×
Ad

ಮಣಿಪಾಲದಲ್ಲಿ ರಾಜ್ಯ ಅಂಧ ಮಹಿಳೆಯರ ಟಿ10 ಕ್ರಿಕೆಟ್ ಪಂದ್ಯಾವಳಿ

Update: 2023-11-23 19:16 IST

ಉಡುಪಿ, ನ.23: ಬೆಂಗಳೂರಿನ ಸಮರ್ಥನಂ ಟ್ರಸ್ಟ್ ಫಾರ್ ಡಿಸೇಬಲ್ಡ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ), ಅಗ್ರಜ ಫೌಂಡೇಷನ್ ಉಡುಪಿ ಹಾಗೂ ಕರ್ನಾಟಕ ಅಂಧರ ಕ್ರಿಕೆಟ್ ಅಸೋಸಿಯೇಷನ್‌ಗಳ ಸಹಯೋಗದೊಂದಿಗೆ ಜಿಲ್ಲೆಯಲ್ಲೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಮಟ್ಟದ ಅಂಧ ಮಹಿಳೆಯರ ಟಿ10 ಕ್ರಿಕೆಟ್ ಪಂದ್ಯಾವಳಿಯನ್ನು ನ.29 ಮತ್ತು 30ರಂದು ಮಣಿಪಾಲದಲ್ಲಿ ಆಯೋಜಿಸಿದೆ ಎಂದು ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ತಿಳಿಸಿದ್ದಾರೆ.

ಮಣಿಪಾಲದಲ್ಲಿ ಎಂಡ್‌ಪಾಯಿಂಟ್‌ನಲ್ಲಿರುವ ಮಾಹೆ ಕ್ರಿಕೆಟ್ ಮೈದಾನದಲ್ಲಿ ಮೊದಲ ಬಾರಿಗೆ ಅಂಧ ಮಹಿಳೆಯರ ಕ್ರಿಕೆಟ್ ನಡೆಯಲಿದೆ ಎಂದು ಅವರು ಮಣಿಪಾಲದಲ್ಲಿ ಇಂದು ಕರೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕದಿಂದ ನಾಲ್ಕು ತಂಡಗಳು ಈ ಬಾರಿ ಸ್ಪರ್ಧಿಸಲಿವೆ. ಒಟ್ಟು 56 ಮಂದಿ ಅಂಧ ಮಹಿಳಾ ಆಟಗಾರ್ತಿಯರು ಇದರಲ್ಲಿ ಪಾಲ್ಗೊಳ್ಳುವರು. ಇವರು ಮಣಿಪಾಲದಲ್ಲಿ ತೋರುವ ಪ್ರದರ್ಶನದ ಆಧಾರದಲ್ಲಿ ಜನವರಿ ತಿಂಗಳು ಹುಬ್ಬಳ್ಳಿಯಲ್ಲಿ ನಡೆಯುವ ಅಂಧ ಮಹಿಳೆಯರ ರಾಷ್ಟ್ರೀಯ ಕ್ರಿಕೆಟ್ ಟೂರ್ನಿಗೆ ಕರ್ನಾಟಕವನ್ನು ಪ್ರತಿನಿಧಿಸುವ ತಂಡದ ಆಟಗಾರ್ತಿ ಯರನ್ನು ಆಯ್ಕೆ ಮಾಡಲಾಗುತ್ತದೆ ಎಂದರು.

ಕ್ರಿಕೆಟ್ ಟೂರ್ನಿ ನ.29ರಂದು ಬೆಳಗ್ಗೆ 9:00ಗಂಟೆಗೆ ಉದ್ಘಾಟನೆ ಗೊಳ್ಳಲಿದೆ. ಸಮಾರೋಪ ಸಮಾರಂಭ ನ.30ರ ಅಪರಾಹ್ನ 3 ಗಂಟೆಗೆ ನಡೆಯಲಿದೆ. ದೃಷ್ಟಿಹೀನ ಮಹಿಳೆಯರಿಗೆ ಹಾಗೂ ಅವರು ಆಡುವ ಅಂಧರ ಕ್ರಿಕೆಟ್‌ಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಮಣಿಪಾಲದಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ ಎಂದು ಡಾ.ಬಲ್ಲಾಳ್ ತಿಳಿಸಿದರು.

ರಾಜ್ಯ ಮಟ್ಟದ ಪಂದ್ಯಾವಳಿಯ ಕುರಿತು ಮಾಹಿತಿ ನೀಡಿದ ಸಮರ್ಥನಂ ಟ್ರಸ್ಟ್‌ನ ಸ್ಥಾಪಕ ಆಡಳಿತ ಟ್ರಸ್ಟಿಯಾಗಿರುವ ಡಾ.ಮಹಾಂತೇಶ್ ಜಿ. ಕಿವಾದಾಸಣ್ಣವರ್, ಮಣಿಪಾಲದಲ್ಲಿ ಕಾರವಾರ, ಮೈಸೂರು, ಸಮರ್ಥನಂ ಹಾಗೂ ಬೆಂಗಳೂರಿನ ದೀಪಾ ಅಕಾಡೆಮಿಯ ತಂಡಗಳು ಪಾಲ್ಗೊಳ್ಳಲಿವೆ ಎಂದರು.

ಅಸೋಸಿಯೇಷನ್ ಫಾರ್ ದ ಬ್ಲೈಂಡ್ ಆಫ್ ಇಂಡಿಯಾ (ಸಿಎಬಿಐ)ನ ಅಧ್ಯಕ್ಷರೂ ಆಗಿರುವ ಡಾ.ಮಹಾಂತೇಶ್, ಟ್ರಸ್ಟ್ ದೃಷ್ಟಿ ಹೀನ, ಅಂಧರಿಗೆ ಅವರ ಸಾಮರ್ಥ್ಯವನ್ನು ತೋರಿಸಲು ಅವಕಾಶವನ್ನು ನೀಡುತ್ತಿದೆ. ಅವರ ಪ್ರತಿಭೆಯ ವಿಕಸನಕ್ಕೂ ನಾವು ಹೆಚ್ಚಿನ ಮುತುವರ್ಜಿ ವಹಿಸುತ್ತೇವೆ. ಅಂಧ ಮಹಿಳೆಯರ ಕ್ರಿಕೆಟ್ ಇದರಲ್ಲಿ ಒಂದು ಎಂದರು.

ಅಂಧರ ಕ್ರಿಕೆಟ್‌ಗೆ ಇರುವ ಸಾಮಾನ್ಯ ನಿಯಮದಡಿ ಈ ಪಂದ್ಯಾವಳಿ ನಡೆಯಲಿದೆ. 2019ರಲ್ಲಿ ಮೊದಲ ಬಾರಿ ದೇಶದಲ್ಲಿ ನಡೆದ ಅಂಧ ಮಹಿಳೆಯರ ಕ್ರಿಕೆಟ್‌ನಲ್ಲಿ ಕೇವಲ 19 ಮಂದಿ ಭಾಗವಹಿಸಿದ್ದರು. 2021ರಲ್ಲಿ ನಡೆದ ಟೂರ್ನಿಯಲ್ಲಿ 14 ತಂಡಗಳು ಭಾಗವಹಿಸಿದ್ದರೆ, ಈ ಬಾರಿ ಹುಬ್ಬಳ್ಳಿಯಲ್ಲಿ ನಡೆದ ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಳ್ಳಲಿವೆ ಎಂದರು.

ವಿಶ್ವಚಾಂಪಿಯನ್: ಅಂಧ ಮಹಿಳೆಯರ ಕ್ರಿಕೆಟ್‌ನಲ್ಲಿ ಭಾರತ ಈಗ ವಿಶ್ವ ಚಾಂಪಿಯನ್ ಆಗಿದೆ ಎಂದ ಡಾ.ಮಹಾಂತೇಶ್, ಇತ್ತೀಚೆಗೆ ಇಂಗ್ಲೆಂಡ್‌ನ ಎಜ್‌ಬಾಸ್ಟನ್‌ನಲ್ಲಿ ನಡೆದ ಐಬಿಎಸ್‌ಎ ವಿಶ್ವಗೇಮ್ಸ್‌ನಲ್ಲಿ ಭಾರತದ ಅಂಧ ಮಹಿಳಾ ತಂಡ ಫೈನಲ್‌ನಲ್ಲಿ ಆಸ್ಟ್ರೇಲಿಯ ಮಹಿಳಾ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಜಯಿಸಿತ್ತು ಎಂದರು.

ಮಣಿಪಾಲ ಮ್ಯಾರಥಾನ್‌ಗೆ 100 ಮಂದಿ: 2024ರ ಫೆ.11ರಂದು ಮಣಿಪಾಲದಲ್ಲಿ ಮಾಹೆ ವತಿಯಿಂದ ನಡೆಯುವ ಮಣಿಪಾಲ ಮ್ಯಾರಥಾನ್‌ಗೆ ಸಮರ್ಥನಂ ಟ್ರಸ್ಟ್‌ನಿಂದ 100 ಮಂದಿ ಅಂಧ ಅಥ್ಲೀಟ್‌ಗಳು ಭಾಗವಹಿಸಲಿದ್ದಾರೆ ಎಂದು ಡಾ.ಮಹಾಂತೇಶ್ ಇದೇ ಸಂದರ್ಭದಲ್ಲಿ ಪ್ರಕಟಿಸಿದರು.ಕೆಲವರು ಪೂರ್ಣ ಮ್ಯಾರಥಾನ್‌ನಲ್ಲೂ ಭಾಗವಹಿಸುವರು ಎಂದು ಅವರು ತಿಳಿಸಿದರು.

ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಡಾ.ಬಲ್ಲಾಳ್, ತಮ್ಮ ಸಂಸ್ಥೆಯ ವತಿಯಿಂದ ಈ ಅಥ್ಲೀಟ್‌ಗಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ನೀಡುವುದಾಗಿ ಪ್ರಕಟಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಹೆಯ ಉಪಕುಲಪತಿ ಲೆ.ಜ.(ಡಾ). ಎಂ.ಡಿ.ವೆಂಕಟೇಶ್, ಕ್ರೀಡಾಕಾರ್ಯದರ್ಶಿ ಡಾ.ವಿನೋದ್ ನಾಯಕ್, ಸಹ ಉಪಕುಲಪತಿ ಡಾ.ಶರತ್‌ರಾವ್, ರಿಜಿಸ್ಟ್ರಾರ್ ಡಾ.ಗಿರಿಧರ ಕಿಣಿ, ಸಮರ್ಥನಂನ ಕ್ರೀಡಾ ಮ್ಯಾನೇಜರ್ ಶಿಖಾ ಶೆಟ್ಟಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News