ಉಡುಪಿ: ಸ್ನೇಹಿತ ಹೆಸರಿನಲ್ಲಿ ಕರೆ ಮಾಡಿ ಲಕ್ಷಾಂತರ ರೂ. ಆನ್‌ಲೈನ್ ವಂಚನೆ; ಪ್ರಕರಣ ದಾಖಲು
ಉಡುಪಿ, ಜ.16: ಸ್ನೇಹಿತ ಹೆಸರು ಹೇಳಿಕೊಂಡು ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬರಿಗೆ ಒಂದು ಲಕ್ಷ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ.15ರಂದು ಅಪರಿಚಿತ ವ್ಯಕ್ತಿಯು ತಾನು ಸಂದೀಪ್ ಎಂದು ಹೇಳಿ ಕುಂಜಿಬೆಟ್ಟು ನಿವಾಸಿ ಅಶೋಕ್ ಎಂಬವರಿಗೆ ಕರೆ ಮಾಡಿದ್ದನು. ಅಶೋಕ್, ಈ ಹಿಂದೆ ತನ್ನ ಜೊತೆ ಕೆಲಸ ಮಾಡಿದ್ದ ವ್ಯಕ್ತಿಯ ಹೆಸರು ಕೂಡ ಸಂದೀಪ್ ಆಗಿರುವುದರಿಂದ ಆತನೇ ಇರಬಹುದೆಂದು ಮಾತನಾಡಿದರು. ಆತ ‘ನನ್ನ ಅಣ್ಣನನ್ನು ಹೃದಯ ಸಂಬಂಧಿ ಖಾಯಿಲೆ ಯಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಸ್ಟಂಟ್ ಖರೀದಿಸಲು ನಾನು ಮೆಡಿಕಲ್ ಶಾಪ್‌ಗೆ ಬಂದಿದ್ದೇನೆ. ನನ್ನ ಗೂಗಲ್ ಪೇ ಕಾರ್ಯನಿರ್ವಹಿಸದೇ ಇರುವುದ ರಿಂದ ವೈದ್ಯರಿಗೆ ಹಣವನ್ನು ಕಳುಹಿಸಲು ಆಗುತ್ತಿಲ್ಲ. ನಿಮಗೆ ನಾನು 50,000ರೂ. ಕಳುಹಿಸಿದ್ದೇನೆ ಎಂದು ಹೇಳಿದನು.
ಅಶೋಕ್, ಮೊಬೈಲ್ ಪರಿಶೀಲಿಸಿದಾಗ 50,000ರೂ. ಖಾತೆಗೆ ವರ್ಗಾವಣೆ ಆಗಿರುವ ಸಂದೇಶ ಬಂದಿತ್ತು. ಅಶೋಕ್, ತಮಗೆ 50,000 ರೂ. ಹಣ ಬಂದಿದೆ ಎಂದು ತಿಳಿದು ಆ ಮೊತ್ತವನ್ನು ಅವರ ಹೆಂಡತಿ ಮೊಬೈಲ್‌ನಿಂದ ಗೂಗಲ್ ಪೇ ಮೂಲಕ ವಾಪಸ್ಸು ಕಳುಹಿಸಿದರು. ಫೋನಿನಲ್ಲಿ ಮಾತನಾಡುತ್ತಿರುವಾಗಲೇ ಅದೇ ಸಮಯದಲ್ಲಿ ಆತನು ನಾನು ಇನ್ನೊಮ್ಮೆ 50,000ರೂ. ಕಳುಹಿಸಿರುವುದಾಗಿ ಹೇಳಿದ್ದು, ಅಶೋಕ್ ಚೆಕ್ ಮಾಡಿದಾಗ 50,000ರೂ. ಬಂದಿರುವ ಬಗ್ಗೆ ಮತ್ತೆ ಸಂದೇಶ ಬಂದಿತ್ತು.
ಇದನ್ನು ನಂಬಿದ ಅಶೋಕ್ ಮತ್ತೆ ತನ್ನ ಹೆಂಡತಿ ಗೂಗಲ್ ಪೇಯಿಂದ ಹಣ ಕಳುಹಿಸಿದರು. ಬಳಿಕ ಅಶೋಕ್ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದಾಗ ಅವರಿಗೆ ಯಾವುದೇ ಹಣ ಜಮೆ ಆಗದಿರುವುದು ಕಂಡುಬಂದಿದೆ. ಬಳಿಕ ಸ್ನೇಹಿತ ಸಂದೀಪ್‌ಗೆ ಕರೆ ಮಾಡಿ ವಿಚಾರಿಸಿದಾಗ ನಾನುಕರೆ ಮಾಡಿಲ್ಲ ಎಂದು ಹೇಳಿದರು. ಯಾರೋ ಅಪರಿಚಿತ ಸ್ನೇಹಿತ ಎಂದು ಸುಳ್ಳು ಹೇಳಿಕೊಂಡು ಅಶೋಕ್ ಅವರಿಗೆ ಆನ್‌ಲೈನ್‌ನಲ್ಲಿ ವಂಚನೆ ಮಾಡಿರುವುದಾಗಿ ದೂರಲಾಗಿದೆ.