ಸಾರಿಗೆ ನೌಕರರ ಮುಷ್ಕರ: ಉಡುಪಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ
ಹೊರ ಜಿಲ್ಲೆಗಳ ಬಸ್ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಪರದಾಟ
ಉಡುಪಿ, ಆ.5: ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಸರಕಾರಿ ಬಸ್ ನೌಕರರ ಮುಷ್ಕರಕ್ಕೆ ಉಡುಪಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಉಡುಪಿ ಬನ್ನಂಜೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ನಗರದ ನರ್ಮ್ ಬಸ್ ನಿಲ್ದಾಣ ಹಾಗೂ ಕುಂದಾಪುರ ಬಸ್ ನಿಲ್ದಾಣಗಳಿಂದ ಹೊರಡುವ ಬಸ್ಗಳ ಸಿಬ್ಬಂದಿ ಬೆಳಗ್ಗೆ 8 ಗಂಟೆಯ ವರೆಗೆ ಬಸ್ ಗಳನ್ನು ರಸ್ತೆಗೆ ಇಳಿಸಿರಲಿಲ್ಲ. ಬಳಿಕ ಅಧಿಕಾರಿಗಳ ಸೂಚನೆಯಂತೆ ಬಸ್ ಸಂಚಾರ ಆರಂಭಿಸಿದರೆಂದು ತಿಳಿದುಬಂದಿದೆ.
ಅದರಂತೆ ಉಡುಪಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಹೊರ ಜಿಲ್ಲೆಗೆ ಹೊರಡುವ 35 ಬಸ್ ಗಳ ಪೈಕಿ ಮಧ್ಯಾಹ್ನ 12ರವರೆಗೆ 28 ಬಸ್ ಗಳು ಹೊರಟಿದ್ದರೆ, ಏಳು ಬಸ್ ಗಳು ನಿಲ್ದಾಣದಲ್ಲಿಯೇ ಬಾಕಿಯಾಗಿತ್ತು. ಕ್ರಮೇಣ ಒಂದೊಂದೇ ಬಸ್ ಗಳು ಸಂಚಾರ ಆರಂಭಿಸುತ್ತಿರುವುದು ಕಂಡುಬಂದಿದೆ.
ಉಡುಪಿ ನರ್ಮ್ ಬಸ್ ನಿಲ್ದಾಣದಿಂದ 54 ಬಸ್ ಗಳ ಪೈಕಿ ಶೇ.70ರಷ್ಟು ಬಸ್ ಗಳು ಓಡಾಟ ನಡೆಸಿವೆ. ಜಿಲ್ಲೆಯೊಳಗಿನ ಎಲ್ಲ ಬಸ್ ಗಳು ಎಂದಿನಂತೆ ಸಂಚಾರ ನಡೆಸಿದರೆ, ಹೊರ ಜಿಲ್ಲೆಗೆ ಹೋಗುವ ಬಸ್ ಗಳು ಮುಂದೆ ಸಮಸ್ಯೆ ಆಗಬಹುದೆಂಬ ಕಾರಣಕ್ಕೆ ದಾರಿಮಧ್ಯೆಯ ನಿಲ್ದಾಣಗಳಲ್ಲಿ ಸಂಚಾರ ಸ್ಥಗಿತಗೊಳಿಸಿವೆ.
ಹೊರ ಜಿಲ್ಲೆಗಳಿಂದ ಬರುವ ಕೆಲವು ಬಸ್ ಗಳು ಜಿಲ್ಲೆಗೆ ಬಾರದೇ ಇರುವುದರಿಂದ ಸಾಕಷ್ಟು ಪ್ರಯಾಣಿಕರಿಗೆ ಸಮಸ್ಯೆಯಾಯಿತು. ಕುಂದಾಪುರದಲ್ಲಿ ಜಿಲ್ಲೆಯೊಳಗಿನ ಸರಕಾರಿ ಬಸ್ ಸಂಚಾರ ಎಂದಿನಂತೆ ಮುಂದುವರಿದಿದ್ದರೆ, ಬೆಂಗಳೂರು ಸಹಿತ ಬೇರೆ ಜಿಲ್ಲೆಗಳಿಗೆ ತೆರಳುವ ಬಸ್ ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಮುಷ್ಕರದ ಹಿನ್ನೆಲೆಯಲ್ಲಿ ಕುಂದಾಪುರ, ಉಡುಪಿ ನಿಲ್ದಾಣಗಳಲ್ಲಿ ಕೆಎಸ್ಆರ್ಪಿ, ಡಿಎಆರ್ ತುಕಡಿಗಳನ್ನು ನಿಯೋಜಿಸಿ ಭದ್ರತೆ ಒದಗಿಸಲಾಗಿತ್ತು.