×
Ad

ಶೀರೂರು ಪರ್ಯಾಯ: ನಗರ ವಿದ್ಯುದ್ದೀಪಾಲಂಕಾರ ಉದ್ಘಾಟನೆ

Update: 2026-01-15 21:30 IST

ಉಡುಪಿ, ಜ.15: ಶೀರೂರು ಪರ್ಯಾಯದ ಪ್ರಯುಕ್ತ ಇದೇ ಮೊದಲ ಬಾರಿ ಕೈಗೊಂಡ ಉಡುಪಿ ನಗರ ವಿದ್ಯುತ್ ದೀಪಾಲಂಕಾರವನ್ನು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ಅವರು ಇಂದು ಸಂಜೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆಯ ಆಡಳಿತಾಧಿಕಾರಿಯೂ ಆಗಿರುವ ಸ್ವರೂಪ ಟಿ.ಕೆ.,ಮೊದಲ ಬಾರಿಗೆ ಪರ್ಯಾಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ವಿಶಿಷ್ಟವಾಗಿ ಸಿಂಗಾರಗೊಂಡ ನಗರ, ಪರ್ಯಾಯದ ಸಿದ್ಧತೆಗಳು ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವುದು ಸಂತೋಷ ಉಂಟು ಮಾಡುತ್ತಿದೆ ಎಂದರು.

ನಗರದ ಕೋರ್ಟ್ ರಸ್ತೆಯ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಯಶ್‌ಪಾಲ್ ಸುವರ್ಣ, ಪರ್ಯಾಯ ಕಾರ್ಯಕ್ರಮಕ್ಕೆ ಹೆಚ್ವಿನ ಮೆರುಗು ನೀಡಲು ಈ ಬಾರಿ ವಿಶೇಷ ವಿದ್ಯುದ್ದೀಪಾಲಂಕಾರದ ವ್ಯವಸ್ಥೆಯನ್ನು ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಮಾಡಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ವಿದ್ಯುದ್ದೀಪಾಲಂಕಾರ ವ್ಯವಸ್ಥೆ ಮಾಡಿದ ಕೃಷ್ಣ ಕುಲಾಲ್ ಅವರನ್ನು ಶಾಸಕರು ಅಭಿನಂದಿಸಿದರು.

ಶೀರೂರು ಪರ್ಯಾಯಕ್ಕೆ ಉಡುಪಿ ನಗರ ಮದುವಣಗಿತ್ತಿಯಂತೆ ಸಿಂಗಾರ ಗೊಂಡಿದೆ. ಇದರ ಮೆರುಗು ಹೆಚ್ಚಿಸಲು ಈ ಬಾರಿ ಉಡುಪಿ ನಗರಸಭೆ ಅನುದಾನದೊಂದಿಗೆ 50ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

ಕೆನರಾಬ್ಯಾಂಕ್‌ನ ಜಿ.ಎಂ. ಗಂಗಾಧರ್, ನಗರಸಭೆ ಆಯುಕ್ತ ಮಹಾಂತೇಶ್, ನಗರಸಭೆ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಪೂಜಾರಿ, ರಜನಿ ಹೆಬ್ಬಾರ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಮಹಿಳಾ ಘಟಕದ ಪದ್ಮಲತಾ, ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ, ಪ್ರಚಾರ ಸಮಿತಿ ಸಂಚಾಲಕ ನಂದನ್ ಜೈನ್, ವಿಷ್ಣುಮೂರ್ತಿ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News