ಉಡುಪಿ | ಎಪಿಎಂಸಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಆರೋಪ : ಬಿಜೆಪಿ ಮುಖಂಡ ಸಹಿತ ಹಲವರ ವಿರುದ್ಧ ಪ್ರಕರಣ ದಾಖಲು
ಉಡುಪಿ, ಡಿ.13: ಆದಿಉಡುಪಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಎದುರು ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬೆದರಿಕೆ ಹಾಕಿರುವ ಬಗ್ಗೆ ಬಿಜೆಪಿ ಮುಖಂಡ ಸಹಿತ ಹಲವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಪಿಎಂಸಿ ಕಾರ್ಯದರ್ಶಿ ಕೆ.ಪಿ.ಸಂದೇಶ್ ಎಂಬವರು ಡಿ.11ರಂದು ಮಧ್ಯಾಹ್ನ ವೇಳೆ ಸಮಿತಿಯ ಆಡಳಿತ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಬಿಜೆಪಿ ಮುಖಂಡ, ಮಾಜಿ ನಗರಸಭೆ ಸದಸ್ಯ ವಿಜಯ ಕುಮಾರ್ ಕೊಡವೂರು, ಸುಭಾಷಿತ್ ಕುರ್ಮಾ, ಫಯಾಜ್ ಅಹಮ್ಮದ್, ಸುಶಾಂತ್ ನ್ಯಾರಿ, ಪ್ರಭು ಭೀಮನಗೌಡ, ಲಕ್ಷ್ಮಣ, ಚಂದಪ್ಪ ಎಸ್., ರಾಮನಾಥ ಪೈ, ರಾಘವೇಂದ್ರ, ಸಿದ್ಧನಗೌಡ, ಕೃಷ್ಣಪ್ಪ, ಅಂಬರೀಶ ಮೆಣಸಿನಕಾಯಿ, ಕೆ.ಹರೀಶ್ ಭಟ್, ಜಗಳೂರಯ್ಯ, ಪಾಪರಾಜ ಜೆ. ಮತ್ತು ಇತರರು ಏಕಾಏಕಿ ಸಮಿತಿ ಕಚೇರಿ ಒಳಗೆ ಪ್ರವೇಶಿಸಿದರೆನ್ನಲಾಗಿದೆ.
ಈ ವೇಳೆ ಕಚೇರಿಯ ಹೊರಗಡೆ ಬಂದ ಕೆ.ಪಿ.ಸಂದೇಶ್ ಅವರನ್ನು ಆರೋಪಿಗಳು ತಡೆದು ಕಾನೂನು ಬಾಹಿರವಾಗಿ ಕಚೇರಿ ಎದುರುಗಡೆ ಧರಣಿ ಕುಳಿತರು. ನ್ಯಾಯ ಬೇಕು, ಸರಕಾರಿ ಜಾಗ ಉಳಿಸೋಣ, ಕೃಷಿಕರಿಗೆ ನ್ಯಾಯ ಸಿಗಲಿ ಹಾಗೂ ಇತರೆ ಫಲಕಗಳನ್ನು ಹಿಡಿದು ಸಮಿತಿಯ ಆಡಳಿತಾಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ, ಸರಕಾರಿ ಕೆಲಸಕ್ಕೆ ಅಡಚಣೆ ಪಡಿಸಿದರು. ಅಲ್ಲದೆ ಕೆಲವರು ಕೆ.ಪಿ.ಸಂದೇಶ್ ಅವರನ್ನು ಉದ್ದೇಶಿಸಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.