ಸಾಲಿಗ್ರಾಮ ಪ.ಪಂ: ಬೀದಿನಾಯಿಗಳ ಉಪಟಳ ತಡೆಯಲು ಕ್ರಮ
ಸಾಂದರ್ಭಿಕ ಚಿತ್ರ (PTI)
ಉಡುಪಿ: ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿರುವ ಖಾಸಗಿ ಹಾಗೂ ಸರಕಾರಿ ಶಿಕ್ಷಣ ಸಂಸ್ಥೆಗಳು, ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಬಸ್‌ನಿಲ್ದಾಣಗಳು, ರೈಲ್ವೆ ನಿಲ್ದಾಣಗಳ ಮುಖ್ಯಸ್ಥರು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ತಮ್ಮ ಸಂಸ್ಥೆಯ ಆವರಣದಲ್ಲಿ ಯಾವುದೇ ಬೀದಿನಾಯಿ ವಾಸವಿದ್ದಲ್ಲಿ ಪರಿಶೀಲಿಸಿ, ಕೂಡಲೇ ಅದರ ಸಂಖ್ಯೆ ಯನ್ನು ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿಗೆ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಮ್ಮ ಸಂಸ್ಥೆಯ ಅವರಣದಲ್ಲಿ ಬೀದಿನಾಯಿಗಳ ಉಪಟಳ ತಡೆಯಲು ಹಾಗೂ ಅವುಗಳ ಪ್ರದೇಶ ನಿಯಂತ್ರಿಸಲು ಕ್ರಮ ವಹಿಸಬೇಕು. ನಗರ ಸ್ಥಳೀಯ ಸಂಸ್ಥೆಯಿಂದ ಬೀದಿ ನಾಯಿಯನ್ನು ಸ್ಥಳಾಂತರಿಸಲು ಸಹಕರಿಸಲು ಹಾಗೂ ಅವುಗಳ ಪ್ರವೇಶ ನಿರ್ಬಂಧಿಸುವುದರ ಮೇಲ್ವಿಚಾರಣೆ ನಡೆಸಲು ಒಬ್ಬ ಜವಾಬ್ದಾರಿಯುತ ನೌಕರರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಬೇಕು.
ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ತಮ್ಮ ಸಂಸ್ಥೆಯ ವ್ಯಾಪ್ತಿ ಯಲ್ಲಿ ಪುನಹ ನಾಯಿಗಳು ವಾಸ ಮಾಡಲು ಅವಕಾಶ ಕೊಟ್ಟಲ್ಲಿ ಅವನ್ನು ಸ್ಥಳಾಂತರಿಸುವ ವೆಚ್ಚವನ್ನು ತಮ್ಮ ಸಂಸ್ಥೆಯಿಂದ ವಸೂಲಿ ಮಾಡಲಾಗುವುದು. ಈ ಆದೇಶವನ್ನು ಉಲ್ಲಂಘನೆ ಮಾಡಿದ್ದಲ್ಲಿ ನ್ಯಾಯಾಲಯದ ಆದೇಶದಂತೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರಕಟಣೆ ತಿಳಿಸಿದೆ.