ಇಡೀ ದೇಶದ ರೈತರನ್ನು ಸರಕಾರ ಯಾಚಕ ವರ್ಗಕ್ಕೆ ತಂದು ನಿಲ್ಲಿಸಿದೆ: ಸುರೇಶ್ ಕಂಜರ್ಪಣೆ
ರಾಷ್ಟ್ರೀಯ ರೈತ ದಿನಾಚರಣೆ
ಉಡುಪಿ, ಡಿ.23: ಸರಕಾರಗಳು ಇಂದು ದೇಶದ ರೈತರನ್ನು ಪರಾವಲಂಬಿಗಳನ್ನಾಗಿ ಮಾಡಿದೆ. ರೈತ ನಿರ್ಬಲ ಗೊಳ್ಳುತ್ತಾ ಹೋದಂತೆ ದೀನ ನಾಗುತ್ತಾ ಹೋಗುತ್ತಾನೆ. ಇಂದು ದೇಶ ರೈತರನ್ನು ಸರಕಾರ ಯಾಚಕ ವರ್ಗಕ್ಕೆ ತಂದು ನಿಲ್ಲಿಸಿದೆ ಎಂದು ಮೈಸೂರಿನ ಕೃಷಿ ನೀತಿ ಚಿಂತಕ ಕೆ.ಪಿ.ಸುರೇಶ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ರೈತರ ಸಂಘದ ವತಿಯಿಂದ ಇಂದು ನಗರದ ಬ್ರಹ್ಮಗಿರಿ ಯಲ್ಲಿರುವ ಲಯನ್ಸ್ ಭವನದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರೀಯ ರೈತ ದಿನಾಚರಣೆ ಮತ್ತು ಸಾಧಕ ರೈತರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ‘ಕೃಷಿ ಮತ್ತು ರೈತರ ಇಂದಿನ ಸಂಕಟಗಳು’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತಿದ್ದರು.
ನಮ್ಮ ಕುವೆಂಪು ರೈತನನ್ನು ‘ಉಳುವ ಯೋಗಿ’ ಎಂದು ಕರೆದಿದ್ದರು. ಆದರೆ ಇಂದು ಯೋಗಿ ಎಂದು ಕರೆಸಿಕೊಳ್ಳು ವಾತ ದೊಡ್ಡ ಆಧ್ಯಾತ್ಮಿಕ ಸಾಮ್ರಾಜ್ಯವನ್ನು ಕಟ್ಟಿದ ವ್ಯಕ್ತಿಯೇ ಹೊರತು ರೈತ ಅಲ್ಲ. ನಮಗೆ, ಸರಕಾರಕ್ಕೆ ರೈತ ಕೇಂದ್ರ ಸ್ಥಾನದಲ್ಲಿ ಇರಬೇಕು ಎಂದು ಅನಿಸಿಯೇ ಇಲ್ಲ. ಅಷ್ಟು ಸ್ವಪ್ರಜ್ಞೆ ಇದ್ದಿದ್ದರೆ, ರೈತನಿಗೆ ಆತ್ಮಾಭಿಮಾನ ವೇನಾದರೂ ಇದ್ದಿದ್ದರೆ, ದೇಶದ ಪ್ರತಿ ಹಂತದಲ್ಲೂ ಕೋಳಿಯ ಪ್ರತಿ ಪುಕ್ಕ ಕೀಳುವಂತೆ ಪ್ರಭುತ್ವ ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ಪರಾವಲಂಬಿ ಕ್ಷೇತ್ರವನ್ನಾಗಿ ಮಾಡುತ್ತಿರಲಿಲ್ಲ ಎಂದವರು ನುಡಿದರು.
ಕೃಷಿಯನ್ನು ಸೆಮಿನಾರ್‌ಗಳ ಮೂಲಕ ಕಟ್ಟಲು ಆಗಲ್ಲ. ರೈತನೊಬ್ಬ ತನ್ನ ಗದ್ದೆಯಲ್ಲಿ ಬೆಳೆ ಬೆಳೆಯುವಾಗ ತಾಯಿಯೊಬ್ಬಳು ತನ್ನ ಮಗುವನ್ನು ನೋಡುವಂತೆ ಅದನ್ನು ನೋಡಿಕೊಳ್ಳುತ್ತಾನೆ. ಆದ್ದರಿಂದ ರೈತ ಸದಾ ಕಾಲ ಚಳವಳಿಯ ಬಗ್ಗೆ ಯೋಚಿಸಲಾರ. ರೈತರ ಆಶೋತ್ತರಗಳ ಬಗ್ಗೆ, ಅಭಿಕ್ಷೆಯ ಬಗ್ಗೆ ರೈತ ನಾಯಕರು ಯೋಚಿಸ ಬೇಕು. ಆದರೆ ನಾಯಕ ಖಾಯಂ ಆಗಿ ಅವರಿಂದ ಚಳವಳಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ರೈತ ವಿರೋಧಿ ನೀತಿ, ಕ್ರಮಗಳನ್ನು ಸರಕಾರ ಕೈಗೊಂಡಾಗ ಅವರಿಂದ ರಚನಾತ್ಮಕ ರೀತಿಯ ಬೆಂಬಲ ಪಡೆಯಬಹುದು ಎಂದು ಸುರೇಶ್ ತಿಳಿಸಿದರು.
ಆದ್ದರಿಂದ ನಾವು ಬಹುಮುಖ್ಯವಾದ ನೈತಿಕ ಆಯಕಟ್ಟಿನ ಹೋರಾಟ ರೂಪಕವೊಂದನ್ನು ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪ್ರತಿ ಮನೆಮನೆಗಳಲ್ಲಿ ‘ಚರಕ’ವನ್ನು ಬಳಸಿಕೊಂಡಂತೆ ರೈತರ ಮನೆಮನೆಗಳಲ್ಲಿ ಕಂಡುಕೊಳ್ಳಬೇಕು. ಇದರಿಂದ ರೈತರ ಹೋರಾಟ ಜೀವಂತವಾಗುಳಿಯಲು ಸಾಧ್ಯವಿದೆ ಎಂದವರು ಅಭಿಪ್ರಾಯಪಟ್ಟರು.
ಗಾಂಧೀಜಿ ತಮ್ಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮೂರು ಪ್ರಮುಖ ಚಳವಳಿಗಳನ್ನು ಮಾತ್ರ ಮಾಡಿದ್ದರು. ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ ಹಾಗೂ ಕ್ವಿಟ್ ಇಂಡಿಯಾ ಚಳವಳಿ. ಉಳಿದಂತೆ ಅವರು ಚರಕದ ಮೂಲಕ ಹಳ್ಳಿಹಳ್ಳಿಗಳಲ್ಲಿ ಹೋರಾಟವನ್ನು ಜೀವಂತವಾಗಿರಿಸಿದ್ದರು. ನಮ್ಮ ರೈತರು ಇದೇ ರೀತಿಯ ತಂತ್ರವನ್ನು ತಮ್ಮ ಹೋರಾಟದಲ್ಲಿ ಬಳಸಿಕೊಳ್ಳ ಬೇಕು ಎಂದವರು ಸಲಹೆ ನೀಡಿದರು.
ನಮ್ಮ ಸರಕಾರಗಳು ಕಳೆದ ಮೂರು ದಶಕಗಳಿಂದ ಕೃಷಿಯನ್ನು ಭಗ್ನಗೊಳಿಸುವ ಪ್ರಯತ್ನ ನಡೆಸುತ್ತಾ ಬಂದಿದೆ. ಇಡೀ ಕೃಷಿ ಕ್ಷೇತ್ರವನ್ನು ಇಷ್ಟಿಷ್ಟೇ ಕಿತ್ತುಹಾಕುವ ಪ್ರಯತ್ನ ನಡೆಸುತ್ತಿತ್ತು. ಇದು ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿರುವವರೆಗೆ ನಿಧಾನಗತಿಯಲ್ಲಿತ್ತು. ಆದರೆ ನರೇಂದ್ರ ಮೋದಿ ಬಂದ ನಂತರ ಈ ಪ್ರಯತ್ನಕ್ಕೆ ವೇಗ ಬಂದಿದೆ ಎಂದರು.
ನೀವು 90ರ ದಶಕದ ಯೋಜನಾ ವರದಿಯನ್ನು ನೋಡಿದರೆ, ಅದರಲ್ಲಿ ಮುಂದಿನ 30 ವರ್ಷಗಳಲ್ಲಿ ಗ್ರಾಮೀಣ ಭಾಗದ ಶೇ.25ರಷ್ಟು ಜನರನ್ನು ನಗರಕ್ಕೆ ವರ್ಗಾಯಿಸಬೇಕು ಎಂದು ಹೇಳಿರುವದನ್ನು ಕಾಣಬಹುದು. ಗ್ರಾಮೀಣ ಭಾಗದಲ್ಲಿ ಅಧಿಕ ಕಾರ್ಮಿಕರಿದ್ದು ಸರಕಾರಕ್ಕೆ ಅವರೊಂದು ಹೊರೆಯಾಗಿದ್ದಾರೆ ಹೀಗಾಗಿ ಅವರನ್ನು ನಗರ ಪ್ರದೇಶಕ್ಕೆ ವರ್ಗಾಯಿಸುವಂತೆ ಶಿಫಾರಸ್ಸು ಮಾಡಿತ್ತು ಎಂದು ಸುರೇಶ್ ಕಂಜರ್ಪಣೆ ತಿಳಿಸಿದರು.
ಇಂಥ ಸಂದರ್ಭದಲ್ಲಿ ಗ್ರಾಮೀಣ ಭಾಗದ ರೈತರಿಗೆ ಕೃಷಿ ಕಾರ್ಯ ಮಾಡುವುದೇ ಕಷ್ಟವಾಗಿ, ಅವರು ತಮ್ಮ ಜಮೀನನ್ನು ದುಡ್ಡಿದ್ದವರಿಗೆ ಮಾರ ಬೇಕಾಗುತ್ತದೆ. ಇದಕ್ಕೆ ಬೇಕಾದ ಬ್ಲೂಪ್ರಿಂಟ್‌ನ್ನು ಸಹ ಸಿದ್ಧಪಡಿಸಿಟ್ಟು ಕೊಂಡಿದೆ. ಇಷ್ಟೇ ಅಲ್ಲ ಸುಧಾರಿತ ಬೀಜಗಳ ಮೂಲಕ ಹೆಚ್ಚು ಬೆಳೆ ಬೆಳೆಯಲು ಸರಕಾರ ರೈತರನ್ನು ಒತ್ತಾಯಿಸುತ್ತಿದೆ. 20 ಟನ್ ಬೆಳೆ ಬೆಳೆದಾಗಲೇ ಕೃಷಿಕರಿಗೆ ನಷ್ಟವಾದರೆ, 30-40 ಟನ್ ಬೆಳೆದಾಗ ಇದರ ಪ್ರಮಾಣ ಹೆಚ್ಚುವುದಿಲ್ಲವೇ ಎಂದವರು ಪ್ರಶ್ನಿಸಿದರು.
ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ (ಎಂಎಸ್‌ಪಿ) ಮೂಲಕ ಸರಕಾರ ಅವರ ಬದುಕಿನೊಂದಿಗೆ ಇನ್ನೊಂದು ರೀತಿ ಯಲ್ಲಿ ಮೋಸ ಮಾಡುತ್ತಿದೆ. ರೈತ ಬೆಳೆದ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಸರಕಾರ, ಅದನ್ನು ಯಾವತ್ತೂ ಸಕಾಲದಲ್ಲಿ ಆತನಿಗೆ ನೀಡುವುದೇ ಇಲ್ಲ ಎಂದವರು ಹೇಳಿದರು.
ರೈತರ ಮೂಗಿಗೆ ತುಪ್ಪ: ಈ ದೇಶದಲ್ಲಿ ಸುಲಭದಲ್ಲಿ ರೈತರ ಮೂಗಿಗೆ ತುಪ್ಪ ಸವರಲಾಗುತ್ತಿದೆ. ಅವರನ್ನು ಮೋಸ ಗೊಳಿಸುವಷ್ಟು ಸುಲಭದಲ್ಲಿ ಬೇರೆ ಯಾವ ಕ್ಷೇತ್ರದವರನ್ನೂ ಮೋಸಗೊಳಿಸಲು ಸಾಧ್ಯವಿಲ್ಲ. ಒಂದು ಭರವಸೆ ಕೊಟ್ಟರೆ ಸಾಕು ಅವರು ನಂಬಿ ಬಿಡುತ್ತಾರೆ. ಎಷ್ಟು ಬಾರಿ ಸರಕಾರದಿಂದ ಮೋಸ ಹೊದರೂ ಜನ ನಂಬುವುದನ್ನು ಬಿಡುವುದಿಲ್ಲ. ಭ್ರಮಗಳಲ್ಲೇ ಇರುತ್ತಾರೆ ಎಂದರು.
ಎತ್ತಿನಹೊಳೆ ಯೋಜನೆ ನೋಡಿ 12,000 ಕೋಟಿಯಿಂದ ಈಗ ಅದು 33,000ಕೋಟಿ ರೂ.ಗೆ ನೆಗೆದಿದೆ. ಆದರೆ ಒಂದೇ ಒಂದು ಹನಿ ನೀರು ಇನ್ನೂ ಹರಿದಿಲ್ಲ. ಕೋಲಾರ, ಚಿಕ್ಕಬಳ್ಳಾಪುರ ತುಮಕೂರಿನ ರೈತರು ಈಗಲೂ ಸರಕಾರವನ್ನು ನಂಬಿದ್ದಾರೆ. ಇದು ಪ್ರಾಯೋಗಿಕ ಅಲ್ಲ ಎಂಬುದನ್ನು ಅವರು ಸರಕಾರಕ್ಕೆ ಹೇಳುವ ಧೈರ್ಯವನ್ನೂ ತೋರಬೇಕಾಗಿದೆ ಎಂದು ಸುರೇಶ್ ಕಂಜರ್ಪಣೆ ನುಡಿದರು.
ಸರಕಾರ ನೀಡುವ ಸುಳ್ಳು ಆಶ್ವಾಸನೆಗಳನ್ನು ರೈತರಾದ ನಾವು ಸತತವಾಗಿ ನಂಬುತ್ತಾ ಬರುತಿದ್ದೇವೆ. ನನ್ನ ಅಪ್ಪ ನಂಬಿದ, ನಾನು ನಂಬಿದೆ, ನನ್ನ ಮಗನೂ ನಂಬುತ್ತಾನೆ. ನಾವು ಸುಳ್ಳು ಬರವಸೆಗಳಿಗೆ ಮಾರುಹೋಗಿ ಭ್ರಮೆಯಲ್ಲೇ ಇರುತ್ತೇವೆ. ರೈತ ನಾಯಕರು ಈ ನಿಟ್ಟಿನಲ್ಲಿ ಹೆಚ್ಚು ಜವಾಬ್ದಾರಿಯಿಂದ ಮುಂದುವರಿಯಬೇಕಿದೆ ಎಂದು ಅವರು ಹೇಳಿದರು.
ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ.ಪ್ರತಾಪ್ ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೈತ ಸಂಘದ ಪದಾಧಿಕಾರಿ ಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಸಾಧಕ ರೈತರನ್ನು ಗುರುತಿಸಿ ಸನ್ಮಾನಿಸಲಾಯಿತು.
ರೈತರ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಬೆಳ್ವೆ ಸ್ವಾಗತಿಸಿದರೆ, ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.