ಉಡುಪಿ, ನ.13: ನಗರದ ಸಿಟಿ ಬಸ್ ನಿಲ್ದಾಣದಿಂದ ಸರ್ವಿಸ್ ಬಸ್ ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಯ ಸಮೀಪ ದಲ್ಲಿರುವ ಎತ್ತರದ ತೆಂಗಿನ ಮರವು ಪಾದಚಾರಿಗಳ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಮರವು ರಸ್ತೆ ಯತ್ತ ವಾಲಿಕೊಂಡಿದ್ದು, ಅದರಲ್ಲಿರುವ ಒಣಗಿದ ತೆಂಗಿನ ಕಾಯಿಗಳು ಹಾಗೂ ಒಣಗಿದ ಗರಿಗಳು ಆಗಾಗ್ಗೆ ರಸ್ತೆಗೆ ಉದುರುತ್ತಿವೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರಲ್ಲಿ ಆತಂಕ ಮೂಡಿದೆ.

ಈ ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ಪಾದಚಾರಿಗಳ ಓಡಾಟವೂ ನಿರಂತರ ವಾಗಿರುತ್ತದೆ. ಹಿರಿಯ ನಾಗರಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನಾನಾ ವಯೋಮಾನದವರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಇಂತಹ ಜನನಿಬಿಡ ಪ್ರದೇಶದಲ್ಲಿ ಅಪಾಯದ ಸ್ಥಿತಿಯಲ್ಲಿರುವ ತೆಂಗಿನ ಮರ ಇರುವುದು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಬೇಕಾದ ವಿಷಯ ವಾಗಿದೆ.

ಗಾಳಿಯ ವೇಗಕ್ಕೆ ಅಥವಾ ಮರದ ಒಣಗಿದ ಭಾಗಗಳ ದುರ್ಬಲತೆ ಯಿಂದ ತೆಂಗಿನಕಾಯಿ, ಒಣಗಿದ ಗರಿಗಳು ಉರುಳಿ ಪಾದಚಾರಿಗಳ ತಲೆಯ ಮೇಲೆ ಬಿದ್ದರೆ ಗಂಭೀರ ಗಾಯಗಳಾಗುವ ಸಾಧ್ಯತೆಯಿದೆ. ವಿಶೇಷವಾಗಿ ವಾಹನ ಸಂಚಾರದ ನಡುವೆ ಇಂತಹ ಘಟನೆ ಸಂಭವಿಸಿದರೆ ಪ್ರಾಣಾ ಪಾಯಕ್ಕೂ ಕಾರಣವಾಗಬಹುದು. ಅನಾಹುತ ಸಂಭವಿಸಿದ ಬಳಿಕ ಎಚ್ಚೆತ್ತು ಕೊಳ್ಳುವುದಕ್ಕಿಂತ ಮುನ್ನೆಚ್ಚರಿಕೆ ವಹಿಸುವುದು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿಯಾಗಿದೆ.

ಸಾರ್ವಜನಿಕರ ಸುರಕ್ಷತೆಗಾಗಿ ಸಂಬಂಧಪಟ್ಟ ನಗರಸಭೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರದ ಅಪಾಯದ ಸ್ಥಿತಿಯನ್ನು ಪರಿಶೀಲಿಸಬೇಕು. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, ನಿಯಮಾನುಸಾರ ಅಪಾಯಕಾರಿಯಾಗಿರುವ ಮರವನ್ನು ಕಟಾವು ಮಾಡಿ ತೆರವುಗೊಳಿಸಬೇಕು ಎಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor