×
Ad

ಉಡುಪಿ | ತಲವಾರು ದಾಳಿ ನಡೆಸಿ ಕೊಲೆಗೆ ಯತ್ನ ಪ್ರಕರಣ: ಬಾಲಕ ಸಹಿತ ನಾಲ್ವರ ಬಂಧನ

Update: 2024-06-18 15:09 IST

ಉಡುಪಿ, ಜೂ.18: ಎರಡು ದಿನಗಳ ಹಿಂದೆ ಪುತ್ತೂರಿನ ಬಿರಿಯಾನಿ ಪಾಯಿಂಟ್ ಬಳಿ ನಡೆದ ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿ ಅಪ್ರಾಪ್ತ ವಯಸ್ಸಿನ ಬಾಲಕ ಸೇರಿದಂತೆ ನಾಲ್ವರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಬಡಗುಬೆಟ್ಟು ನಿವಾಸಿ ಪ್ರವೀಣ್(22), ಕಟಪಾಡಿಯ ಅಭಿಷೇಕ್(28), ಪುತ್ತೂರು ಗ್ರಾಮದ ದೇಶ್ರಾಜ್(18) ಬಂಧಿತ ಆರೋಪಿಗಳಾಗಿದೆ. ಇನ್ನೊಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಿಚಾರಣೆ ನಡೆಸಿ ಕಾನೂನಿನಂತೆ ಕ್ರಮ ಜರುಗಿಸಲಾಗಿದ್ದು, ಪ್ರಕರಣ ತನಿಖೆಯಲ್ಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ತಿಳಿಸಿದ್ದಾರೆ. ಜೂ.15ರಂದು ಸೆಲೂನಿನಲ್ಲಿ ಕೆಲಸ ಮಾಡಿಕೊಂಡಿದ್ದ ಪುತ್ತೂರು ಗ್ರಾಮದ ಚರಣ್ ರಾಜ್(18) ಎಂಬವರಿಗೆ ಅಭಿಷೇಕ್ ಕರೆ ಮಾಡಿ, ಶಬರಿ ಎಂಬಾತನ ಬಗ್ಗೆ ಮಾತನಾಡಲು ಪುತ್ತೂರಿನ ಬಿರಿಯಾನಿ ಪಾಯಿಂಟ್ ಬಳಿ ಬರಲು ತಿಳಿಸಿದ್ದನು. ಅದರಂತೆ ಚರಣ್ ರಾಜ್, ತನ್ನ ಸ್ನೇಹಿತರಾದ ಸುಜನ್, ನಾಗರಾಜ್, ಕಾರ್ತಿಕ್, ರಂಜು ಎಂಬವರೊಂದಿಗೆ ರಾತ್ರಿ 9 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಅಲ್ಲಿಗೆ ಹೋಗಿದ್ದರು. ಈ ವೇಳೆ ಪ್ರವೀಣ್, ಅಭಿಷೇಕ್, ದೇಶರಾಜ್ ಮತ್ತು ಇತರರು ಕೈಯಲ್ಲಿ ತಲವಾರಗಳನ್ನು ಹಿಡಿದುಕೊಂಡು ಚರಣ್ ರಾಜ್ ಹಾಗೂ ಸ್ನೇಹಿತರನ್ನು ಕೊಲ್ಲುವ ಉದ್ದೇಶದಿಂದ ತಲವಾರನ್ನು ಬೀಸಿದ್ದು, ಬಿಯರ್ ಬಾಟಲಿಗಳನ್ನು ಕೂಡ ಅವರ ಮೇಲೆ ಎಸೆದು ಹಲ್ಲೆ ಮಾಡಲು ಪ್ರಯತ್ನಿಸಿದ್ದರು. ಚರಣ್ರಾಜ್ ಮತ್ತು ಸ್ನೇಹಿತು ಅಲ್ಲೇ ಬಿಟ್ಟು ಹೋಗಿರುವ ದ್ವಿಚಕ್ರ ವಾಹನಗಳಿಗೆ ಆರೋಪಿಗಳು ಹಾನಿ ಮಾಡಿದ್ದು, ಸ್ಕೂಟಿಯನ್ನು ಅಲ್ಲೇ ದೂಡಿ ಹಾಕಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಘಟನೆಗೆ ಶಬರಿ ಎಂಬಾತನಿಗೆ ಚರಣ್ ಬೈದ ಎಂಬ ಕಾರಣ ಮುಂದಿಟ್ಟುಕೊಂಡು, ಆರೋಪಿಗಳು ಹಳೆ ದ್ವೇಷದಿಂದ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News