×
Ad

ಜನವರಿ ತಿಂಗಳು ಉಡುಪಿ ಜಿಲ್ಲೆಯಲ್ಲಿ ಸಾಂಸ್ಕೃತಿಕ ಉತ್ಸವ ಆಯೋಜನೆ: ಉಡುಪಿ ಡಿಸಿ ಸ್ವರೂಪ

Update: 2025-12-22 21:57 IST

ಉಡುಪಿ, ಡಿ.22: ಜನವರಿ ಎರಡನೇ ವಾರದಲ್ಲಿ ನಗರದಲ್ಲಿ ಸಾಂಸ್ಕೃತಿಕ ಉತ್ಸವ ಆಚರಣೆಗೆ ಅಗತ್ಯವಿರುವ ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಇದರೊಂದಿಗೆ ವಿಜೃಂಭಣೆಯಿಂದ ಅದನ್ನು ಆಚರಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೇಳಿದ್ದಾರೆ.

ಇಂದು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉಡುಪಿ ಸಾಂಸ್ಕೃತಿಕ ಉತ್ಸವ ಆಯೋಜಿಸುವ ಕುರಿತು ಚರ್ಚಿಸಲು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ನಮ್ಮ ನಾಡಿನ ಕಲೆ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವಂತಹ ಅದರಲ್ಲೂ ವಿಶೇಷವಾಗಿ ಯುವಜನತೆಯನ್ನು ಈ ಬಗ್ಗೆ ಉತ್ತೇಜಿಸುವ ರೀತಿಯಲ್ಲಿ ಸಾಂಸ್ಕೃತಿಕ ಉತ್ಸವವನ್ನು ಉಡುಪಿ ನಗರದಲ್ಲಿ ಆಯೋಜಿಸಲು ವ್ಯವಸ್ಥಿತವಾದ ರೂಪುರೇಷೆಗಳನ್ನು ಮಾಡಿಕೊಂಡು ಇಂದಿನಿಂದಲೇ ತಯಾರಿ ನಡೆಸಬೇಕೆಂದು ಸೂಚನೆ ನೀಡಿದರು.

ಉತ್ಸವದ ಅಂಗವಾಗಿ ನಗರದ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಬೇಕು. ಇವುಗಳ ಅಳವಡಿಕೆಗೆ ಖರ್ಚು ವೆಚ್ಚ ಗಳನ್ನು ಭರಿಸಲು ಅನುಕೂಲವಾಗುವಂತೆ ಪ್ರಾಯೋಜಕರನ್ನು ಸಂಪರ್ಕಿಸ ಬೇಕು. ಉತ್ಸವದಲ್ಲಿ ಜಿಲ್ಲೆಯ ಸ್ಥಳೀಯ ಕಲಾವಿದರಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಲು ಅವಕಾಶ ಮಾಡಿಕೊಡಬೇಕು. ಇದರ ಜೊತೆಯಲ್ಲಿ ರಾಜ್ಯ ಹಾಗೂ ದೇಶದ ಹೆಸರಾಂತ ಪ್ರತಿಭಾವಂತ ಕಲಾಕಾರರನ್ನು ಕರೆಸಿ, ಪ್ರದರ್ಶನ ಏರ್ಪಡಿಸಬೇಕೆಂದು ಸಲಹೆ ನೀಡಿದರು.

ಉತ್ಸವದ ಕುರಿತು ಜನಾಕರ್ಷಣೆಗೊಳ್ಳುವಂತೆ ಸಣ್ಣ-ಸಣ್ಣ ವೀಡಿಯೋ ದೃಶ್ಯಗಳನ್ನು ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿದೆಡೆ ಹೆಚ್ಚಿನ ಪ್ರಚಾರ ನೀಡಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಉಪ ಪೊಲೀಸ್ ಅಧೀಕ್ಷಕ ಪ್ರಭು ಡಿ.ಟಿ, ಪೌರಾಯುಕ್ತ ಮಹಾಂತೇಶ್ ಹಂಗರಗಿ, ಲಾಫಿಂಗ್ ವಾಟರ್ ಪ್ರೊಡಕ್ಷನ್‌ನ ಸುನಿಲ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News