ಉಡುಪಿ | ಯಕ್ಷಗಾನ ಕಲಾರಂಗದ 81ನೇ ಮನೆ ಹಸ್ತಾಂತರ
ಉಡುಪಿ, ಡಿ.3: ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ನ ಪ್ರಥಮ ಪಿಯುಸಿ ವಿದ್ಯಾರ್ಥಿ ದಿಶಾನ್ ಗೆ (ಶ್ಯಾಮಲಾ ಮತ್ತು ದೇವೇಂದ್ರ ಇವರ ಪುತ್ರ) ಕಾಪು ತಾಲೂಕಿನ ಕುಂತಳ ನಗರದಲ್ಲಿ ಉಡುಪಿಯ ಡಾ.ರಾಜೇಶ್ವರಿ ಜಿ. ಭಟ್ ತಮ್ಮ ತಂದೆಯವರಾದ ಕೆ.ರಾಮಕೃಷ್ಣ ರಾವ್ ಸಂಸ್ಮರಣೆಯಲ್ಲಿ, ಸುಮಾರು 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ‘ಜಾನಕೀರಾಮ’ ಮನೆಯನ್ನು ಮಂಗಳವಾರ ನಡೆದ ಸರಳ ಸಮಾರಂಭದಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಜಾನಕಿ ಕೆ.ಆರ್.ರಾವ್ ಅವರು ಜ್ಯೋತಿ ಬೆಳಗಿಸಿ ಮನೆಯಯನ್ನು ಉದ್ಘಾಟಿಸಿದರು. ಡಾ. ರಾಜೇಶ್ವರೀ ಜಿ.ಭಟ್ ಅವರು ತಮ್ಮ ಬದುಕು ರೂಪುಗೊಳ್ಳುವಲ್ಲಿ ತಂದೆಯ ವ್ಯಕ್ತಿತ್ವ, ತಾಯಿಯ ಪರಿಶ್ರಮ ಮತ್ತು ಮಾರ್ಗದರ್ಶನವನ್ನು ವಿವರಿಸಿದರು.
ಡಾ.ಗುರುಮೂರ್ತಿ ಅವರು ತೀರಾ ಬಡತನದಲ್ಲಿ ಕಲಿಯುತ್ತಿರುವ ವಿದ್ಯಾಪೋಷಕ್ ನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಲಾರಂಗ ಬದುಕು ಕಟ್ಟಿಕೊಡುತ್ತಿರುವ ಕಾರ್ಯಕ್ಕೆ, ಅದರ ಪಾರದರ್ಶಕ ವ್ಯವಹಾರ, ಕಾರ್ಯಕರ್ತರ ಅರ್ಪಣಾ ಮನೋಭಾವವನ್ನು ಪ್ರಶಂಸಿಸಿದರು.
ಯು.ಎಸ್.ರಾಜಗೋಪಾಲ ಆಚಾರ್ಯರು ದಾನಿಗಳ ವ್ಯಕ್ತಿತ್ವವನ್ನು ಪರಿಚಯಿಸಿದರು. ಡಾ.ಕೆ.ಆರ್.ಗುರುಪ್ರಸಾದ್ ಶುಭಾಶಂಸನೆ ಮಾತುಗಳನ್ನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಲಾರಂಗ ದಂತಹ ಸಂಸ್ಥೆ ಎಲ್ಲಾ ಊರುಗಳಲ್ಲಿದ್ದರೆ ರಾಮರಾಜ್ಯದ ಕನಸು ನನಸಾಗುವದು ಸುಲಭ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಶಕುಂತಲಾ ಭಟ್, ಕಾರ್ತಿಕ್ ಭಟ್, ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ವಿ. ಭಟ್, ವಿ.ಜಿ.ಶೆಟ್ಟಿ, ಕೋಶಾಧಿಕಾರಿ ಕೆ. ಸದಾಶಿವ ರಾವ್, ಜತೆಕಾರ್ಯದರ್ಶಿ ವಿದ್ಯಾಪ್ರಸಾದ್, ಸದಸ್ಯರಾದ ಭುವನಪ್ರಸಾದ ಹೆಗ್ಡೆ, ಎ.ಅನಂತರಾಜ ಉಪಾಧ್ಯ, ಮಂಜುನಾಥ ಹೆಬ್ಬಾರ್, ಕಿಶೋರ್ ಸಿ. ಉದ್ಯಾವರ, ಡಾ. ರಾಜೇಶ ನಾವಡ, ಎ.ಅಜಿತ್ ಕುಮಾರ್,ಪ್ರಭಾಕರ ಬಂಡಿ ಉಪಸ್ಥಿತರಿದ್ದರು.
ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತು ಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.