×
Ad

ಉಡುಪಿಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ : ಭಾರತೀಯ ಸಂಸ್ಕೃತಿಯ ಅನಾವರಣ

Update: 2025-12-13 19:05 IST

ಉಡುಪಿ, ಡಿ.13: ಆಳ್ವಾಸ್ ನುಡಿಸಿರಿ ವಿರಾಸತ್ ಉಡುಪಿ ಘಟಕದ ಆಶ್ರಯದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣ ಸಮೀಪದ ವಾಹನ ನಿಲುಗಡೆ ಆವರಣದ ಶ್ರೀವಿಶ್ವೇಶತೀರ್ಥ ಶ್ರೀಪಾದ ವೇದಿಕೆಯಲ್ಲಿ ಶನಿವಾರ ನಡೆಯಿತು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಮಾತನಾಡಿ, ಶಿಕ್ಷಣದೊಂದಿಗೆ ಸಾಂಸ್ಕೃತಿಕ‌ ಕಾರ್ಯಕ್ರಮಗಳಿಗೂ ಆದ್ಯತೆ ನೀಡುವ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕಲಾವಿದರು ಪ್ರಸ್ತುತಪಡಿಸುವ ಆಳ್ವಾಸ್ ವಿರಾಸತ್ ವೀಕ್ಷಣೆಯಿಂದ ಭಾರತೀಯ ಸಂಸ್ಕೃತಿಯ ದರ್ಶನವಾಗುತ್ತದೆ ಎಂದು ಹೇಳಿದರು.

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಆಳ್ವಾಸ್ ವಿರಾಸತ್ ಮೂಲಕ ಜನತೆಗೆ ಮನರಂಜನೆ ಜೊತೆಗೆ ಉತ್ತಮ ಸಂದೇಶ ನೀಡುವುದು ನಮ್ಮ ಉದ್ದೇಶವಾಗಿದೆ. ಮಕ್ಕಳಿಗೆ ಶಿಕ್ಷಣದೊಂದಿಗೆ ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವ ಕಾರ್ಯವಾಗಬೇಕು. ಅದು ವಿದ್ಯಾ ಸಂಸ್ಥೆಗಳಲ್ಲಿ ನಡೆಯಬೇಕು. ಸೌಂದರ್ಯ ಪ್ರಜ್ಞೆಯುಳ್ಳ ವ್ಯಕ್ತಿ ಕಲೆ, ಸಾಮರಸ್ಯದ ಬದುಕನ್ನು ಪ್ರೀತಿಸುತ್ತಾನೆ. ಆತ ನಿಜವಾದ ದೇಶದ ಸಂಪತ್ತು ಎಂದರು.

ಈ ಸಂದರ್ಭದಲ್ಲಿ ಡಾ.ಮೋಹನ ಆಳ್ವ ಅವರಿಗೆ ಶ್ರೀಕೃಷ್ಣ- ಗೀತಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಡುಪಿ ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.

ಪುತ್ತಿಗೆ ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥ ಸ್ವಾಮೀಜಿ, ಅಮೆರಿಕಾದ ವರ್ಲ್ಡ್ ರಿಲೀಜಿಯಸ್ ಫಾರ್ ಪೀಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ವಿಲಿಯಂ ಎಫ್. ವಿಂಡ್ಲೆ, ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಆಬೀದ್ ಗದ್ಯಾಳ್ ಮುಖ್ಯ ಅತಿಥಿಗಳಾಗಿದ್ದರು.

ಪ್ರಮುಖರಾದ ರಘುಪತಿ ಭಟ್, ಪ್ರಸಾದ್ ರಾಜ್ ಕಾಂಚನ್, ಡಾ.ಕಿರಣ್ ಆಚಾರ್ಯ, ಡಾ.ರವಿರಾಜ್ ಆಚಾರ್ಯ, ಹರಿಪ್ರಸಾದ್ ರೈ, ಸುಪ್ರಸಾದ್ ಶೆಟ್ಟಿ, ಶಂಭು ಶೆಟ್ಟಿ, ನಾಗೇಶ್ ಹೆಗ್ಡೆ, ವಿಶ್ವನಾಥ್ ಶೆಣೈ, ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಶೆಟ್ಟಿ, ಸಾಧು ಸಾಲ್ಯಾನ್, ಗುಜ್ಜಾಡಿ ಪ್ರಭಾಕರ ನಾಯಕ್, ಗಣನಾಥ ಎಕ್ಕಾರು, ಮಠದ ದಿವಾನರಾದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮೊದಲಾದವರು ಉಪಸ್ಥಿತರಿದ್ದರು.

ಆಳ್ವಾಸ್ ನುಡಿಸಿರಿ ವಿರಾಸತ್ ಉಡುಪಿ ಘಟಕದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಭುವನಪ್ರಸಾದ್ ಹೆಗ್ಡೆ ವಂದಿಸಿದರು.

ಸಾಂಸ್ಕೃತಿಕ ವೈಭವದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 500ಕ್ಕೂ ಅಧಿಕ ವಿದ್ಯಾರ್ಥಿ ಕಲಾವಿದರಿಂದ ಭಾರತೀಯ ಕಲಾಪ್ರಕಾರಗಳಾದ ಯೋಗ ದೀಪಿಕಾ, ಶಾಸ್ತ್ರೀಯ ನೃತ್ಯ- ಅಷ್ಟಲಕ್ಷ್ಮಿ, ಬಡಗುತಿಟ್ಟು ಯಕ್ಷಗಾನ, ಶಂಕರಾರ್ಧ ಶರೀರಿಣಿ, ಗುಜರಾತಿನ ದಾಂಡಿಯ ನೃತ್ಯ, ಮಣಿಪುರಿ ಸ್ಟಿಕ್ ಡಾನ್ಸ್, ಮಲ್ಲಕಂಬ ಹಾಗೂ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ವರ್ಷಧಾರೆ, ಪುರುಲಿಯಾ ಸಿಂಹ ನೃತ್ಯ, ತೆಂಕುತಿಟ್ಟು ಯಕ್ಷಗಾನ ಹಿರಣ್ಯಾಕ್ಷ ವಧೆ, ಬೊಂಬೆ ವಿನೋದಾವಳಿಯ ಪ್ರದರ್ಶನ ಕಣ್ಮನ ಸೆಳೆಯಿತು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಆಳ್ವಾಸ್ ವಿದ್ಯಾರ್ಥಿಗಳಿಂದ ಸಿಂಗಾರಿ ಮೇಳ ಫ್ಯೂಷನ್ ನಡೆಯಿತು. ಬೊಂಬೆ ವಿನೋದಾವಳಿಯೊಂದಿಗೆ ಆಕರ್ಷಕ ಸಿಡಿಮದ್ದಿನ ಪ್ರದರ್ಶನ ಆಕರ್ಷಣೀಯ ವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News