ಉಡುಪಿ ನಗರಸಭೆ ಬಜೆಟ್ ಪೂರ್ವಭಾವಿ ಸಮಾಲೋಚನಾ ಸಭೆ
ರಸ್ತೆ ಅಭಿವೃದ್ಧಿ, ಕ್ಲಾಕ್‌ಟವರ್ ಯೋಜನೆ, ಕಲ್ಸಂಕ ಸಿಗ್ನಲ್ ಸಮಸ್ಯೆ ಪ್ರಸ್ತಾಪ
ಉಡುಪಿ, ಡಿ.17: ಉಡುಪಿ ನಗರಸಭೆಯ 2026-27ನೇ ಸಾಲಿನ ಬಜೆಟ್ ತಯಾರಿ ಬಗ್ಗೆ ನಗರಸಭೆ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಗಳ ವಿಚಾರ ವಿನಿಮಯ ಕುರಿತು ಮೊದಲ ಸುತ್ತಿನ ಪೂರ್ವಭಾವಿ ಸಮಾಲೋಚನಾ ಸಭೆಯು ಬುಧವಾರ ಉಡುಪಿ ನಗರಸಭೆ ಸಭಾಂಗಣದಲ್ಲಿ ಜರಗಿತು.
ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ಸಂಘಸಂಸ್ಥೆಗಳ ಪದಾಧಿಕಾರಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಬಾರಿಯ ಬಜೆಟ್‌ನಲ್ಲಿ ಬನ್ನಂಜೆ ಶ್ರೀನಾರಾಯಣಗುರು ವೃತ್ತದಿಂದ ಬ್ರಹ್ಮಗಿರಿ ವೃತ್ತದವರೆಗಿನ ರಸ್ತೆಯನ್ನು ಧ್ವಿಪಥವಾಗಿ ನಿರ್ಮಿಸಿ ಅಭಿವೃದ್ಧಿ ಪಡಿಸಬೇಕು. ನಗರದ ಕ್ಲಾಕ್ ಟವರ್‌ನಲ್ಲಿರುವ ಗಂಟೆಯನ್ನು ಸರಿಪಡಿಸಬೇಕು. ಚರಂಡಿ ಮೇಲಿನ ಕಿತ್ತು ಹೋಗಿರುವ ಚಪ್ಪಡಿ ಕಲ್ಲನ್ನು ಅಳವಡಿಸಿ ಪಾದಾಚಾರಿಗಳಿಗೆ ನಡೆಯಲು ಅನುಕೂಲ ಮಾಡಿಕೊಡಬೇಕು. ಅನಾಥ ಮೃತದೇಹಗಳ ವಿಲೇವಾರಿಗಾಗಿ ಮೊತ್ತವನ್ನು ಕಾಯಿದಿರಿಸಬೇಕು ಎಂದು ನಗರಸಭೆ ಮಾಜಿ ಸದಸ್ಯ ಶ್ರೀನಿವಾಸ ಶೆಟ್ಟಿ ತೋನ್ಸೆ ಸಭೆಯಲ್ಲಿ ಆಗ್ರಹಿಸಿದರು.
ಚೇಂಬರ್ ಆಫ್ ಕಾಮರ್ಸ್‌ನ ಡಾ.ವಿಜಯೇಂದ್ರ ಮಾತನಾಡಿ, ನಗರದ ಕ್ಲಾಕ್ ಟವರ್‌ನಲ್ಲಿ ಉಡುಪಿಯ ಐತಿಹಾಸಿಕ ಪ್ರಾಮುಖ್ಯತೆಯನ್ನು ಬಿಂಬಿಸುವ ರಚನೆ ಮಾಡುವಂತೆ ಹಲವು ವರ್ಷಗಳ ಹಿಂದೆ ನಗರಸಭೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಈವರೆಗೆ ಅದು ಕೈಗೂಡಲಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಅದಕ್ಕೆ ಹಣ ಮೀಸಲಿರಿಸಬೇಕು. ಅದೇ ರೀತಿ ನಗರದಲ್ಲಿ ಬೀದಿ ವ್ಯಾಪಾರಿಗಳಿಗೆ ನಿಗದಿ ಸ್ಥಳ ಘೋಷಣೆ ಮಾಡಬೇಕು ಎಂದು ತಿಳಿಸಿದರು.
ಬಳಕೆದಾರರ ವೇದಿಕೆಯ ವಿಶ್ವಸ್ಥ ರಾಮ ಭಟ್ ಮಾತನಾಡಿ, ನಗರದ ಹಲವು ಕಡೆಗಳಲ್ಲಿ ಪಾರ್ಕಿಂಗ್ ಸ್ಥಳ ನಿಗದಿಪಡಿಸಿದರೂ, ಅಲ್ಲಿ ಯಾವುದೇ ಬೋರ್ಡ್‌ಗಳನ್ನು ಅಳವಡಿಸಿಲ್ಲ. ಆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.
ನಗರದ ವಾಸಿಗಳಲ್ಲಿ ಬಹುತೇಕ ಮಂದಿ ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸುತ್ತಾ ಬರುತ್ತಿದ್ದಾರೆ. ಆದರೆ ಇನ್ನೂ ಕೆಲವರು 15ವರ್ಷಗಳಿಂದ ತೆರಿಗೆ ಪಾವತಿಸದೆ ಬಾಕಿ ಇರಿಸಿಕೊಂಡಿದ್ದಾರೆ. ಇವರ ಬಗ್ಗೆ ನಗರಸಭೆಗೆ ದೂರು ನೀಡಿದರೂ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ಕಳೆದ 15ದಿನಗಳಿಂದ ತೆರಿಗೆ ಸಂಗ್ರಹದ ಬಗ್ಗೆ ಕಾರ್ಯಾಚರಣೆ ಆರಂಭಿಸಿದ್ದು, ಇದನ್ನು ಮುಂದೆ ಇನ್ನಷ್ಟು ತೀವ್ರಗೊಳಿಸಿ ತೆರಿಗೆಯನ್ನು ಸಂಗ್ರಹಿಸಲಾಗುವುದು ಎಂದು ಭರವಸೆ ನೀಡಿದರು.
ಹಳೆಯ ರಸ್ತೆಗಳ ಮೇಲೆಯೇ ಫೇವರ್‌ಪಿನಿಶ್ ಮಾಡುವುದರಿಂದ ರಸ್ತೆ ಎತ್ತರ ಹೆಚ್ಚುತ್ತಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು ರಸ್ತೆ ಬದಿ ಸವಾರಿ ಮಾಡುವುದು ಅಪಾಯಕಾರಿ ಆಗುತ್ತಿದೆ. ಫೇವರ್ ಫಿನಿಶ್ ಬದಲು ರಸ್ತೆಗಳ ಗುಂಡಿಮುಚ್ಚುವ ಕಾರ್ಯ ಮಾಡಬೇಕು ಎಂದು ನಾಗರಿಕರೊಬ್ಬರು ಸಭೆಯಲ್ಲಿ ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಪೌರಾಯುಕ್ತರು, ರಸ್ತೆಗಳ ಗುಂಡಿ ಮುಚ್ಚುವ ಕಾರ್ಯಕ್ಕೆ 3ಕೋಟಿ ರೂ. ಮೊತ್ತದ ಯೋಜನೆ ತಯಾರಿಸಲಾಗಿದೆ. ಜಿಲ್ಲಾಧಿಕಾರಿಗಳಿಂದ ಮಂಜೂರಾತಿ ಪಡೆದುಕೊಂಡು ಶೀಘ್ರವೇ ಕಾಮಗಾರಿ ಆರಂಭಿಸಿ, ಫ್ರೆಬ್ರವರಿ ತಿಂಗಳೊಳಗೆ ರಸ್ತೆಗಳಲ್ಲಿನ ಗುಂಡಿ ಮುಕ್ತ ನಗರವನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ನಗರಸಭೆ ಪರಿಸರ ಇಂಜಿನಿಯರ್ ರವಿ ಪ್ರಕಾಶ್, ಲೆಕ್ಕಪರಿಶೋಧಕ ಸಿ.ಆರ್.ದೇವಾಡಿಗ ಉಪಸ್ಥಿತರಿದ್ದರು.
‘ಕಲ್ಸಂಕ ಜಂಕ್ಷನ್‌ನಲ್ಲಿ ಕಿರು ಸೇತುವೆ ನಿರ್ಮಾಣ’ :
ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಮಾತನಾಡಿ, ಕಲ್ಸಂಕ ಟ್ರಾಫಿಕ್ ಸಿಗ್ನಲ್‌ನಲ್ಲಿ ಫ್ರೀಲೆಫ್ಟ್ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ ಉಡುಪಿಯಿಂದ ಗುಂಡಿಬೈಲು ಕಡೆ ಹೋಗುವ ಎಡ ಬದಿ ರಸ್ತೆಯನ್ನು ಅಗಲ ಮಾಡಲು ಸೇತುವೆ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿರುವ ಕಲ್ಸಂಕದಲ್ಲಿನ ಮಣಿಪಾಲ ಕಡೆ ಹೋಗುವ ಬಸ್ ನಿಲ್ದಾಣವನ್ನು ಮುಂದಕ್ಕೆ ಸ್ಥಳಾಂತರಿಸಬೇಕು ಎಂದು ಡಾ.ವಿಜಯೇಂದ್ರ ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ಇಲ್ಲಿ ಸೇತುವೆ ನಿರ್ಮಾಣಕ್ಕೆ 40ಲಕ್ಷ ರೂ. ಈಗಾಗಲೇ ಬಿಡುಗಡೆಯಾಗಿದ್ದು, ಮುಂದಿನ ಎರಡು ಮೂರು ದಿನಗಳೊಳಗೆ ಕಾಮಗಾರಿ ಆರಂಭಿಸಿ, 15ದಿನಗಳ ಪೂರ್ಣಗೊಳಿಸಲಾಗುವುದು. ಇದರಿಂದ ಉಡುಪಿ-ಗುಂಡಿಬೈಲು ರಸ್ತೆ ಅಗಲಗೊಂಡು ಫ್ರೀಲೆಫ್ಠ್‌ಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
‘ಸಭೆಯಲ್ಲಿ ಹಲವು ವಿಚಾರಗಳು ಸಾರ್ವಜನಿಕರ ಕಡೆಯಿಂದ ಬಂದಿದ್ದು, ಇದಕ್ಕೆ ಪ್ರಮುಖವಾದ ಬನ್ನಂಜೆ-ಬ್ರಹ್ಮಗಿರಿ ರಸ್ತೆ ಅಗಲೀಕರಣ, ಕ್ಲಾಕ್ ಟವರ್ ಅಭಿವೃದ್ಧಿ, ಅನಾಥ ಶವಸಂಸ್ಕಾರಕ್ಕೆ ಹಣ ಪಾವತಿ, ಶವ ಸಾಗಾಟಕ್ಕೆ ವಾಹನ ಖರೀದಿಯಂತಹ ವಿಚಾರಗಳನ್ನು ಬಜೆಟ್‌ನಲ್ಲಿ ಸೇರಿಸಲು ಕ್ರಮ ಕೈಗೊಳ್ಳಲಾಗುವುದು.’
-ಮಹಾಂತೇಶ್ ಹಂಗರಗಿ, ಪೌರಾಯುಕ್ತರು