ರಾಮಮಂದಿರ ಹಗರಣ: ಪೇಜಾವರ ಶ್ರೀಗಳ ಮೌನ ಪ್ರಶ್ನಿಸಿದ ಉಗ್ರಪ್ಪ
ಉಡುಪಿ, ಜು.13: ಅಯೋಧ್ಯೆಯ ರಾಮಮಂದಿರದಲ್ಲಿ ನಡೆದಿರುವ ಹಣಕಾಸಿನ ಅವ್ಯವಹಾರದ ಹಗರಣದ ಕುರಿತಂತೆ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಮೌನವನ್ನು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪ್ರಶ್ನಿಸಿದ್ದಾರೆ.
ಸೋಮವಾರ ಉಡುಪಿಯ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರದ ವಿಷಯದಲ್ಲಿ ಕೇಳಿಬಂದಿರುವ ಬೃಹತ್ ಹಗರಣದಲ್ಲಿ ಅಲ್ಲಿನ ಟ್ರಸ್ಟಿಗಳಲ್ಲೊಬ್ಬರಾಗಿರುವ ಪೇಜಾವರ ಶ್ರೀಗಳು ಮೌನ ವಹಿಸಿರುವುದು ಏಕೆ ಎಂದವರು ಪ್ರಶ್ನಿಸಿದರು.
ಕಾಮ, ಕ್ರೋಧ, ಲೋಭ, ಮೋಹ ತ್ಯಜಿಸಿರುವ ಪೇಜಾವರಶ್ರೀಗಳು ರಾಮಮಂದಿರ ಹಗರಣದ ಬಗ್ಗೆ ಯಾಕೆ ಬಾಯಿ ಬಿಡುತ್ತಿಲ್ಲ? ಈ ಪ್ರಕರಣದಲ್ಲಿ ನಿಮ್ಮ ಪಾತ್ರವೂ ಇದೆಯೇ? ಎಂದು ಪ್ರಶ್ನಿಸಿದ ಉಗ್ರಪ್ಪ, ರಾಮಮಂದಿರಕ್ಕೆ ಸಂಬಂಧಿ ಸಿದ ಹಗರಣಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವೇ ನೇರ ಹೊಣೆ ಎಂದು ಆರೋಪಿಸಿದರು.
‘ಮರ್ಯಾದಾ ಪುರುಷೋತ್ತಮ’ನ ದೇವಸ್ಥಾನವನ್ನೇ ಲೂಟಿ ಮಾಡಿದವರು ದೇಶವನ್ನೂ ಲೂಟಿ ಮಾಡದೇ ಬಿಡುತ್ತಾ ರೆಯೇ? ಎಂದು ಉಗ್ರಪ್ಪ ವ್ಯಂಗ್ಯವಾಡಿದರು. ಬಿಜೆಪಿ, ಆರ್‌ಎಸ್‌ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ದೇಶವನ್ನು ಲೂಟಿ ಮಾಡುತ್ತಿರುವ ಸಂಘಟನೆಗಳಾಗಿವೆ ಎಂದು ಅವರು ಆರೋಪಿಸಿದರು.
ಪೇಜಾವರ ಶ್ರೀಗಳಿಗೆ ನೈತಿಕತೆ ಇದ್ದರೆ ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಅದೇ ರೀತಿ ರಾಮನ ಮೇಲೆ ಸ್ವಲ್ಪವಾದರೂ ಗೌರವವಿದ್ದರೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಂದರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಉಗ್ರಪ್ಪ ಒತ್ತಾಯಿಸಿದರು.
ರಾಮಮಂದಿರಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ, ಸತ್ಯಾಂಶವನ್ನು ದೇಶದ ಜನರ ಮುಂದಿಡಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.