×
Ad

ರಾಜ್ಯದಲ್ಲೀಗ ಇರುವುದು ಗಿಣಿ ಶಾಸ್ತ್ರದ ಸರಕಾರ: ಆರ್. ಅಶೋಕ್ ಲೇವಡಿ

"ಸಿದ್ದರಾಮಯ್ಯ ಕುರ್ಚಿ ಜಗಳದಲ್ಲಿ ಮುಳುಗಿದ್ದಾರೆ"

Update: 2025-12-29 20:23 IST

ಆರ್. ಅಶೋಕ್ 

ಕಾಪು: ರಾಜ್ಯದಲ್ಲೀಗ ಇರುವುದು ಕಾಂಗ್ರೆಸ್ ಸರಕಾರವಲ್ಲ. ಗಿಣಿ ಶಾಸ್ತ್ರದ ಸರಕಾರ. ಇಲ್ಲಿ ಗಿಣಿ ಶಾಸ್ತ್ರ ಹೇಳುವಂತೆ ಒಂದೊಂದು ದಿನ ಒಬ್ಬೊಬ್ಬರ ಹೆಸರು ಮುಂಚೂಣಿಗೆ ಬರುತ್ತದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಮುಖ್ಯಮಂತ್ರಿ ಕುರ್ಚಿಗಾಗಿ ಸೆಣಸಿದರೆ, ದಿನಕ್ಕೊಬ್ಬರಂತೆ ಡಾ.ಪರಮೇಶ್ವರ್, ಸತೀಶ್ ಜಾರಕಿಹೊಳಿ ಹೆಸರು ಇಲ್ಲಿ ಮುಂಚೂಣಿಗೆ ಬರುತ್ತಿದೆ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವನ್ನು ಲೇವಡಿ ಮಾಡಿದ್ದಾರೆ.

ಕಾಪುವಿನ ರೆಸಾರ್ಟ್ ಒಂದರಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರಕಾರದ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ ಅಶೋಕ್, ಬೆಂಗಳೂರಿನಲ್ಲಿ ನಿನ್ನೆ ಮಹಾರಾಷ್ಟ್ರ ಪೊಲೀಸರು ಮಾದಕ ವಸ್ತುಗಳ ಬೃಹತ್ ಸಂಗ್ರಹವನ್ನೇ ಪತ್ತೆ ಮಾಡಿರುವುದನ್ನು ಉಲ್ಲೇಖಿಸಿ, ಡ್ರಗ್ ಮಾಫಿಯಾ ರಾಜ್ಯವನ್ನು ಸುತ್ತುವರೆದಿದ್ದು, ಈ ಸರಕಾರ ಅದನ್ನು ತಡೆಯುವ ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ ಈ ವರ್ಷ ಹೊಸ ವರ್ಷಾಚರಣೆ ಅಲ್ಲ, ಡ್ರಗ್ಸ್ ಸೆಲೆಬ್ರೇಷನ್ ನಡೆಯಲಿದೆ ಎಂದು ಆರೋಪಿಸಿದರು.

ಮಹಾರಾಷ್ಟ್ರ ಪೊಲೀಸರು ಬೆಂಗಳೂರಲ್ಲಿ ರೇಡ್ ಮಾಡುತ್ತಾರೆ. ಕೋಟ್ಯಂತರ ರೂ.ಗಳ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಇದು ನಮ್ಮ ಪೊಲೀಸರಿಗೆ ಯಾಕೆ ಗೊತ್ತಾಗಲ್ಲ? ಇದಕ್ಕಿಂತ ಅವಮಾನ ಏನಿದೆ?. ಮಹಾರಾಷ್ಟ್ರ ಪೂಲೀಸರು ಎರಡು ಮಹತ್ವದ ಕಾರ್ಯಚರಣೆ ನಡೆಸಿದ್ದಾರೆ. ಈ ಸರ್ಕಾರಕ್ಕೆ ನಾಚಿಕೆ ಆಗಬೇಕು. ಮಾನ ಮರ್ಯಾದೆ ಇದೆಯಾ? ಕರ್ನಾಟಕದಲ್ಲಿ ಇಂಟಲಿಜೆನ್ಸ್ ಸತ್ತು ಹೋಗಿದೆಯಾ? ಎಂದು ಪ್ರಶ್ನಿಸಿದರು.

ಕರ್ನಾಟಕ ಪೊಲೀಸರ ಸಹಾಯ ಪಡೆದು ಈ ಕಾರ್ಯಾಚರಣೆ ಮಾಡಿದ್ದು ಎಂದು ಗೃಹ ಸಚಿವರ ಹೇಳುತಿದ್ದಾರೆ. ಹಾಗಿದ್ದರೆ ನಿಮಗೆ ಯಾಕೆ ಈ ಮಾಫಿಯಾ ಗೊತ್ತಾಗಿಲ್ಲ? ಗೃಹ ಸಚಿವರಿಗೆ ಕಾಮನ್‌ಸೆನ್ಸ್ ಇಲ್ವಾ? ಇದು ಬೇಜವಾಬ್ದಾರಿ ಸರಕಾರ. ಬೆಂಗಳೂರು ಮತ್ತು ಮಂಗಳೂರು ಜೈಲುಗಳಲ್ಲಿ ಡ್ರಗ್ ಪೆಡ್ಲರುಗಳು ತುಂಬಿದ್ದಾರೆ. ಜೈಲುಗಳಲ್ಲಿ ಪಂಚತಾರಾ ಸೌಲಭ್ಯಗಳು ಸಿಗುತ್ತೆ. ಡ್ರಗ್, ಅಫೀಮ್, ವಿಸ್ಕಿ ಎಲ್ಲಾ ದುಡ್ಡಿಗೆ ಸಿಗುತ್ತೆ. ಜೈಲುಗಳು ವೈನ್ ಫ್ಯಾಕ್ಟರಿಗಳಾಗಿವೆ. ಜೈಲುಗಳು ಹಣ ವಸೂಲಿ ಕೇಂದ್ರ ಆಗಿದೆ. ಪ್ರತಿದಿನ ಒಬ್ಬ ಕಾನ್‌ಸ್ಟೇಬಲ್ ಒಂದು ಲಕ್ಷ ರೂ. ಸಂಪಾದಿಸುತ್ತಾನೆ ಎಂದು ಅಶೋಕ್ ಆರೋಪಗಳ ಸುರಿಮಳೆಗೆರೆದರು.

ಗೃಹ ಸಚಿವರು ನಾಪತ್ತೆ: ರಾಜ್ಯದ ಗೃಹ ಸಚಿವರು ಕಾಣೆಯಾಗಿದ್ದಾರೆ. ಏನೇ ಕೇಳಿದರೂ ನೋಡೋಣ, ವರದಿ ಬಂದಿಲ್ಲ ಎನ್ನುತ್ತಾರೆ. ಸಿದ್ದರಾಮಯ್ಯ ಕುರ್ಚಿ ಜಗಳದಲ್ಲಿ ಮುಳುಗಿದ್ದಾರೆ. ಅವರು ನಿವೃತ್ತಿಯಾದರೆ ಸಾಕು ಎನ್ನುವಂತಾಗಿದೆ. ಕಾಂಗ್ರೆಸ್ ಹೈಕಮಾಂಡ್ ಸತ್ತಿದೆ. ಕರ್ನಾಟಕಕ್ಕೆ 500 -600 ಕೋಟಿ ರೂ.ಗಳ ಡ್ರಗ್ಸ್ ಬಂದಿದೆ. ಡ್ರಗ್ಸ್ ಹಂಚಿಕೆಯಲ್ಲಿ ಪೊಲೀಸರು ಶಾಮಿಲಾಗಿದ್ದಾರೆ. ಇನ್ನು ಎರಡು ದಿನಗಳಲ್ಲಿ ಎಲ್ಲಾ ವಿಲೇವಾರಿ ಆಗುತ್ತೆ ಎಂದರು.

ರಾಜ್ಯದಲ್ಲಿ ಪೊಲೀಸರೇ ಕಳ್ಳರಂತೆ ಆಗಿದ್ದಾರೆ. ನಿಯಂತ್ರಿಸಲು ಈ ಸರ್ಕಾರಕ್ಕೆ ಧಮ್, ತಾಕತ್ತು ಇಲ್ಲ. ಇನ್ನು ಆಂಧ್ರ ತೆಲಂಗಾಣ ಬೇರೆ ಬೇರೆ ರಾಜ್ಯದವರು ಇಲ್ಲಿ ಬಂದು ಕಾರ್ಯಾಚರಣೆ ಮಾಡುವುದು ಬಾಕಿ ಇದೆ. ಹೊರ ರಾಜ್ಯಗಳ ಪೊಲೀಸರು ನಮ್ಮ ಕಾನೂನು ವ್ಯವಸ್ಥೆ ಕಾಪಾಡುವಂತಾಗಿದೆ ಎಂದು ವಿಪಕ್ಷ ನಾಯಕ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೇರಳ ನಿಯೋಗಕ್ಕೆ ಟೀಕೆ: ಬೆಂಗಳೂರಿನ ಕೋಗಿಲು ಲೇಔಟ್ ಕಾರ್ಯಾಚರಣೆ ವಿಚಾರದಲ್ಲೂ ಸರಕಾರದ ನಡೆಯನ್ನು ಟೀಕಿಸಿದ ಅಶೋಕ್, ಕರ್ನಾಟಕ ಸರಕಾರವನ್ನು ನಡೆಸುವವರು ಯಾರು? ಕೆ.ಸಿ. ವೇಣುಗೋಪಾಲ್ ಇಲ್ಲಿ ಆಡಳಿತ ಮಾಡ್ತಾ ಇದ್ದಾರಾ? ಕೇರಳದ ಸಿಎಂ ಪೀಣರಾಯಿ ವಿಜಯನ್ ಮುಸ್ಲಿಮರಿಗೆ ಅನ್ಯಾಯ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಕೇರಳದ ಜನಪ್ರತಿನಿಧಿಗಳ ನಿಯೋಗ ಬೆಂಗಳೂರಿಗೆ ಬಂದಿದ್ದು ಯಾಕೆ? ಬೆಂಗಳೂರಲ್ಲಿ ಪರಿಸ್ಥಿತಿ ಸರಿ ಇಲ್ಲ ಎಂದು ಅವರು ಹೇಳುತ್ತಾರೆಂದರೆ ನಮ್ಮ ಸರಕಾರಕ್ಕೆ ಧಮ್ ತಾಕತ್ತು ಎರಡೂ ಇಲ್ಲ ಎಂದರು.

ಮಹಾರಾಷ್ಟ್ರದ ಕನ್ನೇರಿ ಸ್ವಾಮೀಜಿ ಬಂದರೆ ಬ್ಯಾರಿಕೆಡ್ ಹಾಕಿ ಗನ್ ಇಟ್ಟು ತಡೆಯುತ್ತಿರಿ...ಕೇರಳ ನಿಯೋಗವನ್ನು ಹೇಗೆ ಒಳಗೆ ಬಿಟ್ಟಿರಿ. ನಮ್ಮ ನೆಲ ಜಲದ ಬಗ್ಗೆ ಹೇಗೆ ಕಾಮೆಂಟ್ ಮಾಡುತ್ತಾರೆ. ಕೆ.ಸಿ.ವೇಣುಗೋಪಾಲ್ ಘಟನೆಯ ಬಗ್ಗೆ ವರದಿ ಕೇಳುತ್ತಾರೆಂದರೆ ಕೇರಳ ಸರ್ಕಾರ ಕರ್ನಾಟಕವನ್ನು ರೂಲ್ ಮಾಡ್ತಾ ಇದ್ದೀಯಾ?! ಎಂದು ಅಶೋಕ್ ನುಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News