ಕಡೆ ಮರಗಳು ಬಿದ್ದು ತೊಂದರೆ ಉಂಟಾಗಿದೆ. ಕೆಲವು ಕಡೆ ವಿದ್ಯುತ್ ಕಂಬಗಳು ಧರೆಗೆ ಬಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ. ಬಳಿಕ ಮಧ್ಯಾಹ್ನದ ನಂತರ ಮಳೆ ಕಡಿಮೆಯಾಗಿ ಸಂಜೆ ವೇಳೆ ಸಂಪೂರ್ಣ ವಿರಾಮ ಪಡೆದಿದೆ. ಇದರಿಂದ ಉಡುಪಿ, ಮಣಿಪಾಲ ಸಹಿತ ಜಿಲ್ಲೆಯ ಎಲ್ಲ ಭಾಗದಲ್ಲೂ ಸಹಜ ಸ್ಥಿತಿ ಕಂಡುಬಂದಿದೆ.
ಹಲವು ಮನೆಗಳಿಗೆ ಹಾನಿ: ಕುಂದಾಪುರ ತಾಲೂಕಿನ 74 ಉಳ್ಳೂರು ಗ್ರಾಮದ ಎರಡು ಮನೆಗಳ ಮೇಲೆ ಮರ ಬಿದ್ದು ಒಟ್ಟು 20ಸಾವಿರ ರೂ. ಹಾಗೂ ಬ್ರಹ್ಮಾವರ ತಾಲೂಕಿನ ಹೇರೂರು ಹಾಗೂ ಹನೆಹಳ್ಳಿ ಗ್ರಾಮದ ಎರಡು ಮನೆಗಳಿಗೆ ಹಾನಿಯಾಗಿ ಒಟ್ಟು 35ಸಾವಿರ ರೂ. ಮತ್ತು ಬ್ರಹ್ಮಾವರ ಕಾರ್ಕಡದ ಗಿರಿಜ ಎಂಬವರ ಮನೆ ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿ 2ಲಕ್ಷ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಗಾಳಿಮಳೆಯಿಂದ ಕುಂದಾಪುರ ತಾಲೂಕಿನ 74 ಉಳ್ಳೂರು ವನಜ ಆಚಾರ್ಯ ಎಂಬವರ ಅಡಿಕೆ ಬೆಳೆ ಹಾನಿಯಾಗಿ 20,000ರೂ., ಮತ್ತು ಸಿದ್ದು ಅವರ ಅಡಿಕೆ ಬೆಳೆ ಹಾನಿಯಾಗಿ 15,000ರೂ. ನಷ್ಟ ಉಂಟಾಗಿದೆ. ಕುಂದಾಪುರ ಅಂಪಾರು ಎಂಬಲ್ಲಿ ಜಾನುವಾರು ಕೊಟ್ಟಿಗೆಗೆ ಮರ ಬಿದ್ದು ಭಾಗಶಃ ಹಾನಿಯಾಗಿ 10,000ರೂ. ನಷ್ಟವಾಗಿದೆ.
ಲಕ್ಷ್ಮೀಂದ್ರ ನಗರದಲ್ಲಿ ದುರಸ್ತಿ: ನಿನ್ನೆ ಸುರಿದ ಭಾರಿ ಮಳೆಯಿಂದ ಚರಂಡಿ ನೀರು ಅಂಗಡಿ ಮುಗ್ಗಟ್ಟುಗಳಿಗೆ ನುಗ್ಗಿ ಸಮಸ್ಯೆ ಉಂಟಾಗಿದ್ದ ಮಣಿಪಾಲ ಸಮೀಪದ ಲಕ್ಷ್ಮೀಂದ್ರ ನಗರ ಮತ್ತು ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿ ಚರಂಡಿ ದುರಸ್ತಿ ಕಾರ್ಯವನ್ನು ನಡೆಸಲಾಯಿತು.
ಲಕ್ಷ್ಮೀಂದ್ರ ನಗರದಲ್ಲಿ ಕಾಂಕ್ರೀಟ್ ರಸ್ತೆಯಿಂದ ಮುಚ್ಚಿದ್ದ ಭಾಗವನ್ನು ತೆರವು ಮಾಡಿ ಚರಂಡಿಗೆ ಸಂಕರ್ಪ ಕಲ್ಪಿಸಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಲಾಯಿತು. ಮಣಿಪಾಲ ಕೈಗಾರಿಕಾ ಪ್ರದೇಶ ಹಾಗೂ ನಗರಸಭಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಹಾಗೂ ಅಗಲ ಕಿರಿದಾಗಿರುವ ಚರಂಡಿ ಗಳನ್ನು ತೆರವು ಮಾಡಲಾಯಿತು.
ಸ್ಥಳಕ್ಕೆ ಭೇಟಿ ನೀಡಿದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯರಾದ ಭಾರತಿ ಪ್ರಶಾಂತ್, ಕಲ್ಪನ ಸುಧಾಮ, ಬಾಲಕೃಷ್ಣ ಶೆಟ್ಟಿ, ಅಶೋಕ್ ನಾಯ್ಕ್, ಚಂದ್ರಶೇಖರ್, ಗಿರಿಧರ ಆಚಾರ್ಯ, ಪ್ರಮುಖ ರಾದ ದಿನೇಶ್ ಅಮೀನ್, ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.