ಗ್ಯಾರಂಟಿ ಯೋಜನೆ ಸಮಾಜ ಪರಿವರ್ತನೆಯ ಶಕ್ತಿಯುತ ಕಾರ್ಯಕ್ರಮ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್
ಉಡುಪಿ, ನ.24: ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಕೇವಲ ಸರಕಾರಿ ಯೋಜನೆ ಅಥವಾ ಕಾರ್ಯಕ್ರಮಗಳಲ್ಲ. ಅವು ಸಮಾಜವನ್ನು ಪರಿವರ್ತನೆ ಮಾಡಿದ ಶಕ್ತಿಯುತ ವಿಧಾನಗಳಾಗಿವೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ತುಂಬಿ ಅವರನ್ನು ಸ್ವಾವಲಂಬಿಗಳನ್ನಾಗಿ ರೂಪಿಸಿದ, ಸಮಾಜ ಬದಲಾವಣೆಗೆ ಜಾರಿಗೆ ತಂದ ಯೋಜನೆಗಳಾಗಿವೆ ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್ ಹೇಳಿದ್ದಾರೆ.
ಮಂಗಳವಾರ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಆಯೋಜಿಸಲಾದ ಪಂಚ ಗ್ಯಾರಂಟಿ ಫಲಾನುಭವಿಗಳ ಸಂಭ್ರಮೋತ್ಸವ ಮತ್ತು ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕುಟುಂಬಕ್ಕಾಗಿ ದುಡಿಯುವ ಮಹಿಳೆ ರಿಗೆ ಶಕ್ತಿ ತುಂಬಲು ಜಾರಿಗೊಳಿಸಿದ ಯೋಜನೆ ಇದು. ಪ್ರಧಾನಿ ನರೇಂದ್ರ ಮೋದಿ ಅವರು 2014ರಿಂದ ಘೋಷಿಸುತ್ತಿರುವ ಅಚ್ಛೇ ದಿನ್ ದೇಶದಲ್ಲಿ ಯಾರಿಗೂ ಬಾರದಿದ್ದರೂ, ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಪ್ರತಿ ಬಡ ಕುಟುಂಬ ಅಚ್ಛೇ ದಿನ್ ಕಾಣುವಂತಾಗಿದೆ ಎಂದು ರಿಝ್ವಾನ್ ನುಡಿದರು.
ಜೀವನಮಟ್ಟ ಸುಧಾರಣೆ: ಬಡವರು, ದುರ್ಬಲರು, ಜನಸಾಮಾನ್ಯರ ಸೇವೆಯನ್ನು ಮಾಡುವುದ ರೊಂದಿಗೆ ಅವರ ಜೀವನವನ್ನು ಹಸನುಗೊಳಿಸಲು ಹಾಗೂ ಮಹಿಳೆಯರು ಸ್ವಾವಲಂಬಿ ಬದುಕು ಕಾಣುವಂತಾಗಬೇಕು ಎಂಬ ಸದುದ್ದೇಶ ನಮ್ಮ ಸರಕಾರ ದ್ದಾಗಿದೆ. ಈ ನಿಟ್ಟಿನಲ್ಲಿ ಸರಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳು ಜನರ ಜೀವನ ಮಟ್ಟ ಸುಧಾರಣೆಗೆ ದಾರಿ ಮಾಡಿಕೊಟ್ಟಿವೆ ಎಂದರು.
ಚುನಾವಣಾ ಪೂರ್ವದಲ್ಲಿ ನೀಡಿದ್ದ ಪಂಚ ಗ್ಯಾರಂಟಿ ಯೋಜನೆಗಳ ಭರವಸೆಗಳನ್ನು ನಮ್ಮ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ವಿಳಂಬವಿಲ್ಲದೇ ಜಾರಿಗೊಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿದೆ. ದೇಶದಲ್ಲಿ ಆಹಾರ ಪದಾರ್ಥಗಳು, ಗ್ಯಾಸ್, ಇಂಧನ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿ ದ್ದರೂ ಸಹ ಪುರುಷರ ಆದಾಯ ಹೆಚ್ಚಾಗಿಲ್ಲ. ನಿರುದ್ಯೋಗಿ ಯುವಕರ ಸಂಖ್ಯೆ ಹೆಚ್ಚುತ್ತಿದ್ದು, ಕೋಟ್ಯಂತರ ಯುವಕರು ಉದ್ಯೋಗಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಮನಗಂಡ ಕಾಂಗ್ರೆಸ್ ಸರಕಾರ ಜನರಿಗೆ ಸಾಧ್ಯವಿದ್ದಷ್ಟು ಆರ್ಥಿಕ ನೆರವು ನೀಡುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಸಮಾಜದಲ್ಲಿ ಸಾಮರಸ್ಯದ ಬದುಕು ನಿರ್ಮಿಸುವುದು ನಮ್ಮ ಸರ್ಕಾರದ ಧ್ಯೇಯವಾಗಿದೆ. ಪ್ರತಿಯೊಬ್ಬರೂ ನೆಮ್ಮದಿ ಜೀವನ ನಡೆಸುವಂತಾಗಬೇಕು ಎಂಬ ಗುರಿ ನಮ್ಮದು. ಜನರ ಸೇವೆಗೆ ಸರಕಾರ ಸದಾ ಬದ್ಧವಾಗಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಮಾಡುವುದಾಗಿ ಸಚಿವರು ತಿಳಿಸಿದರು.
ಕ್ರಾಂತಿಕಾರಿ ಯೋಜನೆ: ವಿಧಾನ ಪರಿಷತ್ತಿನ ಉಪಸಭಾಪತಿ ಹಾಗೂ ಮಾಜಿ ಸಚಿವೆ ಡಾ. ಉಮಾಶ್ರೀ ಪ್ರಧಾನ ಭಾಷಣಕಾರರಾಗಿ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳು ಕ್ರಾಂತಿಕಾರ ಕವಾಗಿದ್ದು, ರಾಜ್ಯದ ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಯ ಶಕ್ತಿಯನ್ನು ಆರ್ಥಿಕ ಭದ್ರತೆಯನ್ನು ನೀಡಿವೆ. ಬಡವರು ಹಸಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆ, ಜನರಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಉಳಿದ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು, ಅದನ್ನು ಪಕ್ಷ, ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲ ಅರ್ಹ ಫಲಾನುಭವಿಗಳಿಗೂ ಯೋಜನೆಗಳ ಪ್ರಯೋಜನ ತಲುಪಿಸಲಾಗುತ್ತಿದೆ ಎಂದರು.
ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಲಾಭ ಬರೀ ಮಹಿಳೆಯ ರಿಗಷ್ಟೇ ಸೀಮಿತವಾಗಿಲ್ಲ. ಮಹಿಳೆಯರ ಮೂಲಕ ಕುಟುಂಬದ ಪುರುಷರಿಗೂ ನೆರವಾಗುವ ಯೋಜನೆಗಳಾಗಿವೆ. ನಾಲ್ಕು ಗೋಡೆಗಳ ನಡುವೆ ಸೀಮಿತವಾ ಗುಳಿದಿದ್ದ ಮಹಿಳೆಯರು ಹೊರಜಗತ್ತಿಗೆ ತೆರೆದುಕೊಂಡು, ಸ್ವಾವಲಂಬಿಗಳಾಗಿ ಬದುಕಲು ಇದರಿಂದ ಸಾಧ್ಯವಾಗಿದೆ. ಇದರೊಂದಿಗೆ ಪುರುಷರ ಮೇಲಿದ್ದ ಆರ್ಥಿಕ ಹೊರೆಯನ್ನು ಹಗುರವಾಗಿಸಲಾಗಿದೆ ಎಂದು ಉಮಾಶ್ರೀ ವಿವರಿಸಿದರು.
ಕೆರೆಯ ನೀರು ಕೆರೆಗೆ: ಜನರು ಕಟ್ಟುವ ತೆರಿಗೆಯಿಂದಲೇ ಸರಕಾರದ ಖಜಾನೆ ತುಂಬುತ್ತದೆ. ಆ ಹಣವನ್ನು ಮತ್ತೆ ಜನರ ಕಲ್ಯಾಣಕ್ಕಾಗಿ ನಿಯೋಗಿಸುವುದು ಸರಕಾರದ ಕರ್ತವ್ಯ. ಬಡವರ ಹಾಗೂ ಮಹಿಳೆಯರ ಬದುಕು ಹಸನಾ ದಾಗ ಮಾತ್ರ ಸಮಾಜದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಜನರ ತೆರಿಗೆ ಹಣವನ್ನು ಜನರಿಗೇ ಮರಳಿಸುವ ಉದ್ದೇಶ ದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದ ಅವರು, ಕಾಲಕಾಲಕ್ಕೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪರಿಷ್ಕರಣೆಯೂ ಆಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಖ್ಯಾತ ಚಿಂತಕ ಹಾಗೂ ವಾಗ್ಮಿ ಡಾ.ವಾಸು ಅವರು ಗ್ಯಾರಂಟಿ ಯೋಜನೆಗಳ ಕುರಿತು ದಿಕ್ಸೂಚಿ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ ಅವರು, ಜಿಲ್ಲೆಯಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಮ ಸಮಿತಿಗಳ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯಾಧ್ಯಕ್ಷ ಹೆಚ್.ಎಂ. ರೇವಣ್ಣ, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಡಾ. ದೀಪಕ್ ತಿಮ್ಮಯ್ಯ, ಕರಾವಳಿ ಅಭಿವೃದ್ಧಿಯ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಕಾಂಗ್ರೆಸ್ ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕೆ.ಜಯಪ್ರಕಾಶ್ ಹೆಗ್ಡೆ, ವಿನಯ್‌ಕುಮಾರ್ ಸೊರಕೆ, ಮುನಿಯಾಲು ಉದಯಕುಮಾರ್ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಸಾದ್‌ರಾಜ್ ಕಾಂಚನ್, ಗೋಪಾಲ ಪೂಜಾರಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.