×
Ad

ಸೌಕೂರು ಏತ ನೀರಾವರಿ ಯೋಜನೆಗೆ ವಿದ್ಯುತ್ ಸಂಪರ್ಕ ಒದಗಿಸಿದ ಮೆಸ್ಕಾಂ : ಶೀಘ್ರವೇ ರೈತರ ಗದ್ದೆಗೆ ಹರಿಯಲಿದೆ ನೀರು

Update: 2025-12-13 20:43 IST

ಕುಂದಾಪುರ, ಡಿ.13: ಒಂದೂವರೆ ವರ್ಷದಿಂದ ಸುಮಾರು ಎರಡು ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಇರಿಸಿಕೊಂಡಿದ್ದಕ್ಕಾಗಿ ಸೌಕೂರು ಏತ ನೀರಾವರಿ ಯೋಜನೆಗೆ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿದ್ದ ಮೆಸ್ಕಾಂ ಇಲಾಖೆ, ಇದೀಗ ಸರಕಾರದ ಸೂಚನೆಯಂತೆ ವಿದ್ಯುತ್ ಸಂಪರ್ಕವನ್ನು ಮತ್ತೆ ನೀಡಿದೆ.

ಈ ಮೂಲಕ ಯೋಜನೆಯ ನೀರು ಗದ್ದೆಗಳಿಗೆ ಹರಿಯದೇ ಪರಿಸರದ ರೈತರಿಗೆ ಆಗಿರುವ ತೊಂದರೆ ಕೆಲವೇ ದಿನಗಳಲ್ಲಿ ಬಗೆಹರಿದು ಗದ್ದೆಗಳಿಗೆ ನೀರು ಬಂದು ಹಿಂಗಾರು ಋತುವಿನ ಎರಡನೇ ಬೆಳೆ ಬೆಳೆಯಲು ಸಾಧ್ಯವಾಗುವ ನಿರೀಕ್ಷೆ ಇದೆ.

ಸರಕಾರದ ಸೂಚನೆಯಂತೆ ವಿದ್ಯುತ್ ಸಂಪರ್ಕ ಸಿಕ್ಕಿರುವುದರಿಂದ ಮತ್ತೆ ಕಾಲುವೆಯಲ್ಲಿ ನೀರು ಹರಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಗುಲ್ವಾಡಿಯಲ್ಲಿರುವ ಯೋಜನೆಯ ಪಂಪ್ ಹೌಸ್‌ಗೆ ವಿದ್ಯುತ್ ಪೂರೈಸಲಾಗಿದ್ದು, ತಾಂತ್ರಿಕ ನಿರ್ವಹಣೆ ಬಳಿಕ ಮುಂದಿನ ವಾರದಲ್ಲೆ ರೈತರ ಸುಗ್ಗಿ ಕೃಷಿಗೆ ನೀರು ಹರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಈ ವರ್ಷದಲ್ಲಿ ಸುಗ್ಗಿ ಬೆಳೆಗೆ ಆಗುತ್ತಿರುವ ನೀರು ಸಮಸ್ಯೆ ಬಗ್ಗೆ ‘ವಾರ್ತಾಭಾರತಿ’ ವಿಸ್ತ್ರತ ವರದಿ ಪ್ರಕಟಿಸಿತ್ತು. ಇದಕ್ಕೆ ತಕ್ಷಣ ಸ್ಪಂದಿಸಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ವರದಿಯನ್ನು ಉಲ್ಲೇಖಿಸಿ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರಬರೆದಿದ್ದಲ್ಲದೆ ಭೇಟಿಯಾಗಿ ರೈತರ ಸಮಸ್ಯೆ ಪರಿಹಾರದ ಬಗ್ಗೆ ಮನವಿ ನೀಡಿದ್ದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ತಕ್ಷಣ ಕ್ರಮವಹಿಸುವ ಭರವಸೆಯೊಂದಿಗೆ ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಈ ಹಿನ್ನೆಲೆ ಶುಕ್ರವಾರ ಗುಲ್ವಾಡಿಯಲ್ಲಿರುವ ಮುಖ್ಯ ಪಂಪ್ ಹೌಸ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಅಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಪರಿಶೀಲಿಸಿ ಅಗತ್ಯಕ್ರಮ ಕೈಗೊಂಡು ಮುಂದಿನ ವಾರದೊಳಗೆ ರೈತರ ಕೃಷಿ ಕಾರ್ಯಕ್ಕೆ ನೀರು ಒದಗಿಸುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News