ಬೈಕಿನ ಮೇಲೆ ಬಿದ್ದ ಮರ: ಗಾಯಾಳು ಸವಾರ ಮೃತ್ಯು
Update: 2025-08-25 20:43 IST
ಬೈಂದೂರು, ಆ.25: ವೀಪರಿತ ಗಾಳಿ ಮಳೆಗೆ ರಸ್ತೆ ಪಕ್ಕದಲ್ಲಿದ್ದ ತೆಂಗಿನ ಮರ ಬುಡ ತುಂಡಾಗಿ ಬೈಕಿನ ಮೇಲೆ ಬಿದ್ದ ಪರಿಣಾಮ ಸವಾರ ಮೃತಪಟ್ಟ ಘಟನೆ ಶಿರೂರು ಗ್ರಾಮದ ಕಳಿಹಿತ್ಲು ಸಮುದ್ರದ ಬಳಿ ನಡೆದಿದೆ.
ಮೃತರನ್ನು ಶಿರೂರು ಗ್ರಾಮದ ರಾಮ (52) ಎಂದು ಗುರುತಿಸಲಾಗಿದೆ. ಇವರು ಆ.15ರಂದು ಮಧ್ಯಾಹ್ನ ತನ್ನ ಸ್ನೇಹಿತ ಚಂದ್ರ ಅವರೊಂದಿಗೆ ಮೀನು ಹಿಡಿಯಲು ಬೈಕಿನಲ್ಲಿ ತೆರಳುತ್ತಿದ್ದು, ಈ ವೇಳೆ ವೀಪರಿತ ಗಾಳಿ ಮಳೆಗೆ ರಸ್ತೆ ಪಕ್ಕದಲ್ಲಿದ್ದ ತೆಂಗಿನ ಮರ ಬುಡ ತುಂಡಾಗಿ ಅವರು ಹೋಗುತ್ತಿದ್ದ ಬೈಕಿನ ಮೇಲೆ ಬಿತ್ತೆನ್ನಲಾಗಿದೆ. ಇದರಿಂದ ರಾಮ ಹಾಗೂ ಚಂದ್ರ ಗಾಯಗೊಂಡು ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇವರಲ್ಲಿ ಗಂಭೀರವಾಗಿ ಗಾಯಗೊಂಡ ರಾಮ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಆ.24ರಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.