ಕಾಪು ಸರಕಾರಿ ಕಾಲೇಜಿನ ಯಶೋಧಾರಿಗೆ ‘ಅಧ್ಯಾಪಕ ಭೂಷಣ’ ಪ್ರಶಸ್ತಿ
ಕಾಪು, ಆ.6: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅಸೋಸಿಯೇಟ್ ಪ್ರೊಫೆಸರ್ ಶ್ರೇಣಿಯ ಕಾಲೇಜು ಗ್ರಂಥಪಾಲಕಿ ಯಶೋದಾ ಅವರಿಗೆ ಕರ್ನಾಟಕ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್, 2025ನೇ ಸಾಲಿನ ಅತ್ಯುತ್ತಮ ಗ್ರಂಥಪಾಲಕಿ ಎಂಬ ನೆಲೆಯಲ್ಲಿ ‘ಅಧ್ಯಾಪಕ ಭೂಷಣ’ ಪ್ರಶಸ್ತಿ ಪ್ರದಾನಿಸಿ ಸನ್ಮಾನಿಸಿದರು.
ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಶಿಕ್ಷಕ ಸಂಘದ ಮಂಗಳೂರು ವಿಭಾಗದ ವತಿಯಿಂದ ಪ್ರೇರಣಾ ದಿವಸ್ ಪ್ರಯುಕ್ತ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಶೋಧ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯಶೋದಾ ಅವರು ಕಾಲೇಜು ಗ್ರಂಥಾಲಯವನ್ನು ಕೇವಲ ಪುಸ್ತಕ ಸಂಗ್ರಹದ ಸ್ಥಾನವನ್ನಾಗಿಸದೆ, ಜ್ಞಾನ ವಿನಿಮಯದ ಕೇಂದ್ರವನ್ನಾಗಿ ರೂಪಿಸಿ, ವಿದ್ಯಾರ್ಥಿಗಳನ್ನು ಆಕರ್ಷಿಸಲು ವಿನೂತನ ಪ್ರಯೋಗಗಳಾದ ಹಿನ್ನಲೆ ಸಂಗೀತದ ವಾತಾವರಣ, ಒಳಾಂಗಣ ಹಾಗೂ ಹೊರಾಂಗಣ ಸಸ್ಯಗಳು, ಹಳೆಯ ಪ್ರಶ್ನೆಪತ್ರಿಕೆಗಳ ಕ್ಯೂಆರ್ ಕೋಡ್, ವರ್ಚುವಲ್ ಪುಸ್ತಕ ಪ್ರದರ್ಶನ, ಅನೇಕ ರಾಜ್ಯಮಟ್ಟದ ಕಾರ್ಯಗಾರ, ಯುಟ್ಯೂಬ್ ಚಾನಲ್, ಗ್ರಂಥಾಲಯ ಸುದ್ದಿಪತ್ರಿಕೆ ಹೀಗೆ ಹಲವಾರು ತಾಂತ್ರಿಕ ಶಿಕ್ಷಣಕ್ಕೆ ಬೇಕಾದ ಸಾಕಷ್ಟು ಸಂಪನ್ಮೂಲಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಕೆಲಸ ಮಾಡಿದ್ದಾರೆ.
ಸಂಸದ ಬ್ರಿಜೇಶ್ ಚೌಟ, ಮಂಗಳೂರು ವಿ.ವಿ. ಕುಲಪತಿ ಡಾ. ಪಿ.ಎಲ್.ಧರ್ಮ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ, ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಶಿಕ್ಷಕ ಸಂಘದ ಅಧ್ಯಕ್ಷ ಡಾ. ಗುರನಾಥ ಬಡಿಗೇರ, ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ.ಕೆ ಮೊದಲಾದವರು ಉಪಸ್ಥಿತರಿದ್ದರು.