×
Ad

ಧಾರ್ಮಿಕ ನಂಬಿಕೆ ನೋವನ್ನು ಗುಣಪಡಿಸುವ ಔಷಧ ಆಗಬೇಕು: ಸ್ಪೀಕರ್‌ ಯು.ಟಿ. ಖಾದರ್

Update: 2026-01-13 22:24 IST

ಉಡುಪಿ, ಜ.13: ಧಾರ್ಮಿಕ ನಂಬಿಕೆ ನಮ್ಮ ಮಣ್ಣಿನ ಶಕ್ತಿ. ಆ ನಂಬಿಕೆ ಹಾಗೂ ವಿಚಾರಗಳು ಇನ್ನೊಬ್ಬರ ದೇಹಕ್ಕೆ ನೋವು, ಗಾಯ ಉಂಟು ಮಾಡುವ ಕತ್ತಿ ಎಂದಿಗೂ ಆಗಬಾರದು. ಅದು ಇನ್ನೊಬ್ಬರ ನೋವು ಮತ್ತು ಗಾಯ ಗುಣಪಡಿಸುವ ಔಷಧ ಆಗಬೇಕು. ಅಂತಹ ಪ್ರೀತಿ ವಿಶ್ವಾಸದ ಮೂಲಕ ದೇಶ ಕಟ್ಟುವ ಕಾರ್ಯ ಮಾಡಬೇಕಾಗಿದೆ ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.

ಪರ್ಯಾಯ ಪುತ್ತಿಗೆ ಮಠ ಶ್ರೀಕೃಷ್ಣಮಠದಲ್ಲಿ ಬುಧವಾರ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಉದ್ಘಾಟಿಸಿ, ರಾಜಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಪ್ರತಿಯೊಬ್ಬರಿಗೂ ಧಾರ್ಮಿಕ ನಂಬಿಕೆಗಳು ಇರಬೇಕು. ಕರಾವಳಿ ಮಣ್ಣು ಸತ್ವ ಸಮೃದ್ಧವಾಗಿದೆ. ಮಠದಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳು ಯುವಜನರಿಗೆ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆಯನ್ನು ನೀಡುತ್ತದೆ. ನಮ್ಮ ಇತಿಹಾಸ, ಸಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕಾರ್ಯಕ್ರಮ ಇದಾಗಿದೆ ಎಂದರು.

ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಮಾತನಾಡಿ, ಜೀವನದ ಕೆಲವು ಅಗತ್ಯತೆ ಗಳನ್ನು ಪಡೆಯುವುದು ದೊಡ್ಡ ಸಾಧನೆಯಲ್ಲ. ಭಗವಂತನ ಚಿಂತನೆ, ಧ್ಯಾನ, ದೇವರ ಅನುಗ್ರಹ ಪಡೆಯಲು ಸಾಧ್ಯ ಮಾಡಿಕೊಳ್ಳುವುದು ಅತಿ ಮುಖ್ಯ. ಇದು ಗರಿಷ್ಠ ಪ್ರಮಾಣದಲ್ಲಿ ಉಪಯೋಗ ಮಾಡಿಕೊಳ್ಳಬೇಕು. ಏನಾದರೂ ಒಳ್ಳೆಯದನ್ನು ಸಾಧನೆ ಮಾಡಬೇಕು. ಗೀತೆಯ ಸಂದೇಶವೂ ಇದಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಶ್ರೀಕೃಷ್ಣ ಗೀತಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪುತ್ತಿಗೆ ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥ ಸ್ವಾಮೀಜಿ ಅನುಗ್ರಹಿಸಿದರು.

ನಾನಾ ಕ್ಷೇತ್ರದ ಪ್ರಮುಖರಾದ ನಾರಾಯಣ ಬೆಳ್ಳಿರಾಯ, ಭಾರತಿ ಅಜಯ ಪಾಟಂಕರ್, ಸೇತು ಮಾಧವನ್, ನಿತ್ಯಾನಂದ ವಳಕಾಡು, ಪದ್ಮನಾಭ ಆಚಾರ್ಯ, ಸೀತರಾಮ ತೋಳ್ಪಡಿತ್ತಾಯ, ಮಂಜುನಾಥ ಹೆಬ್ಬಾರ್, ನಾರಾಯಣ ಗೋವಿಂದ ಹೆಗಡೆ ಹಾಗೂ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು. ರಮಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News