ಸೂಲಿಬೆಲೆ ಸುಳ್ಳಿನ ಚಕ್ರವರ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಟೀಕೆ
ಉಡುಪಿ, ಜೂ.20: ಚಕ್ರವರ್ತಿ ಸೂಲಿಬೆಲೆ ಸುಳ್ಳಿನ ಚಕ್ರವರ್ತಿ. ಬಾಯಿ ತೆರೆದರೆ ರಾಮಾಯಣ ಭಗವದ್ಗೀತೆ ಮಹಾಭಾರತ ಬಗ್ಗೆ ಮಾತನಾಡುವ ಅವರು, ಯಾವ ಪ್ರಮಾಣದಲ್ಲಿ ಸುಳ್ಳು ಹೇಳುತ್ತಾರೆ ಎಂಬುದು ಇಡೀ ಕರ್ನಾಟಕಕ್ಕೆ ತಿಳಿದಿದೆ. ಕಪ್ಪಗಿರುವುದನ್ನು ಬೆಳ್ಳಗೆ ಮಾಡುವುದರಲ್ಲಿ ಬೆಳ್ಳಗೆ ಇರೋದನ್ನ ಕಪ್ಪು ಮಾಡುವುದರಲ್ಲಿ ನಿಸ್ಸೀಮರು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಟೀಕಿಸಿದ್ದಾರೆ.
ಕುಂದಾಪುರದಲ್ಲಿ ನಡೆಯಬೇಕಾಗಿದ್ದ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸಕ್ಕೆ ಪೊಲೀಸರು ನೋಟೀಸ್ ನೀಡಿರುವ ವಿಚಾರದ ಕುರಿತು ಉಡುಪಿಯಲ್ಲಿಂದು ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸಿದರು.
ವಾಕ್ ಸ್ವಾತಂತ್ರ್ಯ ಸೇರಿದಂತೆ ಎಲ್ಲಾ ರೀತಿಯ ಸ್ವಾತಂತ್ರ್ಯ ಕಾಂಗ್ರೆಸ್ ಪಕ್ಷ ನೀಡಿದೆ. ಇಡೀ ದೇಶದ ಇತಿಹಾಸದಲ್ಲಿ ಸಂವಿಧಾನವನ್ನು ಎತ್ತಿ ಹಿಡಿದ ಪಕ್ಷ ಕಾಂಗ್ರೆಸ್. ಆದುದರಿಂದ ನಾವು ಚಕ್ರವರ್ತಿ ಸೂಲಿಬೆಲೆಯಿಂದ ಪಾಠ ಕೇಳಬೇಕಾಗಿಲ್ಲ. ಮೂರು ದಿನ ಕುಂದಾಪುರದಲ್ಲಿ ಸೂಲಿಬೆಲೆ ಇರುವ ವಿಚಾರ ಪೊಲೀಸ್ ವರಿಷ್ಠಾಧಿಕಾರಿಗಳಿಂದ ತಿಳಿಯಿತು. ಸೂಲಿಬೆಲೆ ತಮ್ಮ ಪ್ರವಾಸವನ್ನು ಮಾಡಬಹುದು. ಆದರೆ ದ್ವೇಷದ ಭಾಷಣ, ಸುಳ್ಳು ಬಿತ್ತುವ ಕೆಲಸ, ವಿಷ ಬೀಜ ಬಿತ್ತುವ ಕೆಲಸ ಮಾಡಬಾರದು. ಯಾಕೆಂದರೆ ಉಡುಪಿ ಶಾಂತಿ ಪ್ರಿಯರ ಜಿಲ್ಲೆಯಾಗಿದೆ ಎಂದರು.
ಅಲ್ಪಸಂಖ್ಯಾತರಿಗೆ ವಸತಿಯಲ್ಲಿ ಶೇಕಡ 5 ಏರಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಕೇಂದ್ರ ಸರಕಾರದಿಂದ ಆಗಿರುವ ಯೋಜನೆ. ಅದಕ್ಕೆ ನಾವು ಸಚಿವ ಸಂಪುಟದಲ್ಲಿ ಒಪ್ಪಿಗೆ ಕೊಟ್ಟಿದ್ದೇವೆ. ಆ ಮೂಲಕ ನಾವು ಕೇಂದ್ರ ಸರಕಾರದ ಆದೇಶವನ್ನು ಪಾಲಿಸಿದ್ದೇವೆ. ಬಿಜೆಪಿ ನಾಯಕರು ಮೊಸರಲ್ಲಿ ಕಲ್ಲು ಹುಡುಕುತ್ತಾರೆ. ಅವರಿಗೆ ರಾಜಕಾರಣ ಮಾಡಲು ಬೇರೆ ವಿಚಾರ ಉಳಿದಿಲ್ಲ. ಮೊದಲು ಗ್ಯಾರಂಟಿಯನ್ನು ಟೀಕೆ ಮಾಡಿ, ಗ್ಯಾರಂಟಿ ಯೋಜನೆ ಯಶಸ್ವಿ ಆಗುವುದಿಲ್ಲ ಎಂದರು. ಜನರ ಭಾವನೆಗಳ ಜೊತೆ ಆಟವಾಡುವ ಬಿಜೆಪಿಗರಿಗೆ ಮಾತನಾಡಲು ಬೇರೇನೂ ಉಳಿದಿಲ್ಲ. ಜನರ ದಿಕ್ಕು ತಪ್ಪಿಸಲು ಹುಚ್ಚಾಟ ಮಾಡುತ್ತಾರೆ ಎಂದರು.
ಕರಾವಳಿಗೆ ಕೋಮ ನಿಗ್ರಹ ಪಡೆ ಬಿಜೆಪಿ ಶಾಸಕರ ವಿರೋಧದ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಂದು ಕಡೆ ಬಿಜೆಪಿಯವರು ಕೋಮುವಾದವನ್ನು ಪ್ರಚೋದನೆ ಮಾಡುತ್ತ, ನಾವು ಕೋಮು ಪ್ರಚೋದನೆ ಮಾಡುತ್ತಿಲ್ಲ ಎಂದು ಹೇಳುತ್ತಾರೆ. ಇನ್ನೊಂದು ಕಡೆ ಕೋಮು ನಿಗ್ರಹದಳಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಈ ಮನೋಭಾವನೆಯ ಬಿಜೆಪಿ ಶಾಸಕರನ್ನು ನೋಡಿದರೆ ಮನಸ್ಥಿತಿ ಏನು ಎಂಬುದು ಉಡುಪಿಯ ಜನತೆಗೆ ಅರ್ಥವಾಗುತ್ತದೆ ಎಂದು ಹೇಳಿದರು.
ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಲಕ್ಷಣ ಇದೆ. ಮಳೆ ಅವಾಂತರ ನಿಯಂತ್ರಿಸಲು ಮಂಜಾಗ್ರತಾ ಕ್ರಮಗಳಿಗೆ ಸೂಚಿಸಲಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮಳೆ ಎದುರಿಸಲು ಸರ್ವಸನ್ನದರಾಗಿದ್ದೇವೆ. ಯಾವುದೇ ಪ್ರಮಾಣದಲ್ಲಿ ಮಳೆ ಬಂದರೂ ನಾವು ಸಿದ್ಧವಾಗಿದ್ದೇವೆ ಎಂದು ಸಚಿವರು ತಿಳಿಸಿದರು.