ಅಡವಿಟ್ಟ ಚಿನ್ನ ವಾಪಾಸ್ಸು ನೀಡಿದೆ ವಂಚನೆ: ಪ್ರಕರಣ ದಾಖಲು
ಗಂಗೊಳ್ಳಿ, ನ.24: ಅಡಮಾನ ಇರಿಸಿರುವ ಚಿನ್ನವನ್ನು ವಾಪಾಸ್ಸು ನೀಡಿದೆ ಹಲವು ಸಾರ್ವಜನಿಕರಿಗೆ ವಂಚಿಸಿರುವ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭೀಮಪ್ಪ ಯಲ್ಲಪ್ಪ ಛಲವಾದಿ, ಸುಭಾಷ್ ಖಾರ್ವಿ, ನೇತ್ರಾವತಿ ಖಾರ್ವಿ ಸ್ವಪ್ನಿಲಾ ಪಾಲೇಕರ್, ಪ್ರಮೀತಾ ಖಾರ್ವಿ, ಅಕ್ಷಯ ಸಾರಂಗ ಎಂಬವರು 2025ರಲ್ಲಿ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಎಂಬಲ್ಲಿ ಅಪೇಕ್ಷಾ ಕಾಂಪ್ಲೆಕ್ಸ್ ನಲ್ಲಿ ಪಿಬಿಸಿ ಜ್ಯುವೆಲ್ಲರ್ಸ್ ಗೋಲ್ಡ್ ಲೋನ್ ಎಂಬ ಶಾಖೆಯನ್ನು ತೆರೆದು ಅತೀ ಕಡಿಮೆ ಬಡ್ಡಿದರದಲ್ಲಿ ಚಿನ್ನ ಅಡವು ಸಾಲ ನೀಡುವುದಾಗಿ ತಿಳಿಸಿದ್ದರು.
ತ್ರಾಸಿಯ ವೆಂಕಟೇಶ ಪೈ ಎಂಬವರು ಮತ್ತು ಇತರ ಸಾರ್ವಜನಿಕರನ್ನು ನಂಬಿಸಿ ಅವರಿಂದ ಚಿನ್ನವನ್ನು ಅಡಮಾನ ವಿರಿಸಿಕೊಂಡು ಅವರಿಗೆ ಸಾಲ ನೀಡಿ ನಂತರ ಚಿನ್ನವನ್ನು ವಾಪಾಸು ನೀಡದೇ ವಂಚಿಸಿರುವುದಾಗಿ ದೂರಲಾಗಿದೆ. ಆರೋಪಿಗಳು ಸಾರ್ವಜನಿಕರಿಂದ ಒಟ್ಟು 750.98 ಗ್ರಾಂ ಚಿನ್ನವನ್ನು ಅಡವಿರಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.