×
Ad

ಉಡುಪಿ| ಸಂಜೆಯಿಂದ ಬಿರುಸುಗೊಂಡ ಮಳೆ; ಐದು ದಿನ ಕರಾವಳಿಗೆ ‘ರೆಡ್ ಅಲರ್ಟ್’

Update: 2025-06-11 19:41 IST

ಸಾಂದರ್ಭಿಕ ಚಿತ್ರ

ಉಡುಪಿ: ಮುಂಗಾರು ಮಳೆ ಪ್ರಾರಂಭಗೊಳ್ಳಬೇಕಿದ್ದ ಜೂನ್ 1ರಿಂದ ಹಠಾತ್ತನೆ ಕೈಕೊಟ್ಟು ರೈತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಮಳೆ ಇಂದು ಸಂಜೆಯಿಂದ ಜಿಲ್ಲೆಯಾದ್ಯಂತ ಮತ್ತೆ ಬಿರುಸಿನಿಂದ ಸುರಿಯತೊಡಗಿದ್ದು, ಮುಂದಿನ ಐದು ದಿನಗಳ ಕಾಲ ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಣೆಯಾಗಿದೆ.

ಕರಾವಳಿಯಲ್ಲಿ ಇಂದು ಆರೆಂಜ್ ಅಲರ್ಟ್ ಇದ್ದರೂ ಉತ್ತಮ ಬಿಸಿಲಿತ್ತು. ಆದರೆ ಮಧ್ಯಾಹ್ನದ ಬಳಿಕ ವಾತಾವರಣ ಹಠಾತ್ ಬದಲಾಗಿ ಸಂಜೆ ನಾಲ್ಕು ಗಂಟೆಯ ಬಳಿಕ ಗುಡುಗು ಸಿಡಿಲು ಸಹಿತ ಬಿರುಮಳೆ ಬೀಸತೊಡಗಿತು. ಆಗಾಗ ಜೋರಾದ ಗಾಳಿಯೂ ಬೀಸುತಿದ್ದು, ಮಳೆಗಾಲ ಮತ್ತೆ ಬಿರುಸುಗೊಳ್ಳುವ ಸೂಚನೆ ನೀಡಿದೆ.

ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ಜೂ.12ರಿಂದ 16ರವರೆಗೆ ರಾಜ್ಯ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್‌ನ ಘೋಷಣೆ ನೀಡಿದೆ. ಈ ದಿನಗಳಲ್ಲಿ 200ಮಿ.ಮೀ.ಗೂ ಅಧಿಕ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ದಿನ ನಿರಂತರ ಮಳೆ ಸುರಿಯುವ ಸಾದ್ಯತೆ ಇದ್ದು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಧ್ಯದಲ್ಲಿ ಮಳೆ ಬಿರುಸು ಕಡಿಮೆ ಇರುವ ಸಾಧ್ಯತೆಯನ್ನು ಹೇಳಲಾಗಿದೆ.

ಉಳಿದಂತೆ ರಾಜ್ಯದ ದಕ್ಷಿಣದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲದೇ ಉತ್ತರದ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಲ್ಲೂ ನಾಳೆ ರೆಡ್ ಅಲರ್ಟ್‌ನ ಘೋಷಣೆಯಾಗಿದ್ದು ಭಾರೀ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ.

ಕರಾವಳಿಯ ಮೂರು ಜಿಲ್ಲೆಗಳಲ್ಲಿ ನಾಳೆಯಿಂದ ಜೂನ್ 15ರವರೆಗೆ ಅಲ್ಲಲ್ಲಿ ಗಂಟೆಗೆ 30ರಿಂದ 40 ಕಿ.ಮೀ. ವೇಗದ ಗಾಳಿಯೊಂದಿಗೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆಯಲ್ಲಿ ಹೇಳಲಾಗಿದೆ.

ರಾಜ್ಯ ಕರಾವಳಿಯ ಬಂದರುಗಳಾದ ಕಾರವಾರ, ಮಂಗಳೂರು, ಪಣಂಬೂರು, ಹೊನ್ನಾವರ ಭಟ್ಕಳ, ಗಂಗೊಳ್ಳಿ, ಮಲ್ಪೆಗಳಲ್ಲಿ ಸ್ಥಳೀಯ ಎಚ್ಚರಿಕೆ ಸೂಚನೆಯಾದ ನಂಬರ್ 3ರ ಸಿಗ್ನಲ್‌ಗಳನ್ನು ಹಾರಿಸುವಂತೆ ತಿರುವನಂತಪುರಂನ ಸೈಕ್ಲೋನ್ ಎಚ್ಚರಿಕೆ ಕೇಂದ್ರ ತಿಳಿಸಿದೆ. ಕಡಲ ತೀರಗಳಲ್ಲಿ ಗಂಟೆಗೆ 35ರಿಂದ 45, ಕೆಲವೊಮ್ಮೆ 55ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದು ಎಚ್ಚರಿಕೆಯಲ್ಲಿ ತಿಳಿಸಲಾಗಿದೆ.

ಜಿಲ್ಲೆಯ ಕಾಪು ತಾಲೂಕಿನ ಉಳಿಯಾರಗೊಳಿ ಎಂಬಲ್ಲಿ ವಾಸುದೇವ ಆಚಾರ್ಯರ ಮನೆ ಗಾಳಿ-ಮಳೆಗೆ ಭಾಗಶ: ಹಾನಿಗೊಂಡಿದ್ದು 62,000ರೂ. ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News