ಉಡುಪಿ | ಎರಡನೇ ದಿನವೂ ಮುಂದುವರೆದ ಬೀಡಿ ಕಾರ್ಮಿಕರ ಧರಣಿ
ಉಡುಪಿ, ನ.26: ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಬೀಡಿ ಕಾರ್ಮಿಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ಎರಡನೇ ದಿನವಾದ ಬುಧವಾರವೂ ಮುಂದುವರೆದಿದೆ.
ಧರಣಿಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಿ., ಹತ್ತಾರು ವರ್ಷಗಳ ಕಾಲ ಬೀಡಿ ಉದ್ಯಮದಲ್ಲಿ ದುಡಿದ ಕಾರ್ಮಿಕರ ಬೆವರು ಬೀಡಿ ಮಾಲಕರನ್ನು ಲಾಭದೆಡೆಗೆ ಕೊಂಡೊಯ್ದು ಇಂದು ಮಾಲಕರು ಬೇರೆ ಬೇರೆ ಉದ್ಯಮಗಳನ್ನು ನಡೆಸಿ ಸುಸ್ಥಿತಿಯಲ್ಲಿದ್ದಾರೆ. ಆದರೆ ಅವರ ಕೂಲಿ ಪಾಲನ್ನು ಉಳಿಸಿಕೊಂಡು ಬೀಡಿ ಕಾರ್ಮಿಕರನ್ನು ಬೀದಿ ಪಾಲು ಮಾಡಲಾಗಿದೆ ಎಂದು ಆರೋಪಿಸಿದರು.
ಕಾರ್ಮಿಕರು ದುಡಿದ ಪಾಲು ಪೂರ್ಣವಾಗಿ ಕಾರ್ಮಿಕರಿಗೆ ಸಿಗಬೇಕು ಮತ್ತೆ ಅದರಲ್ಲಿ ಮಾಲಕರು ಒಂದು ಪಾಲು ಕೊಡಬೇಕೆಂದು ಹೇಳುವುದು ಖಂಡನೀಯವಾಗಿದೆ. ಇದು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಕಳೆದ ಎರಡು ದಿನದಿಂದ ಬಡ ಬೀಡಿ ಮಹಿಳಾ ಕಾರ್ಮಿಕರು ರಾತ್ರಿ ನಿದ್ದೆ ಬಿಟ್ಟು ಧರಣಿ ನಡೆಸುತ್ತಿದ್ದರೂ, ಜಿಲ್ಲಾಡಳಿತ ಮೌನವಾಗಿರುವುದು ಅನುಮಾನ ಮೂಡಿಸುವಂತಿದೆ ಎಂದು ಅವರು ತಿಳಿಸಿದರು.
ಧರಣಿಯಲ್ಲಿ ಇಂಟಕ್ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಕಿರಣ್ ಹೆಗ್ಡೆ, ದಲಿತ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಧರಣಿ ಬೆಂಬಲಿಸಿ ಮಾತನಾಡಿದರು. ಉಡುಪಿ ಜಿಲ್ಲಾ ಬೀಡಿ ಫೆಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್.ಕಾಂಚನ್ ಸ್ವಾಗತಿಸಿದರು.
ಬೀಡಿ ಫೆಡರೇಷನ್ ಜಿಲ್ಲಾಧ್ಯಕ್ಷ ಉಮೇಶ್ ಕುಂದರ್, ಬೀಡಿ ಕಾರ್ಮಿಕರ ಮುಖಂಡರಾದ ಬಲ್ಕೀಸ್, ನಳಿನಿ, ಗಿರಿಜಾ, ವಸಂತಿ ಇಂದಿರಾ, ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ, ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ನಾಯಕ್, ಸಿಐಟಿಯು ಜಿಲ್ಲಾಧ್ಯಕ್ಷ ಶಶಿಧರ ಗೊಲ್ಲ, ಬೀಡಿ ಗುತ್ತಿಗೆದಾರ ರಮೇಶ್ ಜತನ್ನ, ಕಾರ್ಕಳ ಸಿಐಟಿಯು ಮುಖಂಡರಾದ ನಾಗೇಶ್ ಆಚಾರ್ಯ, ಮೋಹನ, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಂದ ಉಪಸ್ಥಿತರಿದ್ದರು.
ಶ್ರಮ ಶಕ್ತಿ ನೀತಿ: ಪ್ರತಿ ದಹಿಸಿ ಪ್ರತಿಭಟನೆ
ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಕೇಂದ್ರ ಸರಕಾರದ ಶ್ರಮಶಕ್ತಿ ನೀತಿ -2025 ಕರಡು ಪ್ರತಿಯನ್ನು ದಹಿಸಿ ಪ್ರತಿಭಟಿಸುವ ಸಿಐಟಿಯು ರಾಜ್ಯ ಸಮಿತಿ ಕರೆಯನ್ನು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಸಲಾಯಿತು.
ಸಿಐಟಿಯು ಜಿಲ್ಲಾ ಅಧ್ಯಕ್ಷ ಶಶಿಧರ ಗೊಲ್ಲ ಹಾಗೂ ಇಂಟಕ್ ಜಿಲ್ಲಾಧ್ಯಕ್ಷ ಕಿರಣ್ ಹೆಗ್ಡೆ ಕರಡು ಪ್ರತಿಯನ್ನು ಸುಡುವುದರ ಮೂಲಕ ಮೋದಿ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಿ., ಜಿಲ್ಲಾ ಕೋಶಾಧಿಕಾರಿ ಕವಿರಾಜ್ ಎಸ್.ಕಾಂಚನ್, ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ನಾಯಕ್, ಉಮೇಶ್ ಕುಂದರ್, ಮೋಹನ ಉಡುಪಿ, ಸುನಂದ ಮೊದಲಾದವರು ಉಪಸ್ಥಿತರಿದ್ದರು.