×
Ad

ಮೂಲಗೇಣಿ ಒಕ್ಕಲುಗಳ ಸಮಸ್ಯೆ ಈಗಲೂ ಜೀವಂತವಾಗಿರುವುದು ಕಳವಳಕಾರಿ: ಪ್ರೊ.ಸುರೇಂದ್ರನಾಥ ಶೆಟ್ಟಿ

Update: 2025-02-09 20:29 IST

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲಗೇಣಿ ಒಕ್ಕಲುಗಳ ಸಮಸ್ಯೆ ಅತ್ಯಂತ ಐತಿಹಾಸಿಕವಾಗಿದ್ದು ಸ್ವಾತಂತ್ರ್ಯ ದೊರಕಿ ಏಳೂವರೆ ದಶಕಗಳ ಅನಂತರವೂ ಜೀವಂತವಾಗಿ ಮುಂದುವರಿದಿರುವುದು ಅತ್ಯಂತ ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಸಂವಿಧಾನ ವಿಶ್ಲೇಷಕ ಹಾಗೂ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದ್ದಾರೆ.

ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆ ಮಂಗಳೂರು ಮತ್ತು ಉಡುಪಿ ಇದರ ಆಶ್ರಯದಲ್ಲಿ ರವಿವಾರ ಉಡುಪಿ ನಾರ್ತ್ ಸ್ಕೂಲ್‌ನ ಆವರಣದಲ್ಲಿ ರುವ ಬಳಕೆದಾರರ ವೇದಿಕೆಯ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಮೂಲಗೇಣಿದಾರರಿಗೆ ವಿಶೇಷ ಮಾಹಿತಿ ಮತ್ತು ಸದಸ್ಯತ್ವ ಅಭಿಯಾನದಲ್ಲಿ ಅವರು ಮೂಲಗೇಣಿ ಕುರಿತು ಮಾಹಿತಿ ನೀಡಿದರು.

ಮೂಲಗೇಣಿ ಪರಿಕಲ್ಪನೆ ಜನಪ್ರತಿನಿಧಿಗಳಿಗೆ ಅರ್ಥೈಸುವುದು ಬಹಳ ಕಷ್ಟವಾಗಿದೆ. ಈ ಸಮಸ್ಯೆ ನಮ್ಮ ಅವಿಭಜಿತ ದ.ಕ. ಜಿಲ್ಲೆಗಳಲ್ಲಿ ಬಿಟ್ಟರೆ ದೇಶದ ಯಾವುದೇ ಭಾಗದಲ್ಲೂ ಇಲ್ಲ. ಒಂದು ವೇಳೆ ಈ ಸಮಸ್ಯೆ ಇಡೀ ರಾಜ್ಯದ ಸಮಸ್ಯೆ ಆಗಿರುತ್ತಿದ್ದರೇ ಎಂದೋ ಬಗೆಹರಿಯುತ್ತಿತ್ತು. ಇದು ಕೇವಲ ನಮ್ಮ ಎರಡೂ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿರುವುದರಿಂದ ೪೦ವರ್ಷಗಳಾದರೂ ಪರಿಹಾರ ಸಿಕ್ಕಿಲ್ಲ ಎಂದರು.

ಇದರ ವಿರುದ್ಧ ಹೋರಾಟ ಮಾಡುವುದರಲ್ಲಿ, ಜನಪ್ರತಿನಿಧಿಗಳ ಮೇಲೆ ಪ್ರಭಾವ ಬೀರುವುದರಲ್ಲಿ ನಾವು ಹಿಂದೆ ಬಿದ್ದಿದೇವೆ. ಮೂಲಗೇಣಿಯ ಬಿಸಿ ಇನ್ನೂ ನಮಗೆ ತಟ್ಟಿಲ್ಲ. ಇದು ಇಲ್ಲಿನ ಮೂಲಭೂತ ಸಮಸ್ಯೆಯಾಗಿದೆ. ಸಾವಿರಾರು ಎಕರೆ ಜಾಗ ಮಾಲಕರಿಲ್ಲದೆ ಉಳಿದುಕೊಂಡಿದೆ. ನಮ್ಮ ವೇದಿಕೆ ಇದರ ವಿರುದ್ಧ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಮಟ್ಟದಲ್ಲಿ ಸಾಕಷ್ಟು ಹೋರಾಟ ಮಾಡಿದೆ ಎಂದು ಅವರು ತಿಳಿಸಿದರು.

ಮೂಲಗೇಣಿ ಶೋಷಣೆ ನಿವಾರಿಸಲು ರಾಜ್ಯ ಸರಕಾರ ೨೦೧೧ರಲ್ಲಿ ಮೂಲ ಗೇಣಿದಾರರಿಗೆ ಭೂಮಿಯ ಸಂಪೂರ್ಣ ಒಡೆತನ ಖಾತ್ರಿ ಪಡಿಸುವ ಕಾಯಿದೆ ನಿರ್ಣಯಿಸಿ ರಾಷ್ಟ್ರಪತಿಗಳ ಅಂಕಿತವನ್ನು ಪಡೆದು ಅನುಷ್ಠಾನಗೊಳಿಸಲು ಮುಂದಾಗಿತ್ತು. ಆ ಸಂದರ್ಭದಲ್ಲಿ ಕೆಲವೊಂದು ಹಿತಾಸಕ್ತಿ ಮೂಲಿದಾರರು ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದರು ಎಂದು ಅವರು ಮಾಹಿತಿ ನೀಡಿದರು.

ಹೈಕೋರ್ಟ್ ಏಕ ಸದಸ್ಯ ಪೀಠ ಮೂಲಗೇಣಿದಾರರ ಬೇಡಿಕೆ ನ್ಯಾಯ ಯುತವಾಗಿದೆ ಎಂದು ತೀರ್ಪು ನೀಡಿತು. ಇದನ್ನು ಪ್ರಶ್ನಿಸಿ ಮತ್ತೆ ಮೇಲ್ಮನವಿ ಸಲ್ಲಿಸಲಾಗಿದೆ. ಇದೀಗ ಈ ಕುರಿತು ತೀರ್ಪು ಬರುವ ಹಂತದಲ್ಲಿದ್ದು ನ್ಯಾಯ ಪಡೆಯುವಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಮೂಲಗೇಣಿದಾರರು ಒಟ್ಟಾಗಿ ಧ್ವನಿ ಎತ್ತಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಮಂಗಳೂರು ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆಯ ಅಧ್ಯಕ್ಷ ಎಂ.ಕೆ.ಯಶೋಧರ್ ವಹಿಸಿದ್ದರು. ವೇದಿಕೆಯ ಹಿರಿಯ ಪದಾಧಿಕಾರಿ ಕ್ಯಾ.ಹ್ಯುಗಸ್ ಮಂಗಳೂರು, ಕೋಶಾಧಿಕಾರಿ ಶಂಕರ್ ಪ್ರಭು ಉಪಸ್ಥಿತರಿದ್ದರು. ಉಡುಪಿ ಜಿಲ್ಲೆಯ ಏಳು ತಾಲೂಕುಗಳ ಮೂಲಗೇಣಿದಾರರು ಭಾಗವಹಿಸಿ, ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಂದೇಶ್ ಪ್ರಭು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಜಿಲ್ಲಾ ಸಂಘಟನಾ ಪ್ರತಿನಿಧಿ ಎಸ್.ಎಸ್.ಶೇಟ್ ವಂದಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News