ಸೌಹಾರ್ದತೆಗೆ ಶ್ರಮಿಸುವವನು ನಿಜವಾದ ದೇಶಭಕ್ತ: ಡಾ. ಎಕ್ಕಾರು
ಮಲ್ಪೆ: ಸಂವಿಧಾನದ ಮೂಲ ತತ್ವಗಳಾದ ಸಮಾನತೆ, ಸ್ವಾತಂತ್ರ್ಯ ಸಹೋದರತೆ ಮತ್ತು ಸಾಮಾಜಿಕ ನ್ಯಾಯವನ್ನು ಅರಿತುಕೊಂಡು ಜೀವಿಸಿದಾಗ ಹಬ್ಬಗಳ ಆಚರಣೆಗೆ ನಿಜವಾದ ಆರ್ಥ ಬರುತ್ತದೆ ಎಂದು ಹಿರಿಯ ಜನಪದ ವಿದ್ವಾಂಸ, ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಅಭಿಪ್ರಾಯಪಟ್ಟಿದ್ದಾರೆ.
ತೊಟ್ಟಂನ ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ಹಾಗೂ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ತೊಟ್ಟಂ ಘಟಕಗಳ ಜಂಟಿ ಆಶ್ರಯದಲ್ಲಿ ಸೋಮವಾರ ಸಂಜೆ ಆಯೋಜಿಸಲಾಗಿದ್ದ ಸರ್ವಧರ್ಮ ಹಬ್ಬಗಳ ಸೌಹಾರ್ದ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಜಗತ್ತಿನ ಯಾವುದೇ ರಾಷ್ಟ್ರದಲ್ಲಿ ಸೌಹಾರ್ದತೆ ಇದ್ದಾಗ ಅಲ್ಲಿ ಅಭಿವೃದ್ದಿ ಕಾಣಲು ಸಾಧ್ಯವಿದೆ. ಸೌಹಾರ್ದತೆಗಾಗಿ ಶ್ರಮಿಸುವ ಪ್ರತಿಯೊಬ್ಬ ಕೂಡ ನಿಜವಾದ ದೇಶಭಕ್ತನಾಗಲು ಸಾಧ್ಯವಿದೆ. ಕ್ಷಮೆ, ಕರುಣೆ ಮತ್ತು ಪ್ರೀತಿಯ ಸಂದೇಶವನ್ನು ಜಗತ್ತಿನ ಪ್ರತಿಯೊಂದು ಧರ್ಮಗಳು ಸಾರುವುದರೊಂದಿಗೆ ಮಾನವೀಯತೆಯನ್ನು ಕಲಿಸುತ್ತವೆ. ಪ್ರತಿಯೊಬ್ಬ ವ್ಯಕ್ತಿ ತನ್ನ ಧರ್ಮವನ್ನು ಪಾಲಿಸಿಕೊಂಡು ಇತರ ಧರ್ಮದ ಬಗ್ಗೆ ಅರಿತುಕೊಂಡು ಬಾಳಿದಾಗ ಸೌಹಾರ್ದತೆ ಮೂಡಲು ಸಾಧ್ಯವಿದೆ ಎಂದವರು ಹೇಳಿದರು.
ಎಲ್ಲಾ ಹಬ್ಬಗಳ ಮೂಲತತ್ವ ಪ್ರೀತಿ ಮತ್ತು ಒಗ್ಗಟ್ಟಿನಿಂದ ಬಾಳುವುದಾಗಿದ್ದು ಇದರೊಂದಿಗೆ ಎಲ್ಲಾ ಧರ್ಮಗಳಿಗಿಂತ ಮಾನವೀಯ ಧರ್ಮ ಅತೀ ಶ್ರೇಷ್ಟವಾದುದ್ದಾಗಿದೆ ಎಂದರು.
ಸಮಾಜ ಸೇವಕರಾದ ರಫೀಕ್ ಮಾಸ್ಟರ್ ಮಾತನಾಡಿ, ಪ್ರತಿಯೊಂದು ಧರ್ಮವೂ ಜಗತ್ತಿಗೆ ಪ್ರೀತಿ, ನಂಬಿಕೆ ಹಾಗೂ ವಿಶ್ವಾಸದ ಮೌಲ್ಯಗಳನ್ನು ನೀಡಿದ್ದು ನಾವು ಇತರರನ್ನು ಕಾಣುವಾಗ ನಮ್ಮ ಕಣ್ಣುಗಳಲ್ಲಿ ಅಪನಂಬಿಕೆಯ ದೃಷ್ಟಿಯನ್ನು ಬದಿಗೊತ್ತಿ ವಿಶ್ವಾಸದಿಂದ ಕಂಡಾಗ ಯಾವುದೇ ರೀತಿಯ ಸಮಸ್ಯೆಗೆ ಅವಕಾಶವಿರುವುದಿಲ್ಲ. ಪ್ರತಿಯೊಬ್ಬರು ಹೃದಯಗಳನ್ನು ಕತ್ತರಿಸುವ ಕತ್ತರಿಯಾಗದೆ ಪರಸ್ಪರ ಬೆಸೆಯುವ ಸೂಜಿ ನೂಲಾಗಬೇಕು. ತಾನು ಬೆಳೆಯುವುದರೊಂದಿಗೆ ಇನ್ನೊಬ್ಬರನ್ನು ಬೆಳೆಸಿದಾಗ ಪ್ರತಿಯೊಂದು ಧರ್ಮದ ಮೌಲ್ಯ ಹೆಚ್ಚಾಗುತ್ತದೆ ಎಂದರು.
ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ತೊಟ್ಟಂ ಇದರ ಗೌರವಾಧ್ಯಕ್ಷ ವಂ. ಡೆನಿಸ್ ಡೆಸಾ ಪ್ರಾಸ್ತಾವಿಕ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವೆಯೊಂದಿಗೆ ಜನರ ಕಷ್ಟಗಳಿಗೆ ದನಿಯಾಗುವ ಮುಳುಗು ತಜ್ಞ ಈಶ್ವರ ಮಲ್ಪೆ ಹಾಗೂ ಅವರ ತಂಡವನ್ನು ಹಾಗೂ ಇತ್ತೀಚೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಮೇಶ್ ತಿಂಗಳಾಯ ಮತ್ತು ರೆಜಿನಾಲ್ಡ್ ಫುರ್ಟಾಡೊ ಇವರನ್ನು ಗೌರವಿಸಲಾಯಿತು.
ಸಿಎಸ್‌ಐ ಎಬನೇಜರ್ ಚರ್ಚ್ ಮಲ್ಪೆ ಇದರ ಸಭಾಪಾಲಕರಾದ ರೆ. ವಿನಯ್ ಸಂದೇಶ್, ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ತೊಟ್ಟಂನ ಉಪಾಧ್ಯಕ್ಷ ಯಾಹ್ಯಾ ನಕ್ವಾ, ತೊಟ್ಟಂ ಚರ್ಚಿನ ಅಂತರ ಧರ್ಮೀಯ ಸಂವಾದ ಆಯೋಗದ ಸಂಚಾಲಕ ಆಗ್ನೆಲ್ ಫೆರ್ನಾಂಡಿಸ್, ಜಮಾತೆ ಇಸ್ಲಾಮಿ ಹಿಂದ್ ಮಲ್ಪೆ ಘಟಕದ ಸಿರಾಜ್, ಕಥೊಲಿಕ್ ಸಭಾ ಕಾರ್ಯದರ್ಶಿ ಶಾಂತಿ ಪಿಕಾರ್ಡೊ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಲೆಸ್ಲಿ ಆರೋಝಾ, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, ಸ್ಥಳೀಯ ಕಾನ್ವೆಂಟಿನ ಸಿಸ್ಟರ್ ಸುಶ್ಮಾ, ಸೌಹಾರ್ದ ಸಮಿತಿ ಹಾಗೂ ಕಥೊಲಿಕ್ ಸಭಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಥೊಲಿಕ್ ಸಭಾ ಅಧ್ಯಕ್ಷರಾದ ವೀಣಾ ಫೆರ್ನಾಂಡಿಸ್ ಸ್ವಾಗತಿಸಿ, ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ತೊಟ್ಟಂನ ಅಧ್ಯಕ್ಷ ರಮೇಶ್ ತಿಂಗಳಾಯ ವಂದಿಸಿದರು. ಲವೀನಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.
ತೊಟ್ಟಂ ಚರ್ಚು, ಸಿಎಸ್‌ಐ ಚರ್ಚ್ ಮಲ್ಪೆ ಹಾಗೂ ಇತರರಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.