ಸೌಜನ್ಯ ಪರ ಹೋರಾಟ ನಾಡಿನಾದ್ಯಂತ ವಿಸ್ತರಣೆ: ಮಹೇಶ್ ಶೆಟ್ಟಿ ತಿಮರೋಡಿ
ಕುಂದಾಪುರ, ಆ.25: ಅಮಾನುಷವಾಗಿ ಹತ್ಯೆಯಾದ ನಮ್ಮೆಲ್ಲರ ಮನೆ ಮಗಳಾದ ಸೌಜನ್ಯ ಅವರಿಗೆ ನ್ಯಾಯ ಒದಗಿಸ ಬೇಕು ಎನ್ನುವ ಉದ್ದೇಶಕ್ಕಾಗಿ ಆರಂಭಿಸಲಾದ ಜನಶಕ್ತಿಯ ಹೋರಾಟ, ನಾಡಿನಾದ್ಯಂತ ವಿಸ್ತರಣೆಯಾಗಲಿದೆ. ಈ ಅನ್ಯಾಯದ ವಿರುದ್ಧ ನಾವು ಮಾತನಾಡಿದರೆ ನಮ್ಮ ಮೇಲೆ ಪ್ರಕರಣ ದಾಖಲಾಗುತ್ತದೆ. ಹೀಗಾಗಿ ಜನ ಸಮೂಹವೇ ಈ ಕುರಿತು ಮಾತನಾಡಬೇಕು ಎಂದು ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ಶನಿವಾರ ಸೌಜನ್ಯ ಪ್ರಕರಣದ ಮರು ತನಿಖೆಗಾಗಿ ನಡೆದ ಬೃಹತ್ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಅವರು, ಸನಾತನ ಹಿಂದೂ ಧರ್ಮದ ಮಗಳಿಗಾದ ಅನ್ಯಾಯದ ವಿರುದ್ಧ ಸಮಸ್ತ ಸಮಾಜ ಒಂದಾಗಿ ನಿಲ್ಲಬೇಕಾಗಿದೆ. ಸೌಜನ್ಯ ಹತ್ಯೆಯನ್ನು ಮಾಡಿದ ಪಾಪಿಗಳನ್ನು ಕಾನೂನಿನ ಚೌಕಟ್ಟಿನ ಒಳಗೆ ಕಳುಹಿಸಲಾಗದ ನತಮಸ್ತಕರು ನಾವಾಗಬಾರದು ಎನ್ನುವ ಉದ್ದೇಶದಿಂದ ನ್ಯಾಯಕ್ಕಾಗಿ ಜನತಾ ದೇಗುಲದಲ್ಲಿ ನ್ಯಾಯದ ಬಾಗಿಲು ತಟ್ಟುತ್ತಿದ್ದೇವೆ. ನಾಡಿನ ಜನರೇ ಆಕೆಯನ್ನು ಕೊಂದವರು ಯಾರು ಎನ್ನುವುದನ್ನು ತೀರ್ಮಾನ ಮಾಡಲಿ ಎಂದು ಅವರು ಹೇಳಿದರು.
ಸೌಜನ್ಯ ಪ್ರಕರಣದ ಬಗ್ಗೆ ಕಳೆದ 11 ವರ್ಷಗಳಿಂದ ಹೋರಾಟ ನಡೆಸುತ್ತಿರುವ ನಾವು ಒಂದು ವೇಳೆ ಸುಳ್ಳು ಹೇಳಿದ್ದರೇ, ಸತ್ಯದ ಮಣ್ಣಿನಲ್ಲಿ ಸತ್ತು ಹೋಗಬೇಕಾಗಿತ್ತು. ದೇವರು, ಪ್ರಜಾಪ್ರಭುತ್ವ ಹಾಗೂ ಜನಶಕ್ತಿಯ ಮುಂದೆ ಯಾವುದೇ ಬಲಾಡ್ಯ ಶಕ್ತಿಗಳು ನಿಲ್ಲೋದಿಲ್ಲ ಎನ್ನುವುದು ಸಾಬೀತಾಗಬೇಕಾಗಿದೆ. ಪ್ರಕರಣದ ಆರೋಪಿಯಾಗಿ ಮಾಡದ ತಪ್ಪಿಗಾಗಿ ಜೈಲು ಶಿಕ್ಷೆ ಅನುಭವಿಸಿದ ಆರೋಪಿಯ ಮನೆಯಲ್ಲಿ ಹಾಗೂ ಅನ್ಯಾಯಕ್ಕೆ ಒಳಗಾಗಿರುವ ಸೌಜನ್ಯ ಅವರ ಮನೆಯಲ್ಲಿ ಆವರಿಸಿರುವ ಸ್ಮಶಾನ ಮೌನಕ್ಕೆ ಹಾಗೂ ಅಲ್ಲಿನ ಪರಿಸ್ಥಿತಿಗೆ ಹೊಣೆ ಯಾರು ಎಂದು ಅವರು ಪ್ರಶ್ನಿಸಿದರು.
ಸಭೆಯಲ್ಲಿ ಮಾತನಾಡಿದ ಸೌಜನ್ಯ ಅವರ ತಾಯಿ ಕುಸುಮಾವತಿ, ನನ್ನ ಪುತ್ರಿಯನ್ನು ವಿವಸ್ತ್ರಗೊಳಿಸಿ ಅಮಾನುಷವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ. ಇದಕ್ಕೆ ಕಾರಣರಾದವರು ಯಾರು ಎಂದು ಹೇಳಿರುವ ಆರೋಪಿಗಳ ತನಿಖೆ ನಡೆಸಿ ಅವರಿಗೆ ಶಿಕ್ಷೆ ಕೊಡಿಸುವ ಕೆಲಸ ಆಗಬೇಕು. ಆ.27 ರಂದು ಧರ್ಮಸ್ಥಳದಲ್ಲಿ ನಡೆಯುವ ಹೋರಾಟಕ್ಕೆ ನಮ್ಮನ್ನು ಕರೆದಿದ್ದು, ಕೆಲವರು ಅವರನ್ನು ಕಾಲಿಡಲು ಬಿಡುವುದಿಲ್ಲ ಎಂದು ಬೆದರಿಕೆಯನ್ನು ನೀಡುತ್ತಿದ್ದಾರೆ. ಯಾರು ಏನೇ ಹೇಳಲಿ ನಾವಂತೂ ಆ ಸಭೆಯಲ್ಲಿ ಪಾಲ್ಗೊಳ್ಳುತ್ತೇವೆ. ನ್ಯಾಯಕ್ಕಾಗಿ ನಾವು ನಂಬಿದ ದೇವರ ಬಳಿ ಹೋಗುತ್ತಿದ್ದೇನೆ ಎಂದ ಅವರು, ನನ್ನ ತಂದೆಯ ದಾರಿ ತಪ್ಪಿಸುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಸಭೆಯ ಸಂಘಟನೆಯ ನೇತೃತ್ವ ವಹಿಸಿದ ಸುಧೀರ್ ಮಲ್ಯಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೌಜನ್ಯ ಅವರ ಸಹೋದರ ಮಾವ ವಿಠ್ಠಲ್ ಗೌಡ, ಸಹೋದರ ಹಾಗೂ ಸಹೋದರಿ ಉಪಸ್ಥಿತರಿದ್ದರು.
ಇದಕ್ಕೆ ಮುನ್ನ ನೆಹರೂ ಮೈದಾನದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಜನರ ಒಕ್ಕೊರಳ ಘೋಷಣೆ ಯೊಂದಿಗೆ, ನ್ಯಾಯಕ್ಕೆ ಆಗ್ರಹಿಸಿ ಮೆರವಣಿಗೆ ನಡೆಸಲಾಯಿತು.
ಸಭೆಯ ಆರಂಭಕ್ಕೆ ಮುನ್ನ ಸೌಜನ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಹೋರಾಟದ ಯಶಸ್ಸಿಗಾಗಿ ಕೊಲ್ಲೂರಿನ ಶ್ರೀಮೂಕಾಂಬಿಕಾ ದೇವಸ್ಥಾನದಿಂದ ತಂದ ಪ್ರಸಾದವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ವಂಡಬಳ್ಳಿ ಜಯರಾಮ್ ಶೆಟ್ಟಿ ಮಹೇಶ್ ಶೆಟ್ಟಿ ತಿಮರೋಡಿಗೆ ಹಸ್ತಾಂತರಿಸಿದರು. ಪ್ರತಾಪ್ ಶೆಟ್ಟಿ ಉಳ್ತೂರು ನಿರೂಪಿಸಿದರು.
ಕುಂದಾಪುರ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ, ತರಬೇತಿ ಡಿವೈಎಸ್ಪಿ ರವಿ, ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ನಂದಕುಮಾರ್, ಪವಿತ್ರತೇಜ್, ದಿವಾಕರ್ ಪಿಎಂ, ಮಂಜಪ್ಪ, ಎಸ್‌ಐಗಳಾದ ವಿನಯ್ ಕೊರ್ಲಹಳ್ಳಿ, ಪ್ರಸಾದ್, ವಿವಿಧ ಠಾಣೆ ಪಿಎಸ್‌ಐ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಏನು ಅರಿಯದ ಅಮಾಯಕಳಾದ ಸೌಜನ್ಯ ದುಷ್ಕೃತ್ಯಕ್ಕೆ ಬಲಿಯಾಗಿರುವುದು ಈ ನಾಡಿನ ದುರಂತ. ದೇವರಿಗಾಗಿ ತಲೆ ಕೊಡುವ ಮುಗ್ಧತೆ ನಮ್ಮಲ್ಲಿದೆ. ದೇವಿಯ ಸ್ವರೂಪದಲ್ಲಿ ಬದ್ಧತೆಯಿಂದ ಬದುಕಿದ ಹೆಣ್ಣು ಮಗಳು ಸೌಜನ್ಯ. ಮನೆಗೆಂದು ಕಾಲೇಜಿನಿಂದ ಬರುತಿದ್ದ ಮಗುವಿನ ಅಪಹರಣ ಹಾಗೂ ಹತ್ಯೆ ಹೇಗಾಯ್ತು ಎನ್ನುವುದನ್ನು ಮುಂದಿನ ದಿನಗಳಲ್ಲಿ ಸಮಾಜದ ಮುಂದೆ ಬಹಿರಂಗ ಪಡಿಸುತ್ತೇವೆ.
-ಮಹೇಶ್ ಶೆಟ್ಟಿ ತಿಮರೋಡಿ