×
Ad

ಕುಂದಾಪುರ ಒಳಚರಂಡಿ ಕಾಮಗಾರಿಗೆ 56.15 ಕೋಟಿ ರೂ. : ಬಿ.ಎಸ್.ಸುರೇಶ್

Update: 2025-12-12 17:19 IST

ಬೆಳಗಾವಿ, (ಸುವರ್ಣ ವಿಧಾನಸೌಧ), ಡಿ.12: ಕುಂದಾಪುರ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಾಮಗಾರಿ ಸಂಬಂಧ 56.15 ಕೋಟಿ ರೂ., ವೆಚ್ಚದ ಪರಿಷ್ಕೃತ ಯೋಜನೆ ರೂಪಿಸಲಾಗಿದ್ದು, ಶೀಘ್ರವೇ ಕಾಮಗಾರಿಯನ್ನು ಅನುಷ್ಠಾನಗೊಳಿಸುವುದಾಗಿ ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಹೇಳಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶುಕ್ರವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಕಿರಣ್ ಕುಮಾರ ಕೋಡ್ಗಿ ಅವರ ಪ್ರಶ್ನೆಗೆ ಅವರು ಉತ್ತರಿಸಿದರು.

ಕೇಂದ್ರ ಸರಕಾರ ಪುರಸೃತ ಯುಐಡಿಎಸ್‍ಎಸ್‍ಎಂಟಿ ಯೋಜನೆಯಡಿ ಕುಂದಾಪುರ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಈ ಹಿಂದೆ 48.14 ಕೋಟಿ ರೂ., ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಸದ್ಯ 56.15 ಕೋಟಿರೂ., ವೆಚ್ಚದ ಪರಿಷ್ಕೃತ ಯೋಜನೆ ರೂಪಿಸಲಾಗಿದ್ದು, ಶೀಘ್ರವೇ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು.

ಈ ಯೋಜನೆಯಡಿ 39.50 ಕಿ.ಮೀ ಉದ್ದದ ಆಂತರಿಕ ಒಳಚರಂಡಿ ಕೊಳವೆ ಮಾರ್ಗ, 1485 ಮೆಷಿನ್ ಹೋಲ್, 6,000 ಗೃಹ ಸಂಪರ್ಕ 5 ವೆಟ್ ವೆಲ್, 5.40 ಕಿ.ಮೀ ಏರು ಕೊಳವೆ ಮಾರ್ಗ ಹಾಗೂ 3 ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳನ್ನು ನಿರ್ಮಿಸಲು ಅನುವು ಮಾಡಿಕೊಡಲಾಗಿತ್ತು. ಈ ಪೈಕಿ 31.50 ಕಿ.ಮೀ ಆಂತರಿಕ ಒಳಚರಂಡಿ ಕೊಳವೆ ಮಾರ್ಗ, 1,160 ಮೆಷಿನ್ ಹೋಲ್, 1,650 ಗೃಹ ಸಂಪರ್ಕ ಹಾಗೂ 2.30 ಕಿ.ಮೀ ಏರು ಕೊಳವೆ ಮಾರ್ಗಗಳ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇದಕ್ಕೆ ಸುಮಾರು ರೂ.27 ಕೋಟಿಯಷ್ಟು ವೆಚ್ಚವಾಗಿದೆ ಎಂದು ಅವರು ಮಾಹಿತಿ ನೀಡಿದರು.

ವೆಟ್ ವೆಲ್ ಹಾಗೂ ತ್ಯಾಜ್ಯ ನೀರು ಶುದ್ದೀಕರಣ ಘಟಕಗಳ ನಿರ್ಮಾಣಕ್ಕೆ 2024ರ ಅಂತ್ಯದವರೆಗೆ ಜಾಗ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಇವುಗಳ ನಿರ್ಮಾಣ ಕಾರ್ಯ ತಡವಾಗಿದೆ. ಸದ್ಯ ನಿರ್ಮಾಣಕ್ಕೆ ಜಾಗ ಹಸ್ತಾಂತರಿಸಲಾಗಿದೆ. ಈ ಕಾಮಗಾರಿಗಳಿಗೆ 33.77 ಕೋಟಿ ರೂ., ಯೋಜನೆ ಸಿದ್ದಪಡಿಸಲಾಗಿದೆ. 13 ಕೋಟಿ ರೂ. ಯೋಜನೆಯ ಹಣವಿದ್ದು, ಸ್ವಚ್ಛ ಭಾರತ ಯೋಜನೆಯಡಿ 6 ಕೋಟಿ ರೂ. ಅನುದಾನ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಇದರ ಹೊರತಾಗಿಯೂ 14 ಕೋಟಿಯಷ್ಟು ಅಗತ್ಯವಿದ್ದು, ಆರ್ಥಿಕ ಇಲಾಖೆ ಒಪ್ಪಿಗೆ ಪಡೆದು ಕಾಮಗಾರಿಯನ್ನು ಶೀಘ್ರ ಆರಂಭಿಸುವುದಾಗಿ ಅವರು ಉಲ್ಲೇಖಿಸಿದರು.

ಈ ವೇಳೆ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಸುನೀಲ್ ಕುಮಾರ್, ಸರಕಾರದಿಂದ ಅನುಷ್ಠಾನಗೊಳಿಸಿದ ಒಳಚರಂಡಿ ವ್ಯವಸ್ಥೆಗಳ ನಿರ್ವಹಣೆ ಅವಧಿ ಮುಗಿದ ನಂತರ ಗುತ್ತಿಗೆದಾರರು ಸ್ಥಳೀಯ ಸಂಸ್ಥೆಗಳಿಗೆ ನಿರ್ವಹಣೆ ಹೊಣೆ ಹಸ್ತಾಂತರ ಮಾಡುತ್ತಾರೆ. ಆದರೆ ಪಟ್ಟಣ ಪಂಚಾಯತ್‌, ಪುರಸಭೆ, ನಗರಸಭೆ ಹಾಗೂ ಪಾಲಿಕೆಗಳಲ್ಲಿ ನಿರ್ವಹಣೆ ವೆಚ್ಚ ಭರಿಸಲು ಅನುದಾನವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರ ಆಯವ್ಯಯದಲ್ಲಿ ಒಳಚರಂಡಿ ವ್ಯವಸ್ಥೆ ನಿರ್ವಹಣೆ ಹಣ ಮೀಸಲಿರಿಸಬೇಕು. ಈ ಮೂಲಕ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸಿ ಸರಕಾರ ನಿರ್ಮಿಸಿದ ಕಾಮಗಾರಿಗಳು ಸದಾಕಾಲ ಸದ್ಬಳಕೆ ಬರುತ್ತವೆ ಎಂದು ತಿಳಿಸಿದರು.

ಇದಕ್ಕೆ ಸಚಿವರು ಉತ್ತರಿಸಿ, ರಾಜ್ಯದಲ್ಲಿ 350 ರಿಂದ 400 ಸ್ಥಳೀಯ ಸಂಸ್ಥೆಗಳಿವೆ. ಇವುಗಳಲ್ಲಿ ನಿರ್ಮಿಸಿದ ಒಳಚರಂಡಿ ವ್ಯವಸ್ಥೆಗೆ ನಿರ್ವಹಣೆ 700 ರಿಂದ 800 ಕೋಟಿ ರೂ., ಅನುದಾನ ಒದಗಿಸಬೇಕಾಗುತ್ತಿದೆ. ಇದಕ್ಕೆ ಆರ್ಥಿಕ ಇಲಾಖೆ ಒಪ್ಪುವುದಿಲ್ಲ. ಸ್ಥಳೀಯ ಸಂಸ್ಥೆಗಳು ತಮ್ಮ ಆದಾಯ ಮೂಲಗಳಿಂದಲೇ ನಿರ್ವಹಣೆ ವೆಚ್ಚ ತೆಗೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News