ತ್ರಾಸಿ | ಅವೈಜ್ಞಾನಿಕ ಮರಳುಗಾರಿಕೆ ವಿರುದ್ಧ ಪ್ರತಿಭಟನೆ
ಕುಂದಾಪುರ: ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಆನಗೋಡು ಎಂಬಲ್ಲಿ ಸೌಪರ್ಣಿಕ ನದಿಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಮರಳು ತೆಗೆಯುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಬುಧವಾರ ಪ್ರತಿಭಟನೆ ನಡೆಸಿದ್ದಾರೆ.
ಡಿ. 18 ರಂದು ಇಲ್ಲಿನ ಜನರೆಲ್ಲ ಜಮಾಯಿಸಿ, ಪ್ರತಿಭಟನೆ ನಡೆಸಿದ್ದರು. ಸ್ಥಳೀಯರ ವಿರೋಧದ ಬಳಿಕ ಮರಳುಗಾರಿಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಮಂಗಳವಾರದಿಂದ ಆರಂಭಗೊಂಡಿದ್ದರಿಂದ ಮರಳುಗಾರಿಕೆ ನಡೆಯುತ್ತಿದ್ದ ಪ್ರದೇಶಕ್ಕೆ ಮತ್ತೆ ಸ್ಥಳೀಯರು ಆಗಮಿಸಿ, ಆಕ್ರೋಶ ವ್ಯಕ್ತಪಡಿಸಿದರು.
ಆನಗೋಡಿನಲ್ಲಿ ಸೌಪರ್ಣಿಕ ನದಿಯಿಂದ ಮರಳಿನ ದಿಬ್ಬ ತೆರವಿಗೆ ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಮುಖಾಂತರ ಪರವಾನಿಗೆ ನೀಡಲಾಗಿದೆ. ಆದರೆ ಈ ಪ್ರದೇಶದಲ್ಲಿ ಪ್ರಸ್ತುತ ನೈಸರ್ಗಿಕವಾಗಿ ಯಾವುದೇ ಮರಳಿನ ದಿಬ್ಬ ರಚನೆಯಾಗಿರುವುದಿಲ್ಲ. ಆದರೂ ಪರವಾನಿಗೆ ಪಡೆದ ಗುತ್ತಿಗೆದಾರರು ಹೊರ ರಾಜ್ಯದಿಂದ ಕಾರ್ಮಿಕರನ್ನು ಕರೆಸಿ ನದಿಯ ದಡದ ಸಂರಕ್ಷಣೆಗೆ ಇರುವ ಕಾಂಡ್ಲವನವನ್ನು ತುಂಡರಿಸಿ, ಭಾರೀ ಗಾತ್ರದ ದೋಣಿ ಬಳಸಿ ಗುಜ್ಜಿ ಹಾಗೂ ಬಕೆಟ್ ಮೂಲಕ ಆಳದಿಂದ ಮರಳನ್ನು ಅವೈಜ್ಞಾನಿಕ ರೀತಿಯಲ್ಲಿ ತೆಗೆಯುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ನದಿ ತೀರದ ದಂಡೆ, ತೆಂಗಿನ ಮರಗಳು ಮತ್ತು ನೀರಿನ ಮೋಟರ್ ಶೆಡ್‌ಗೆ ಹಾನಿಯಾಗಲಿದೆ. ಸಮೀಪದ ಮನೆ ಗಳಿಗೂ ಅಪಾಯವಿದೆ. ಕಿರಿದಾದ ರಸ್ತೆಯಲ್ಲಿ ಮರಳು ಸಾಗಾಟದ ಟಿಪ್ಪರ್‌ಗಳು ವೇಗವಾಗಿ ಸಂಚರಿಸುತ್ತಿದ್ದು, ಇಲ್ಲಿ ಸುಮಾರು 200 ಕ್ಕೂ ಮಿಕ್ಕಿ ಮನೆಗಳಿವೆ. ದಡದಲ್ಲಿ 60-70 ಮನೆಗಳಿವೆ. ಮರಳುಗಾರಿಕೆಯಿಂದ ಇಲ್ಲಿ ಅಪಾಯ ವಿದೆ. ಗಣಿ ಇಲಾಖೆಗೆ 5 ಸಲ ಮನವಿ ಕೊಟ್ಟಿದ್ದು ಅಧಿಕಾರಿಗಳು, ಜನಪ್ರತಿನಿಧಿಗಳೆಲ್ಲರಿಗೂ ಸಮಸ್ಯೆ ತಿಳಿಸಿದ್ದೇವೆ. ಇಲ್ಲಿಯವರೆಗೆ ಯಾರೂ ಸ್ಪಂದಿಸಿಲ್ಲ. ಮರಳುಗಾರಿಕೆ ಸ್ಥಗಿತಗೊಳಿಸದಿದ್ದರೆ ಸ್ಥಳೀಯರು ಧರಣಿ ಕುಳಿತುಕೊಳ್ಳುತ್ತೇವೆ ಎಂದು ನಿವಾಸಿಗಳು ಎಚ್ಚರಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಗಣಿ ಇಲಾಖೆಯ ಅಧಿಕಾರಿಗಳಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಗಂಗೊಳ್ಳಿ ಠಾಣಾ ಪಿಎಸ್ಐ ಪವನ್ ನಾಯಕ್ ಭೇಟಿ ನೀಡಿದರು. ಎಎಸ್‌ಐ ಆನಂದ್, ಸಿಬ್ಬಂದಿ ಸ್ಥಳದಲ್ಲಿದ್ದರು.
ಆನಗೋಡು ಹಾಗೂ ಪಡುಕೋಣೆಯ ಸ್ಥಳೀಯರಾದ ಜಲಜಾ, ಸರೋಜಾ, ಲಲಿತಾ, ದೀಪಾ, ಲಕ್ಷ್ಮೀಕಾಂತ್, ಶರತ್, ನಾಗರಾಜ್, ಶಬರೀಷ್, ವಿಜಯ್ ಮತ್ತಿತರರು ಉಪಸ್ಥಿತರಿದ್ದರು.